ಕೋಲ್ಕತ್ತ ಎ.13- ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನ ಮೇಳ ನಡೆದ ಹಿಂಸಾಚಾರದ ಬಳಿಕ ಪಶ್ಚಿಮ ಬಂಗಾಳದ ಮುರ್ಷಿದಾಬಾದ `ನಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳನ್ನು ನಿಯೋಜಿಸುವಂತೆ ಕೊಲ್ಕತ್ತ ಹೈಕೋರ್ಟ್ ಆದೇಶವನ್ನು ನೀಡಿದೆ.
ಮುರ್ಷಿದಾಬಾದ್‌ನಲ್ಲಿ ಸ್ಥಳೀಯವಾಗಿ ಲಭ್ಯವಿರುವ ಸುಮಾರು 300 ಬಿಎಸ್ಎಫ್ ಸಿಬ್ಬಂದಿಗಳ ಜೊತೆಗೆ ಐದು ಹೆಚ್ಚುವರಿ ತುಕಡಿಗಳನ್ನು ನಿಯೋಜಿಸಲಾಗಿದೆ. ರಾಜ್ಯ ಸರ್ಕಾರದ ಕೋರಿಕೆಯ ಮೇರೆಗೆ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ( ಎಂಎಚ್ ಎ) ಹೇಳಿಕೆಯಲ್ಲಿ ತಿಳಿಸಿದೆ.
ನ್ಯಾಯಮೂರ್ತಿಗಳಾದ ಸೌಮನ್ ಸೇನ್ ಮತ್ತು ರಾಜಾ ಬಸು ಚೌಧರಿ ಅವರ ಪೀಠ, ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳು ಸಮರ್ಪಕವಾಗಿಲ್ಲ, ಗಲಭೆಕೋರರನ್ನು ಬಂಧಿಸಲು ಕ್ರಮ ಕೈಗೊಳ್ಳಬೇಕು. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಕಣ್ಣು ಮುಚ್ಚಿ ಕೂತಿರಲು ಸಾಧ್ಯವಿಲ್ಲ. ನಾಗರಿಕರಿಗೆ ಸೂಕ್ತ ಭದ್ರತೆ ಮತ್ತು ರಕ್ಷಣೆ ನೀಡಬೇಕಾದ್ದು ಸರ್ಕಾರದ ಕರ್ತವ್ಯ. ಈ ಪ್ರದೇಶದಲ್ಲಿ ಶಾಂತಿ ನೆಲಿಸುವಂತೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ.
ಬಿಜೆಪಿ ನಾಯಕ ಸುವೇಂದು ಅಧಿಕಾರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದು, ಹಿಂಸಾಚಾರವನ್ನು ತಡೆಯಲು ಕೇಂದ್ರ ಸಶಸ್ತ್ರ ಪಡೆಗಳ ನಿಯೋಜನೆಗೆ ಆಗ್ರಹಿಸಿತ್ತು. ಅರ್ಜಿಯು ರಾಜಕೀಯ ಪ್ರೇರಿತ ಅರ್ಜಿ ಎಂದು ವಾದಿಸಿದ ರಾಜ್ಯ ಸರ್ಕಾರ, ಹಿಂಸಾಚಾರವನ್ನು ನಿಯಂತ್ರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.
ಶುಕ್ರವಾರದ ಪ್ರಾರ್ಥನೆಯ ನಂತರ ಭುಗಿಲೆದ್ದ ಹಿಂಸಾಚಾರ ಮುರ್ಷಿದಾಬಾದ್ ಜಿಲ್ಲೆಯ ಹಲವು ಭಾಗಗಳಿಗೆ ವ್ಯಾಪಿಸಿದ್ದು, ಅಪಾರ ಪ್ರಮಾಣದ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಾಗಿವೆ. ಕಳೆದ ರಾತ್ರಿ ಪೊಲೀಸರು, ಅರೆಸೇನಾ ಪಡೆಗಳು ಸಂಪೂರ್ಣ ಗಸ್ತು ತಿರುಗಿದ್ದು, ಸತಿ, ಧುಲಿಯನ್, ಸಂಸರ್ಗಂಜ್ ಮತ್ತು ಜಂಗಿಪುರ ಪ್ರದೇಶಗಳಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿವೆ. ಆದಾಗ್ಯೂ ಹಿಂಸಾಚಾರ ಪೀಡಿತ ಮುರ್ಷಿದಾಬಾದ್‌ನಲ್ಲಿ ಸ್ಥಳೀಯವಾಗಿ ಲಭ್ಯವಿರುವ ಸುಮಾರು 300 ಬಿಎಸ್ಎಫ್ ಸಿಬ್ಬಂದಿಯಲ್ಲದೆ, ಪಶ್ಚಿಮ ಬಂಗಾಳ ಸರ್ಕಾರದ ಕೋರಿಕೆಯ ಮೇರೆಗೆ ಇನ್ನೂ ಕಂಪನಿಗಳನ್ನು ನಿಯೋಜಿಸಲಾಗಿದೆ.
ಮುರ್ಷಿದಾಬಾದ್, ಮಾಲ್ವಾ, ದಕ್ಷಿಣ 24 ಪರಗಣ ಮತ್ತು ಹೂಗಿ ಜಿಲ್ಲೆಗಳಲ್ಲಿ ನಡೆದ ಹಿಂಸಾಚಾರದ ಸಂದರ್ಭದಲ್ಲಿ ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಲಾಯಿತು, ಭದ್ರತಾ ಪಡೆಗಳ ಮೇಲೆ ಕಲ್ಲು ತೂರಲಾಯಿತು ಮತ್ತು ರಸ್ತೆಗಳನ್ನು ನಿರ್ಬಂಧಿಸಲಾಯಿತು. ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಮಾತನಾಡಿ, ರಾಜ್ಯದಲ್ಲಿ ಹಿಂದೂಗಳು ಸುರಕ್ಷಿತವಾಗಿಲ್ಲ ಎಂದು ಆರೋಪಿಸಿದ್ದು, ಮತ್ತೊಂದೆಡೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶಾಂತಿಗಾಗಿ ಮನವಿ ಮಾಡಿದರು ಮತ್ತು ಕೆಲವು ರಾಜಕೀಯ ಪಕ್ಷಗಳು ರಾಜಕೀಯ ಲಾಭಕ್ಕಾಗಿ ಧರ್ಮವನ್ನು ದುರುಪಯೋಗಪಡಿಸಿ ಕೊಳ್ಳಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಳದ ಮುರ್ಷಿದಾಬಾದಲ್ಲಿ ವಕ್ಸ್ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಭುಗಿಲೆದ್ದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಕನಿಷ್ಠ ಮೂವರು ಮೃತಪಟ್ಟಿದ್ದಾರೆ. ಪೊಲೀಸ್ ಸಿಬ್ಬಂದಿ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿ 138ಕ್ಕೂ ಅಧಿಕ ಜನರನ್ನು ಬಂಧಿಸಿದ್ದಾರೆ.
ಹಿಂಸಾಚಾರದ ಬಗ್ಗೆ ಮೋಹನ್ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಅವರೊಂದಿಗೆ ವೀಡಿಯೊ ಕಾನ್ಸರನ್ಸ್ ನಡೆಸಿದ್ದಾರೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುವಂತೆ ಮತ್ತು ಸಾಧ್ಯವಾದಷ್ಟು ಬೇಗ ಸಾಮಾನ್ಯ ಸ್ಥಿತಿಗೆ ಮರಳಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ಕೊಟ್ಟಿದ್ದಾರೆ. ಕೇಂದ್ರವು ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಎಂದು ಗೃಹ ಕಾರ್ಯದರ್ಶಿ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಸಾಧ್ಯವಿರುವ ಎಲ್ಲ ಸಹಾಯವನ್ನು ಮಾಡುವುದಾಗಿ ಭರವಸೆ ನೀಡಿರುವುದಾಗಿ ಹೇಳಿಕೆಯಲ್ಲಿ ತಿಳಿಸಲಾಗಿದೆ. ಉದ್ವಿಗ್ನ ಪರಿಸ್ಥಿತಿಯ ಬಗ್ಗೆ ಡಿಜಿಪಿ ರಾಜೀವ್ ಕುಮಾರ್ ಗೃಹ ಕಾರ್ಯದರ್ಶಿಗೆ ಮಾಹಿತಿ ನೀಡಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ತೀವ್ರವಾಗಿ ಮೇಲ್ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಸ್ಥಳೀಯವಾಗಿ ನಿಯೋಜಿಸಲಾದ ಬಿಎಸ್‌ಎಫ್ ಪಡೆಗಳು ಸಹಾಯ ಮಾಡಿದ್ದಾರೆ ಮತ್ತು ಹಿಂಸಾಚಾರಕ್ಕೆ ಸಂಬಂಧಿಸಿದಂತೆ 150ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಪ್ರತಿಭಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಮತಾ ಬ್ಯಾನರ್ಜಿ, ಈ ಕಾನೂನನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ರಾಜ್ಯ ಸರ್ಕಾರವಲ್ಲ ಎಂದಿದ್ದಾರೆ. ನಾವು ಕಾನೂನನ್ನು ರಚನೆ ಮಾಡಿಲ್ಲ, ಅನೇಕರು ಕಾನೂನು ಬಗ್ಗೆ ಆಕ್ರೋಶಗೊಂಡಿದ್ದಾರೆ. ಕಾನೂನನ್ನು ಕೇಂದ್ರ ಸರ್ಕಾರ ಮಾಡಿದೆ. ಆದ್ದರಿಂದ, ನೀವು ಬಯಸುವ ಉತ್ತರವನ್ನು ಕೇಂದ್ರ ಸರ್ಕಾರದಿಂದ ಪಡೆಯಬೇಕು. ಈ ವಿಷಯದ ಬಗ್ಗೆ ನಾವು ನಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದೇವೆ, ಕಾಯ್ದೆಗೆ ನಾವು ಬೆಂಬಲ ಕೊಡುವುದಿಲ್ಲ, ಕಾನೂನನ್ನು ನಮ್ಮ ರಾಜ್ಯದಲ್ಲಿ ಜಾರಿಗೆ ತರಲಾಗುವುದಿಲ್ಲ, ಹಾಗಾದರೆ ಗಲಭೆ ಮಾಡುತ್ತಿರುವುದೇಕೆ? ಎಂದು ಪ್ರಶ್ನೆ ಮಾಡಿದ್ದಾರೆ.