ಬೆಂಗಳೂರು,ಆ.25- ಆಗಸ್ಟ್ 27ಕ್ಕೆ ನಿಗದಿಯಾಗಿರುವ ಕೆಎಎಸ್ ಪೂರ್ವಭಾವಿ ಪರೀಕ್ಷೆಯನ್ನು ಮುಂದೂಡಬೇಕು ಎಂದು ಆಗ್ರಹಿಸಿ ಫ್ರೀಡಂಪಾರ್ಕ್‌ನಲ್ಲಿ 50ಕ್ಕೂ ಹೆಚ್ಚು ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ಒಂದು ತಿಂಗಳು ಮೊದಲೇ ಪ್ರಶ್ನೆ ಪತ್ರಿಕೆ ಮುದ್ರಣವಾಗಿರುವ ಹಿನ್ನೆಲೆಯಲ್ಲಿ ಭ್ರಷ್ಟಾಚಾರಕ್ಕೆ ಎಡೆಮಾಡಿಕೊಟ್ಟಂತಾಗಿದೆ. ಇನ್ನು ವಾರದ ದಿನದಲ್ಲಿ (ಮಂಗಳವಾರ) ಪರೀಕ್ಷೆ ನಿಗದಿಯಾಗಿರುವುದರಿಂದ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ತೊಂದರೆಯಾಗಿದೆ.
ಹೀಗಾಗಿ ರಾಜ್ಯ ಸರ್ಕಾರವು ಪರೀಕ್ಷೆಯನ್ನು ಮುಂದೂಡಬೇಕು, ಇಲ್ಲವೇ ನಮಗೆ ದಯಾಮರಣಕ್ಕೆ ಅನುಮತಿ ಕೊಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಮಾಡಿದ್ದಾರೆ.
ಪ್ರತಿಭಟನಾನಿರತ ಅಭ್ಯರ್ಥಿ ಕಾಂತಕುಮಾರ್ ಪ್ರತಿಕ್ರಿಯಿಸಿ, ಆಗಸ್ಟ್ 27 ಕ್ಕೆ ಪರೀಕ್ಷೆ ನಿಗದಿಯಾಗಿದೆ. ವಾರದ ದಿನದಲ್ಲಿ ಪರೀಕ್ಷೆ ನಡೆಯುತ್ತಿದೆ. ಒಂದು ತಿಂಗಳಿಗಿಂತ ಮುಂಚಿತವಾಗಿ ಪ್ರಶ್ನೆಪತ್ರಿಕೆ ಮುದ್ರಿಸಿದ್ದಾರೆ. ತರಾತುರಿಯಲ್ಲಿ ಈ ಪರೀಕ್ಷೆ ನಡೆಸಲಾಗುತ್ತಿದ್ದು, ಸಿಎಂಗೆ ಸುಳ್ಳು ಸುದ್ದಿ ನೀಡಿ ದಾರಿ ತಪ್ಪಿಸಲಾಗುತ್ತಿದೆ. ಸಿದ್ದರಾಮಯ್ಯ ಅವರು ಪ್ರಶ್ನೆ ಪತ್ರಿಕೆ ಮರು ಮುದ್ರಣ ಮಾಡಿಸಿ, ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಒಂದು ತಿಂಗಳ ಮುಂಚೆಯೇ ಪ್ರಶ್ನೆ ಪತ್ರಿಕೆ ಮುದ್ರಿಸಿದ್ದಾರೆ. ಇದು ಭ್ರಷ್ಟಾಚಾರಕ್ಕೆ ಎಡೆಮಾಡಿಕೊಟ್ಟಿದೆ. ಪರೀಕ್ಷೆ ಮುಂದೂಡಿ ಇಲ್ಲವೇ ನಮನ್ನ ಜೈಲಿಗೆ ಹಾಕಿ ಅಥವಾ ದಯಾಮರಣ ಕೊಡಿ ಎಂದು ಅಲವತ್ತುಕೊಂಡಿದ್ದಾರೆ.ಅಭ್ಯರ್ಥಿ ತೇಜಸ್ ಮಾತನಾಡಿ, ನಾವು ಅನುಮತಿ ಕೇಳಿದ್ದಾಗ ಬೇರೆ ಕಾರ್ಯಕ್ರಮ ಇದೆ ಎಂದಿದ್ದರು. 10ರಿಂದ 2 ಗಂಟೆವರೆಗೆ ಅವಕಾಶ ನೀಡಿದರು. ಆದರೆ ಇಲ್ಲಿ ಯಾವುದೇ ಪ್ರತಿಭಟನೆ ಕೂಡ ಇಲ್ಲ. ಪ್ರತಿಭಟನಾಕಾರರಿಗಿಂತ ಹೆಚ್ಚಾಗಿ ಪೊಲೀಸರ ನಿಯೋಜನೆಯಾಗಿದೆ ಎಂದು ಹೇಳಿದ್ದಾರೆ.
ಸರ್ಕಾರದ ಪರವಾಗಿ ಇಲ್ಲಿ ಯಾರೂ ಬಂದಿಲ್ಲ. ಪರೀಕ್ಷೆಗೆ ಸಾಕಷ್ಟು ಸಮಯ ಇಲ್ಲ, ಮಾನಸಿಕವಾಗಿ ಸಾಕಷ್ಟು ಕಷ್ಟವಾಗುತ್ತಿದೆ ಎಂದು ಅಭ್ಯರ್ಥಿ ಯಮುನಾ ಅಳಲು ತೋಡಿಕೊಂಡಿದ್ದಾರೆ. ರಾಜ್ಯ ಸರ್ಕಾರ ಪರೀಕ್ಷೆಯನ್ನು ಮುಂದೂಡಬೇಕು, ಇಲ್ಲವೇ ನಮಗೆ ದಯಾ ಮರಣಕ್ಕೆ ಅನುಮತಿ ನೀಡಬೇಕು ಎಂದು ಪಟ್ಟು ಹಿಡಿದಿದ್ದರಿಂದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.