ಬೆಂಗಳೂರು,ಸೆ.26-ಖಾಸಗಿ ಹೋಟೆಲ್ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಿ ದಾಂಧಲೆ ಉಂಟು ಮಾಡಿದ್ದ 41 ಮಂದಿ ಪ್ರತಿಭಟನಾಕಾರರನ್ನು ಹೈಗ್ರೌಂಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ತಾಜ್ ವೆಸ್ಟೆಂಡ್ ಹೋಟೆಲ್ನಲ್ಲಿ ಅಧಿಕೃತ ಭಾಷೆಯ ಕುರಿತು ಸಂಸದೀಯ ಸಮಿತಿ ವತಿಯಿಂದ ಸೆ.23 ರಿಂದ 25 ರ ವರೆಗೆ ಸಭೆಯನ್ನು ಅಯೋಜಿಸಲಾಗಿತ್ತು.
ಸಭೆಯ ಕೊನೆ ದಿನವಾದ ನಿನ್ನೆ ಬೆಳಗ್ಗೆ 9.30ಕ್ಕೆ ಸಭೆ ಆರಂಭವಾಗಿದ್ದು, 10.45ರ ಸುಮಾರಿಗೆ ಏಕಾಏಕಿ ಹೋಟೆಲ್ಗೆ ನುಗ್ಗಿದ 30ರಿಂದ 40 ಮಂದಿ ವಿವಿಧ ಸಂಘಟನೆಯ ಕಾರ್ಯಕರ್ತರು , ಸಭೆಯ ವಿಷಯ ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿ, ಸ್ಥಳದಲ್ಲಿದ್ದ ಸರ್ಕಾರಿ ಅಧಿಕಾರಿಗಳ ಕೆಲಸಕ್ಕೆ ಅಡ್ಡಿಪಡಿಸಿ ದಾಂಧಲೆ ಉಂಟು ಮಾಡಿರುತ್ತಾರೆ.
ಆ ಸಂದರ್ಭದಲ್ಲಿ ಸಭೆಗೆ ಅಡಚಣೆ ಉಂಟಾಗಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಪರಿಸ್ಥಿತಿಯನ್ನು ನಿಯಂತ್ರಿಸಿರುತ್ತಾರೆ.
ಈ ಘಟನೆಯಿಂದಾಗಿ ಸಭೆಗೆ ಕೆಲ ಕಾಲ ಅಡಚಣೆ ಉಂಟಾಗಿದ್ದು, ನಂತರ ಪೊಲೀಸರು ಕೈಗೊಂಡ ಕ್ರಮದಿಂದ ಆಯೋಜಿಕರು ಪೂರ್ವ ನಿಯೋಜಿತ ವೇಳಾಪಟ್ಟಿಯಂತೆ ಸಭೆಯನ್ನು ಪೂರ್ಣಗೊಳಿಸಿರುತ್ತಾರೆ.
ಪ್ರತಿಭಟನಾಕಾರರ ವಿರುದ್ಧ ಕಾರ್ಯಕ್ರಮದ ಆಯೋಜಕರು ಹೈಗ್ರೌಂಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು 41 ಮಂದಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು ಅವರುಗಳನ್ನು ನ್ಯಾಯಾಂಗ ಬಂಧನಕ್ಕೆ ಆದೇಶಿಸಿರುತ್ತದೆ.