ಬೆಂಗಳೂರು,ಸೆ.28- ಚುನಾವಣಾ ಬಾಂಡ್ ಹಗರಣದಲ್ಲಿ ಸಿಲುಕಿರುವ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮನೋಹರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ರಾಜಕೀಯ ಷಡ್ಯಂತರ ಮಾಡುತ್ತಿ ರುವ ಬಿಜೆಪಿ ಜೆಡಿಎಸ್ ನ ಕೆಲವು ಭ್ರಷ್ಟಾಚಾರಿಗಳು ಸಿದ್ದರಾಮಯ್ಯನವರ ರಾಜೀನಾಮೆ ನೀಡಬೇಕೆಂದು ಹೋರಾಟ ಮಾಡುತ್ತಿದ್ದಾರೆ. ಆದರೆ ಈಗ ಕೋಟ್ಯಂತರ ಅಕ್ರಮ ಚುನಾವಣಾ ಬಾಂಡ್ ಹಗರಣದಲ್ಲಿ ಭಾಗಿಯಾಗಿರುವ ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್ ರಾಜೀನಾಮೆಗೆ ಯಾಕೆ ನೀವು ಒತ್ತಾಯಿಸುವುದಿಲ್ಲ ಎಂಬುದರ ಬಗ್ಗೆ ಬಿಜೆಪಿ ಜೆಡಿಎಸ್ ಜನತೆಗೆ ತಿಳಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಕೂಡ ಈ ಹಗರಣದಲ್ಲಿ ಆರೋಪಿಯಾಗಿದ್ದಾರೆ. ಸಾರ್ವಜನಿಕರ ಹಣವನ್ನು ಲೂಟಿ ಮಾಡಿ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಕೇಂದ್ರ ಸರ್ಕಾರದ ಮಂತ್ರಿಗಳು ವಾಮಮಾರ್ಗದಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿರುವುದು ಈಗ ದೇಶದ ಜನತೆಗೆ ತಿಳಿದಿದೆ. ಇವರ ವಿರುದ್ಧ ಪ್ರಧಾನಿ ನರೇಂದ್ರಮೋದಿ ಕ್ರಮ ಕೈಗೊಳ್ಳುತ್ತಾರ ಎಂದು ಪ್ರಶ್ನಿಸಿದರು.
ನಿರ್ಮಲ ಸೀತಾರಾಮನ್ ಆರೋಪಿಯಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿಯವರು ಸಹ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು, ಭ್ರಷ್ಟಾಚಾರ ಎಂದರೆ ಬಿಜೆಪಿ ಬಿಜೆಪಿ ಎಂದರೆ ಭ್ರಷ್ಟಾಚಾರ ಆಡಳಿತ ಪಕ್ಷದ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರೆಸುವ ಬಿಜೆಪಿ ನಾಯಕರು ಈಗ ರಾಜೀನಾಮೆ ಕೇಳುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ.
ಅತಿ ಹೆಚ್ಚು ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾಗಿರುವುದು ಬಿಜೆಪಿ ಎಂದು ಈಗ ಮತ್ತೆ ಸಾಬೀತಾಗಿದೆ ಎಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರಾದ ಉಮೇಶ್ ಪುಟ್ಟರಾಜು, ನವೀನ್, ಹೇಮರಾಜ್, ಕೌಶಿಕ್, ವಾಸು, ಮಧು, ಗಜೇಂದ್ರ ಭಾಗವಹಿಸಿದ್ದರು.