ಬೆಂಗಳೂರು,ಆ.31- ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ನೀಡಿದ ಪ್ರಾಸಿಕ್ಯೂಷನ್ ಅರ್ಜಿ ವಿಚಾರಣೆ ಹೈಕೋರ್ಟ್ನಲ್ಲಿ ಮುಂದುವರೆದಿದ್ದು, ರಾಜ್ಯಪಾಲರ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಇಂದು ಸುದೀರ್ಘ ವಾದ ಮಂಡಿಸಿದರು.
ನ್ಯಾ.ನಾಗಪ್ರಸನ್ನ ಅವರ ಏಕಸದಸ್ಯ ಪೀಠದಲ್ಲಿ ನಡೆದ ವಿಚಾರಣಾ ಸಂದರ್ಭದಲ್ಲಿ ತಮ ಸುದೀರ್ಘ ವಾದ ಮಂಡಿಸಿದ ತುಷಾರ್ಮೆಹ್ತಾ
ಅವರು 5 ಅಂಶಗಳನ್ನು ಉಲ್ಲೇಖಿಸಿ, ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್ ಅನ್ನು ಸಮರ್ಥಿಸಿಕೊಂಡರು.
ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವಾಗ ಸಂಪುಟದ ಅಭಿಪ್ರಾಯ ಪುರಸ್ಕರಿಸಿಲ್ಲ ಎಂದು ತಿಳಿಸಿದ್ದಾರೆ. ಮುಡಾ ಹಗರಣದ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ರಾಜ್ಯಪಾಲರು ತನಿಖೆಯ ನಂತರವೇ ತೀರ್ಮಾನ ತೆಗೆದುಕೊಳ್ಳಬೇಕು ಎಂದೇನಿಲ್ಲ. ತನಿಖಾ ಸಂಸ್ಥೆ ನೋಡಿಕೊಳ್ಳುತ್ತದೆ ಎಂದು ಹೇಳಿದರು.
ಸಿಎಂ ವಿರುದ್ಧ ಆರೋಪ ಬಂದಿದೆ, ತನಿಖೆ ಆಗಬೇಕಿದೆ, ಸಿಎಂ ಪರ ವಕೀಲರು ಆತಾಹುತಿ ವಾದ ಮಂಡಿಸುತ್ತಿದ್ದಾರೆ, ಪತ್ನಿ ವಿರುದ್ಧ ಆರೋಪಕ್ಕೆ ಗಂಡನ ಹೊಣೆ ಮಾಡುತ್ತಿದ್ದಾರೆ ಎನ್ನುವುದನ್ನು ಒಪ್ಪುವುದಾದರೆ 17 ಎ ಅವಶ್ಯಕತೆ ಇಲ್ಲ. ದೂರುದಾರ ನೇರವಾಗಿ ತನಿಖಾ ಸಂಸ್ಥೆ ಬಳಿ ಹೋಗಬಹುದಿತ್ತು. 17 ಎ ಅಡಿಯಲ್ಲಿ ತನಿಖೆಗೆ ಮಾತ್ರ ಅನುಮತಿ ನೀಡಲಾಗಿದೆ. ಬಿಎನ್ಎಸ್ ಕಾಯ್ದೆಯಡಿ ತನಿಖೆಗೆ ಕೇಳಲಾಗಿದೆ ಎಂದು ತುಷಾರ್ ಮೆಹ್ತಾ ತಮ ವಾದ ಮಂಡಿಸಿದರು.
ರಾಜ್ಯಪಾಲರ ಶೋಕಾಸ್ ನೋಟಿಸ್ಗೆ ಮುಖ್ಯಮಂತ್ರಿ ಉತ್ತರಿಸಿದ್ದಾರೆ. ಕ್ಯಾಬಿನೆಟ್ ಸಲಹೆ, ದೂರುದಾರರ ಅರ್ಜಿ ಎಲ್ಲವನ್ನೂ ಪರಿಗಣಿಸಿ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಆದೇಶ ನೀಡಿದ್ದಾರೆ. ಲಿಖಿತ ದೂರು ಆಧರಿಸಿ ತನಿಖೆಗೆ ಅನುಮತಿ ನೀಡಿದ್ದಾರೆ. ಇಲ್ಲಿ ರಾಜ್ಯಪಾಲರು ತಮ ವಿವೇಚನೆ ಬಳಸಿ ಆದೇಶ ನೀಡಿದ್ದಾರೆ. 17 ಎ ಬಳಕೆ ಬಗ್ಗೆ ಸುಪ್ರೀಂ ಕೋರ್ಟ್ ಹಲವು ತೀರ್ಪು ನೀಡಿದೆ. ಈ ಕಾಯ್ದೆ ಬಳಸುವ ಬಗ್ಗೆ ಅನುಮತಿ ನೀಡುವಾಗ ವಿವರಣೆ ನೀಡಬೇಕೆಂದೇನಿಲ್ಲ ಎಂದು ಹೇಳಿದರು.
ಈ ಸೆಕ್ಷನ್ನಡಿಯಲ್ಲಿ ಶಿಕ್ಷೆ ವಿಧಿಸಬೇಕು ಎಂದು ರಾಜ್ಯಪಾಲರು ಸೂಚಿಸಿಲ್ಲ, ಕೇವಲ ತನಿಖೆಗೆ ಅವಕಾಶ ನೀಡಲಾಗಿದೆ. ಯಾವುದೇ ದೂರಿನಲ್ಲಿ ಸಂದೇಹ ಬಂದರೆ ರಾಜ್ಯಪಾಲರು ತನಿಖೆಗೆ ಆದೇಶಿಸಬಹುದು. ರಾಜ್ಯಪಾಲರಿಗೆ ತನಿಖೆಯ ಅವಶ್ಯಕತೆ ಇದೆ ಎಂದೆನಿಸಿದರೆ ಆದೇಶಿಸಬಹುದು. ಇದು ಅವರ ಹಕ್ಕು ಮಾತ್ರ ಅಲ್ಲ, ಕರ್ತವ್ಯವೂ ಆಗಿದೆ. ಇದು ಮುಖ್ಯಮಂತ್ರಿ ಹಾಗೂ ರಾಜ್ಯಪಾಲರ ನಡುವಿನ ಪ್ರಕರಣವಲ್ಲ ಎಂದು ಮೆಹ್ತಾ ವಾದಿಸಿದರು.
ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವ ಸಂಪೂರ್ಣ ಆದೇಶವನ್ನು ತಮ ವಾದದ ಸಂದರ್ಭದಲ್ಲಿ ಓದಿದರು.
ಎಜೆ ಅಭಿಪ್ರಾಯ, ಕ್ಯಾಬಿನೇಟ್ ನಿರ್ಣಯ ತಮ ಅಭಿಪ್ರಾಯ ಎಂದು ಮುಖ್ಯಮಂತ್ರಿಗಳು ತಮ ಅಭಿಪ್ರಾಯದಲ್ಲಿ ತಿಳಿಸಿದ್ದಾರೆ. ಸಿಎಂ ಕೂಡ ತಮ ವಿವೇಚನವನ್ನು ಬಳಸಿಲ್ಲ ಎಂದರು.
ಒಬ್ಬರ ದೂರಿಗೆ ಶೋಕಾಸ್ ನೋಟಿಸ್ ನೀಡಿದಾಕ್ಷಣ ಉಳಿದವರ ದೂರಿಗೂ ಶೋಕಾಸ್ ನೋಟಿಸ್ ನೀಡಬೇಕೆಂದೇನಿಲ್ಲ. ಹೀಗಾಗಿಯೇ ಉಳಿದವರ ದೂರಿಗೆ ಶೋಕಾಸ್ ನೋಟಿಸ್ ನೀಡಿಲ್ಲ. ದೂರುದಾರರಾದ ಅಬ್ರಹಾಂ ದೂರಿಗೂ ಶೋಕಾಸ್ ನೋಟಿಸ್ ಕಡ್ಡಾಯವಾಗಿರಲಿಲ್ಲ.
ಸಂಪುಟದ ಸಲಹೆಯನ್ನು ಪರಿಗಣಿಸುವ ಅಗತ್ಯ ರಾಜ್ಯಪಾಲರಿಗೆ ಇಲ್ಲ. ಸಂಪುಟದ ಸದಸ್ಯರನ್ನು ಮುಖ್ಯಮಂತ್ರಿಗಳು ನೇಮಿಸುತ್ತಾರೆ. ಮುಖ್ಯಮಂತ್ರಿಗಳು ಆಯ್ಕೆ ಮಾಡುವ ಸಚಿವರು ಸಂಪುಟದ ಸದಸ್ಯರಾಗಿರುತ್ತಾರೆ. ಅಂತಹ ಸಂಪುಟ ಸದಸ್ಯರ ನಿರ್ಣಯಕ್ಕೆ ಮಹತ್ವ ನೀಡುವ ಅಗತ್ಯವಿರುವುದಿಲ್ಲ. ಅವರು ನೇಮಿಸಿದ ವ್ಯಕ್ತಿಯೇ ಸಂಪುಟದ ನೇತೃತ್ವ ವಹಿಸಿ ನೀಡಿರುವ ಸಲಹೆಯನ್ನು ರಾಜ್ಯಪಾಲರು ಪರಿಗಣಿಸಬೇಕೆಂದೇನಿಲ್ಲ ಎಂದು ತುಷಾರ್ ಮೆಹ್ತಾ ಪ್ರಬಲ ವಾದ ಮಂಡಿಸಿದರು.
ರಾಜ್ಯಪಾಲರು ಅಪರೂಪದ ಸಂದರ್ಭದಲ್ಲಿ ಸ್ವತಂತ್ರ್ಯ ವಿವೇಚನೆ ಬಳಸಬಹುದಾಗಿದೆ ಎಂದು ಮಧ್ಯಪ್ರದೇಶದ ಪ್ರಕರಣವನ್ನು ಉಲ್ಲೇಖಿಸಿದರು. ಈ ಪ್ರಾಸಿಕ್ಯೂಷನ್ ನೀಡಿದ ಪ್ರಕರಣದಲ್ಲಿ ರಾಜ್ಯಪಾಲರು ತರಾತುರಿ ನಿರ್ಣಯ ಕೈಗೊಂಡಿಲ್ಲ.
ಎಲ್ಲವನ್ನೂ ಅಧ್ಯಯನ ಮಾಡಿ, ನಿರ್ಣಯಿಸಿ ಅನುಮತಿ ನೀಡಿದ್ದಾರೆ ಎಂದು ಹೈ ಕೋರ್ಟ್ ಗಮನಕ್ಕೆ ತಂದರು.ದೂರುದಾರ ಸ್ನೇಹಮಯಿ ಕೃಷ್ಣ ಪರ ಹಿರಿಯ ವಕೀಲ ಮಣೀಂದರ್ ಸಿಂಗ್ ವಾದ ಮಂಡಿಸಿದರು. ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ನಾಗಪ್ರಸನ್ನ ಅವರು ಮಧ್ಯಾಹ್ನಕ್ಕೆ ಮುಂದೂಡಿದರು.