Saturday, July 19, 2025
Homeರಾಜ್ಯಎಲ್ಲಾ ಪಕ್ಷಗಳ ಶಾಸಕರಿಗೂ ಸಮಾನ ಅನುದಾನ ನೀಡದಿದ್ದರೆ ಉಗ್ರ ಹೋರಾಟ : ಸಿ.ಬಿ.ಸುರೇಶ್‌ಬಾಬು ಎಚ್ಚರಿಕೆ

ಎಲ್ಲಾ ಪಕ್ಷಗಳ ಶಾಸಕರಿಗೂ ಸಮಾನ ಅನುದಾನ ನೀಡದಿದ್ದರೆ ಉಗ್ರ ಹೋರಾಟ : ಸಿ.ಬಿ.ಸುರೇಶ್‌ಬಾಬು ಎಚ್ಚರಿಕೆ

protests if equal funding is not given to MLAs of all parties

ಬೆಂಗಳೂರು,ಜು.19– ರಾಜ್ಯ ಕಾಂಗ್ರೆಸ್‌‍ ಸರ್ಕಾರ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿರುವುದನ್ನು ಖಂಡಿಸುತ್ತೇವೆ. ಮಳೆಗಾಲದ ವಿಧಾನಮಂಡಲದ ಅಧಿವೇಶನ ಆರಂಭವಾಗುವ ಮುನ್ನ ಎಲ್ಲಾ ಪಕ್ಷಗಳ ಶಾಸಕರಿಗೂ ಸಮನಾಗಿ ಅನುದಾನ ಹಂಚಿಕೆ ಮಾಡದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಜೆಡಿಎಸ್‌‍ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಸೂಪರ್‌ ಸಿಎಂ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರು ಹೇಳಿದ ಮೇಲೆ ಕಾಂಗ್ರೆಸ್‌‍ ಶಾಸಕರಿಗೆ 50 ಕೋಟಿ ರೂ. ವಿಶೇಷ ಅನುದಾನ ಮಂಜೂರು ಮಾಡುವುದಾಗಿ ಮುಖ್ಯಮಂತ್ರಿಗಳು ಪತ್ರ ಬರೆದಿದ್ದಾರೆ. ಆದರೆ ವಿರೋಧಪಕ್ಷದ ಶಾಸಕರುಗಳಿಗೆ ಯಾವುದೇ ಅನುದಾನ ನೀಡುತ್ತಿಲ್ಲ ಎಂದು ಆರೋಪಿಸಿದರು.

ಲೋಕೋಪಯೋಗಿ ಇಲಾಖೆಯಿಂದ 37.50 ಕೋಟಿ ಹಾಗೂ ಇತರ ಇಲಾಖೆಗಳಿಂದ 12.50 ಕೋಟಿ ಅನುದಾನವನ್ನು ಕಾಂಗ್ರೆಸ್‌‍ ಶಾಸಕರಿಗೆ ಹಂಚಿಕೆ ಮಾಡಿದ್ದಾರೆ. ವಿರೋಧಪಕ್ಷಗಳ ಶಾಸಕರುಗಳಿಗೆ ಅನುದಾನ ನೀಡಿಲ್ಲ. ಇದನ್ನು ತೀವ್ರವಾಗಿ ಖಂಡಿಸುತ್ತೇವೆ ಹಾಗೂ ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸುತ್ತೇವೆ ಎಂದರು.

ಕಾಂಗ್ರೆಸ್‌‍ ಶಾಸಕರಿಗೆ 50 ಕೋಟಿ ಅನುದಾನ, ಬಿಜೆಪಿ ಶಾಸಕರಿಗೆ 25 ಕೋಟಿ, ಜೆಡಿಎಸ್‌‍ ಶಾಸಕರಿಗೆ ಅನುದಾನ ಇಲ್ಲ ಎಂಬ ಚರ್ಚೆಯಾಗಿರುವುದು ತಿಳಿದುಬಂದಿದೆ. ಈ ರೀತಿಯಾದರೆ ನಾವು ಉಗ್ರ ಹೋರಾಟ ಮಾಡ ಬೇಕಾಗುತ್ತದೆ ಎಂದು ಹೇಳಿದರು.

ರಾಜ್ಯದಲ್ಲಿ ಅಭಿವೃದ್ಧಿಯಾಗುತ್ತಿಲ್ಲ ಎಂದು ಆಡಳಿತ ಪಕ್ಷದ ಶಾಸಕರೇ ಧ್ವನಿ ಎತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ಹಣ ಕೊಡುತ್ತಿಲ್ಲ. ಎಲ್ಲಾ ಶಾಸಕರಿಗೂ ತಲಾ 10 ಕೋಟಿ ರೂ. ಅನುದಾನ ಕೊಡುವುದಾಗಿ ಘೋಷಿಸಿದ್ದಾರೆ. ಆದರೆ ಅಧಿಕಾರಿಗಳು ಮೊದಲು ಆಡಳಿತ ಪಕ್ಷದ ಶಾಸಕರಿಗೆ ಅನುದಾನ ನೀಡುತ್ತೇವೆ. ಆನಂತರ ವಿರೋಧಪಕ್ಷದ ಶಾಸಕರಿಗೆ ಎಂಬ ಮಾತು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

4 ಲಕ್ಷ ಕೋಟಿ ರೂ.ಗೂ ಹೆಚ್ಚು ಗಾತ್ರದ ಬಜೆಟ್‌ ಮಂಡಿಸಿ ರಾಜ್ಯದ ಅಭಿವೃದ್ಧಿಗೆ ಏಕೆ ಹಣ ಕೊಡುತ್ತಿಲ್ಲ? ಪಕ್ಷದ ಕೇಂದ್ರದ ವರಿಷ್ಠರಿಗೆ ಕಪ್ಪಕಾಣಿಕೆ ಕೊಡಲು ಸರ್ಕಾರದಿಂದ 50 ಕೋಟಿ ರೂ. ವಿಶೇಷ ಅನುದಾನ ಮಂಜೂರಾಗಿದೆಯೇ ಎಂಬ ಅನುಮಾನ ಮೂಡುತ್ತಿದೆ. ಶಾಸಕರಿಗೆ ಅನುದಾನವನ್ನು ಕಾಂಗ್ರೆಸ್‌‍ ಕಚೇರಿಯಿಂದ ಕೊಡುತ್ತಿಲ್ಲ. ಸರ್ಕಾರದ ಹಣ, ಇದರಲ್ಲಿ ಏಕೆ ತಾರತಮ್ಯ? ಯೋಜನೆಗಳಿಗೆ ಹಣ ಹೊಂದಿಸಲು ಅಬಕಾರಿ ತೆರಿಗೆ ಹೆಚ್ಚಿಸಿದ್ದಾರೆ. ಗ್ರಾಮೀಣ ಭಾಗದ ಪೆಟ್ಟಿಗೆ ಅಂಗಡಿಗಳಲ್ಲೂ ಮದ್ಯ ದೊರೆ ಯುತ್ತಿದ್ದು, ಹೆಣ್ಣು ಮಕ್ಕಳು ಕಣ್ಣೀರು ಹಾಕುವಂತಾಗಿದೆ ಎಂದರು.

ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರ ಮೇಲೆ ಸುರ್ಜೇವಾಲ ಅವರು ರಿಯಲ್‌ ಎಸ್ಟೇಟ್‌ ವ್ಯವಹಾರದ ಆರೋಪ ಮಾಡಿದ್ದಾರೆ. ಆದರೆ ಸುರ್ಜೇವಾಲ ಅವರ ಅಕ್ಕಪಕ್ಕ ಇರುವವರೇ ರಿಯಲ್‌ ಎಸ್ಟೇಟ್‌ ನಡೆಸುವವರಾಗಿದ್ದಾರೆ. ರಿಯಲ್‌ ಎಸ್ಟೇಟ್‌ ದಂಧೆಗೆ ಉತ್ತೇಜನ ನೀಡಲು ಹೊಸ ವಿಮಾನನಿಲ್ದಾಣದ ಪ್ರಸ್ತಾಪ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ರಾಜ್ಯಕ್ಕೆ 4,500 ಇವಿ ಬಸ್‌‍ಗಳನ್ನು ನೀಡಿದ್ದರು. ಮುಖ್ಯಮಂತ್ರಿ ಕೃತಜ್ಞತೆ ಸಲ್ಲಿಸುವ ಸೌಜನ್ಯ ತೋರಲಿಲ್ಲ. ಪಂಡಿತ್‌ ಜವಾಹರಲಾಲ್‌ ನೆಹರೂ ಅವರು ಪ್ರಧಾನಿಯಾಗಿದ್ದಾಗ ಪ್ರಾರಂಭವಾದ ಎಚ್‌ಎಂಟಿ ಕಾರ್ಖಾನೆಯನ್ನು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿಯವರು ಪುನಶ್ಚೇತನಗೊಳಿಸಲು ಮುಂದಾಗಿದ್ದಾರೆ. ಆದರೆ ಅರಣ್ಯ ಇಲಾಖೆ ಮೂಲಕ ಅಡ್ಡಿಪಡಿಸುವ ಕೆಲಸವಾಗುತ್ತಿದೆ ಎಂದು ಆರೋಪಿಸಿದರು.
ಸಿಎಂ ಕಪಿಮುಷ್ಠಿಗೆ ಸಿಲುಕಿದ್ದು ಒಳ್ಳೆಯ ಆಡಳಿತ ನೀಡಲು ವಿಫಲರಾಗಿದ್ದಾರೆ. ಕಡೆಯ ಚುನಾವಣೆ ಎಂದು ಅವರು ಹೇಳುತ್ತಿದ್ದಾರೆ. ಹೀಗಾಗಿ ಒಳ್ಳೆಯ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕು ಎಂದರು.

ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಆಡಳಿತ ವೈಖರಿ ಇರಬೇಕು. ಅದನ್ನು ಬಿಟ್ಟು ತೆರಿಗೆ ಮೇಲೆ ತೆರಿಗೆ ವಿಧಿಸಿ ತೊಂದರೆ ಕೊಡುವುದಲ್ಲ. ಯುವಕರು ಯುವನಿಧಿ ಪಡೆಯಲು ನಿರಾಸಕ್ತಿ ತೋರಿದ್ದು ಉದ್ಯೋಗವನ್ನು ಬಯಸುತ್ತಿದ್ದಾರೆ. ಇದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಸರ್ಕಾರಿ ಶಾಲೆಗಳು ಮುಚ್ಚುತ್ತಿದ್ದು, ವಿದ್ಯಾರ್ಥಿಗಳು ಖಾಸಗಿ ಶಾಲೆಗಳತ್ತ ಮುಖ ಮಾಡಿದ್ದಾರೆ. ಸರ್ಕಾರ ಅಗತ್ಯ ಮೂಲಸೌಲಭ್ಯ ಒದಗಿಸಿ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಅವರು ಆಗ್ರಹಿಸಿದರು.

ಶಾಸಕ ಎಚ್‌.ಟಿ.ಮಂಜು ಮಾತನಾಡಿ, ನೀರಾವರಿ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಅನುದಾನ ನೀಡಿಕೆಯಲ್ಲಿ ತಾರತಮ್ಯವಾಗುತ್ತಿದೆ. ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್‌‍ನವರಿಗೆ ನಾವು ಹೆದರಿಕೊಂಡಿಲ್ಲ. ಅವರ ಟೀಕೆಗೆ ತಕ್ಕ ಪ್ರತಿಕ್ರಿಯೆ ನೀಡುತ್ತಿದ್ದೇವೆ. ಜೆಡಿಎಸ್‌‍ನಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಒಗ್ಗಟ್ಟಿನಿಂದಿದ್ದೇವೆ ಎಂದರು.

ಕೇಂದ್ರ ಸಚಿವ ಕುಮಾರಸ್ವಾಮಿ ಯವರ ಬಗ್ಗೆ ಸುರ್ಜೇವಾಲ ಅವರು ಮಾಡಿರುವ ಆರೋಪವನ್ನು ಗಮನಿಸಿದರೆ ಸುರ್ಜೇವಾಲ ಅವರು ಬೌದ್ಧಿಕವಾಗಿ ದಿವಾಳಿಯಾದಂತೆ ತೋರುತ್ತದೆ ಎಂದು ಟೀಕಿಸಿದರು.ಸುದ್ದಿಗೋಷ್ಠಿಯಲ್ಲಿ ಶಾಸಕ ಸಮೃದ್ಧಿ ಮಂಜುನಾಥ್‌, ಮಾಜಿ ಶಾಸಕರಾದ ವೆಂಕಟರಾವ್‌ ನಾಡಗೌಡ, ರಮೇಶ್‌ಗೌಡ, ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.

RELATED ARTICLES

Latest News