ಕೋಲ್ಕತ್ತಾ, ಏ.12– ವಕ್ಸ್ (ತಿದ್ದುಪಡಿ) ಕಾಯ್ದೆಯ ವಿರುದ್ಧ ನಡೆದ ಪ್ರತಿಭಟನೆಯರ ವೇಳೆ ಮುಸ್ಲಿಂ ಪ್ರಾಬಲ್ಯದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಪೊಲೀಸರು 110ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ.
ಮುರ್ಷಿದಾಬಾದ್ ಜಿಲ್ಲೆಯಲ್ಲಿ ವಕ್ಸ್ (ತಿದ್ದುಪಡಿ) ಕಾಯಿದೆ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆ ಇಂದು ಕೂಡ ಮುಂದುವರೆದಿದೆ. ಪ್ರತಿಭಟನಾಕಾರರು ಪೊಲೀಸ್ ವಾಹನಗಳು ಮತ್ತು ಬಳಿಗೆ ಬೆಂಕಿ ಹಚ್ಚಿದ್ದಾರೆ. ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಸುಟಿ ಮತ್ತು ಸಂಸರ್ಗಂಜನ್ನಲ್ಲಿ ಹೆದ್ದಾರಿತಡೆದು ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ.
ಅಷ್ಟೇ ಅಲ್ಲದೆ ರೈಲ್ವೆ ಹಳಿಗಳನ್ನು ತಡೆದು ರೈಲುಗಳನ್ನು ಗುರಿಯಾಗಿಸಿಕೊಂಡು ಕಲ್ಲು ತೂರಾಟ ನಡೆಸಿದ್ದಾರೆ. ಇದರೆ ಬೆನ್ನಲ್ಲೇ ಭಾರತೀಯ ರೈಲ್ವೆ ಎರಡು ರೈಲು ಸಂಚಾರವನ್ನು ರದ್ದುಗೊಳಿಸಿದೆ ಎಂದು ವರದಿಯಾಗಿದೆ.
ಪ್ರತಿಭಟನಾಕಾರರು ತೃಣಮೂಲ ಕಾಂಗ್ರೆಸ್ ಸ್ಥಳೀಯ ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ. ಇದರಿಂದಾಗಿ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಸಿಡಿಸಿ ಲಾಠಿ ಪ್ರಹಾರ ನಡೆಸಿದ್ದಾರೆ.
ಜಂಗಿಪುರದ ಸುತಿ ಮತ್ತು ಸಂಸರ್ಗಂಚ್ ಪ್ರದೇಶಗಳಲ್ಲಿ ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಸಹಜ ಸ್ಥಿತಿಗೆ ಮರಳಿದೆ. ಸ್ಥಳದಲ್ಲಿ ಹೆಚ್ಚುವರಿಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಪಶ್ಚಿಮ ಬಂಗಾಳ ಪೊಲೀಸರು ಮಾಹಿತಿ ನೀಡಿದ್ದಾರೆ.
ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಇಂದು ಕೂಡ ಪರಿಸ್ಥಿತಿ ಉದ್ವಿಗ್ನವಾಗಿತ್ತು. ಹಿಂಸಾಚಾರ ನಡೆದ ಅತ್ಯಂತ ಹೆಚ್ಚು ಹಾನಿಗೊಳಗಾದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ನಿಷೇಧಾಜ್ಞೆಗಳನ್ನು ವಿಧಿಸಲಾಗಿದೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಪ್ರತಿಭಟನೆಯ ಕಾವು ಮಾಲ್ಟಾ, ಮುರ್ಷಿದಾಬಾದ್, ದಕ್ಷಿಣ 24 ಪರಗಣಗಳು ಮತ್ತು ಹೂಗ್ಲಿ ಜಿಲ್ಲೆಗಳಲ್ಲಿ ವ್ಯಾಪಿಸಿತ್ತು. ಈ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯಾಚರಣೆ ಕೈಗೊಂಡಿದ್ದು, ಮುರ್ಷಿದಾಬಾದ್ ಒಂದರಲ್ಲೇ 110 ಮಂದಿಯನ್ನು ಬಂಧಿಸಲಾಗಿದೆ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸುಮಾರು 70 ಜನರನ್ನು ಸುಟಿಯಿಂದ ಮತ್ತು 41 ಜನರನ್ನು ಸಂಸರ್ ಗಂಜ್ನಿಂದ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸುತಿ ಮತ್ತು ಸಮ್ಪರ್ಗೆಂಜ್ ಪ್ರದೇಶಗಳಲ್ಲಿ ಪೊಲೀಸರ ಗಸ್ತು ಹಾಕಲಾಗಿದೆ. ಯಾರಿಗೂ ಎಲ್ಲಿಯೂ ಮತ್ತೆ ಗುಂಪುಗೂಡಲು ಅವಕಾಶವಿಲ್ಲ, ಕಾನೂನು ಮತ್ತು ಸುವ್ಯವಸ್ಥೆಯನ್ನು ಅಡ್ಡಿಪಡಿಸುವ ಯಾವುದೇ ಪ್ರಯತ್ನವನ್ನು ನಾವು ಅನುಮತಿಸುವುದಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿನ ವದಂತಿಗಳಿಗೆ ಗಮನ ಕೊಡಬೇಡಿ ಎಂದು ಜನರಿಗೆ ಮನವಿ ಮಾಡಿದ್ದಾರೆ.
ಸುತಿಯಲ್ಲಿ ನಡೆದ ಘರ್ಷಣೆಯ ಸಂದರ್ಭದಲ್ಲಿ ಪೊಲೀಸರು ಗುಂಡು ಹಾರಿಸಿದ್ದರಿಂದ ಗಾಯಗೊಂಡ ಹದಿಹರೆಯದ ಹುಡುಗನನ್ನು ಕೋಲ್ಕತ್ತಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಖಂಡನೆ: ಇದನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ, ಮಮತಾ ಬ್ಯಾನರ್ಜಿ ಸರ್ಕಾರವು ಪರಿಸ್ಥಿತಿಯನ್ನು ನಿಭಾಯಿಸಲು ಅಸಮರ್ಥರಾಗಿದ್ದರೆ ಕೇಂದ್ರದಿಂದ ನೆರವು ಪಡೆಯಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ಪ್ರತಿಭಟನೆಯ ಕೃತ್ಯವಲ್ಲ, ಬದಲಿಗೆ ಪೂರ್ವಯೋಜಿತ ಹಿಂಸಾಚಾರ, ಪ್ರಜಾಪ್ರಭುತ್ವ ಮತ್ತು ಆಡಳಿತದ ಮೇಲಿನ ದಾಳಿ ಎಂದು ತಿಳಿಯಲಿ, ಜಿಹಾದಿ ಶಕ್ತಿಗಳು ತಮ್ಮ ಪ್ರಾಬಲ್ಯವನ್ನು ಪ್ರತಿಪಾದಿಸಲು ಮತ್ತು ನಮ್ಮ ಸಮಾಜದ ಇತರ ಸಮುದಾಯಗಳಲ್ಲಿ ಭಯವನ್ನು ಬಿತ್ತಲು ಅವ್ಯವಸ್ಥೆಯನ್ನು ಹರಡಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಭಿನ್ನಾಭಿಪ್ರಾಯದ ಸುಳ್ಳುನೆಪದಲ್ಲಿ ಸಾರ್ವಜನಿಕ ಆಸ್ತಿಯನ್ನು ನಾಶಪಡಿಸಲಾಗಿದೆ. ಭಯ ಮತ್ತು ಬೆದರಿಕೆಯ ವಾತಾವರಣವನ್ನು ಸೃಷ್ಟಿಸಲಾಗಿದೆ. ಮಮತಾ ಬ್ಯಾನರ್ಜಿ ಸರ್ಕಾರದ ಮೌನವು ಕಿವುಡಾಗುತ್ತಿದೆ. ಇದು ಸಂಶಯ ಮೂಡಿಸಿದೆ ಎಂದು ಅವರು ಆರೋಪಿಸಿದ್ದಾರೆ.