ಬೆಂಗಳೂರು,ಫೆ.28-ಆಸ್ತಿ ವಿಚಾರಕ್ಕೆ ಇಬ್ಬರು ಸಹೋದರರ ನಡುವೆ ಜಗಳ ನಡೆದು ತಮ್ಮನೇ ಅಣ್ಣನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬೊಮ್ಮನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ನಾಡಮ್ಮ ಲೇಔಟ್ ನಿವಾಸಿ ಶ್ರೀಕಂಠ(36) ಕೊಲೆಯಾದವರು. ಆರೋಪಿ ತಮ್ಮ ನಾಗೇಂದ್ರ(30) ತಲೆ ಮರೆಸಿಕೊಂಡಿದ್ದು, ಪೊಲೀಸರು ಶೋಧ ಕೈಗೊಂಡಿದ್ದಾರೆ. ಇಂದು ಬೆಳಗ್ಗೆ 11 ಗಂಟೆ ಸುಮಾರಿನಲ್ಲಿ ಈ ಇಬ್ಬರು ಸಹೋದರರ ಮಧ್ಯೆ ಆಸ್ತಿ ವಿಚಾರಕ್ಕೆ ಜಗಳವಾಗಿ ವಿಕೋಪಕ್ಕೆ ತಿರುಗಿದಾಗ ಕೈ-ಕೈ ಮಿಲಾಯಿಸಿಕೊಂಡಿದ್ದಾರೆ.
ಆ ಸಂದರ್ಭದಲ್ಲಿ ತಮ್ಮನಾಗೇಂದ್ರ ಚಾಕುವಿನಿಂದ ಅಣ್ಣಶ್ರೀಕಂಠನಿಗೆ ಇರಿದಿದ್ದಾನೆ. ಗಂಭೀರ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಸುದ್ದಿ ತಿಳಿದು ಬೊಮ್ಮನಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಮಾಹಿತಿಗಳನ್ನು ಪಡೆದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.