ಬೆಂಗಳೂರು, ಅ.4- ಇಲಾಖೆಗಳಲ್ಲಿ ಆಗುತ್ತಿರುವ ತಾರತಮ್ಯ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರಾಮ ಪಂಚಾಯಿತಿ ಪಿಡಿಓಗಳು ಹಾಗೂ ಕಾರ್ಯದರ್ಶಿಗಳು ನಡೆಸುತ್ತಿರುವ ಹೋರಾಟ ತೀವ್ರಗೊಂಡಿದೆ.
ನಗರದ ಫ್ರೀಡಂಫಾರ್ಕ್‌ನಲ್ಲಿ ರಾಜ್ಯದ ನಾನಾಕಡೆಯಿಂದ ಬಂದಿರುವ ಸಾವಿರಾರು ಮಂದಿ ಸರ್ಕಾರದ ಧೋರಣೆಯನ್ನು ಕಟುವಾಗಿ ಟೀಕಿಸಿದ್ದು, ನಮ ಭಾವನೆಗಳಿಗೆ ಮತ್ತು ಬೇಡಿಕೆಗಳಿಗೆ ಸ್ಪಂದಿಸದ ಹೊರತು ಹೋರಾಟ ನಿಲ್ಲುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ನಮದು ಶಾಂತಿಯುತ ಹೋರಾಟ. ನಮ ಹಕ್ಕಿನ ಬೇಡಿಕೆಯಾಗಿದ್ದು, ಇದನ್ನು ಸಹಾನುಭೂತಿಯಿಂದ ಕೇಳಿಸಿಕೊಳ್ಳದೆ ಇಲಾಖೆ ಅಧಿಕಾರಿಗಳು ಜಾರಿಕೊಳ್ಳುತ್ತಿದ್ದಾರೆ.ಅತ್ತ ನಾವು ಎಷ್ಟೇ ಬಾರಿ ಮನವಿ ಸಲ್ಲಿಸಿದರೂ ಅದನ್ನು ಕಸದ ಬುಟ್ಟಿಗೆ ಎಸೆದು ನಮನ್ನು ಕೀಳಾಗಿ ಕಾಣುತ್ತಿದ್ದಾರೆ ಎಂದು ಇದಕ್ಕೆ ತಾರ್ಕಿಕ ಅಂತ್ಯ ಕಾಣಿಸುವ ನಿಟ್ಟಿನಲ್ಲಿ ಹೋರಾಟದ ಹಾದಿ ಅನಿವಾರ್ಯವಾಗಿತ್ತು ಎಂದು ಗ್ರಾಮಪಂಚಾಯಿತಿ ಸದಸ್ಯರ ಒಕ್ಕೂಟದ ಅಧ್ಯಕ್ಷ ಕಾಡಾಶೆಟ್ಟಿಹಳ್ಳಿ ಸತೀಶ್ ಹೇಳಿದ್ದಾರೆ.
ಯಾವುದೇ ಸೂಚನೆ ನೀಡದೆ ವರ್ಗಾವಣೆ ಮಾಡಲಾಗುತ್ತಿದೆ. ಬಡತಿಯಲ್ಲೂ ಅನ್ಯಾಯವಾಗುತ್ತಿದೆ. ನಿರಂತರ ಕೆಲಸರಜೆ ನೀಡದೆ ಸತಾಯಿಸುವುದೂ ಸೇರಿದಂತೆ ಹಲವಾರು ನಮ ಬೇಡಿಕೆ ದೂರು-ದುಮಾನಗಳನ್ನು ಸಚಿವರ ಗಮನಕ್ಕೆ ತಂದಿದ್ದೇವೆ.
ಬಹುದಿನದ ಬೇಡಿಕೆಯಾದ ಖಾಲಿ ಹುದ್ದೆಗಳ ಭರ್ತಿ, ಪಿಡಿಒ ಹುದ್ದೆಗಳನ್ನು ಬಿ ಗ್ರೂಪ್‌ಗೆ ಸೇರ್ಪಡೆಗೊಳಿಸುವುದೂ ಸೇರಿದಂತೆ ಉಚಿತ ಬಸ್, ಆರೋಗ್ಯ ವಿಮೆ, ಇಎಸ್‌ಐ, ಪಿಎಫ್ ಸೇರಿದಂತೆ ಗ್ರಾಪಂ ಸಿಬ್ಬಂದಿಗಳಿಗೆ ಕಂದಾಯ ಇಲಾಖೆ ವತಿಯಿಂದಲೇ ವೇತನವನ್ನು ನೀಡಬೇಕೆಂದು ನಾವು ಕೇಳುತ್ತಿದ್ದರೂ ಬಲವಂತವಾಗಿ ಕೆಲ ನಿಯಮಗಳನ್ನು ಹೇರಲಾಗುತ್ತಿದೆ ಎಂದು ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜು ಆರೋಪಿಸಿದ್ದಾರೆ.
ನಮ ಈ ಹೋರಾಟಕ್ಕೆ ಕಾರ್ಯದರ್ಶಿಗಳು ಲೆಕ್ಕ ಸಹಾಯಕರು, ಕರವಸೂಲಿ ಸಿಬ್ಬಂದಿ, ಕಂಪ್ಯೂಟರ್ ಡೇಟಾ ಆಪರೇಟರ್‌ಗಳು ಬೆಂಬಲ ಸೂಚಿಸಿ ಹೋರಾಟಕ್ಕೆ ಬಂದಿದ್ದಾರೆ. ಕಳೆದ ವಾರವೇ ನಾವು ಅನಿರ್ದಿಷ್ಟ ಹೋರಾಟದ ಬಗ್ಗೆ ಸರ್ಕಾರದ ಗಮನಕ್ಕೆ ತಂದರೂ ನಮಗೆ ಯಾವುದೇ ಭರವಸೆ ಸಿಕ್ಕಿಲ್ಲ ಎಂದು ಟೀಕಿಸಿದ್ದಾರೆ.
ಒಂದೇ ತಾಲ್ಲೂಕಿನಲ್ಲಿ 7 ವರ್ಷ ಸೇವೆಸಲ್ಲಿಸಿದವರನ್ನು ವರ್ಗಾವಣೆ ಮಾಡುವ ನಿಯಮವನ್ನು ಬಲವಂತವಾಗಿ ಹೇರಲಾಗಿದೆ. ಇದರಿಂದ ಹಲವರು ಒತ್ತಡದ ಕೆಲಸದ ಒತ್ತಡದಲ್ಲಿ ಜೀವ ಕಳೆದುಕೊಂಡಿದ್ದಾರೆ. ಇನ್ನೂ ಹಲವರಿಗೆ ಮಾನಸಿಕ ಒತ್ತಡದಿಂದ ಆರೋಗ್ಯ ಹಾಳಾಗಿದೆ ಇಷ್ಟಾದರೂ ಅಧಿಕಾರಿಗಳು ನಮ ನೋವನ್ನು ಮನಗಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಾದ್ಯಂತ ಸುಮಾರು 45000ಕ್ಕೂ ಹೆಚ್ಚು ಸಿಬ್ಬಂದಿಗಳು ಹೋರಾಟಕ್ಕೆ ಬೆಂಬಲ ಸೂಚಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮುಂದೆ ಆಗುವ ಅನಾಹುತಗಳಿಗೆ ಸರ್ಕಾರವೇ ಹೊಣೆ ಎಂದು ಎಚ್ಚರಿಕೆ ನೀಡಿದರು.