ಬೆಂಗಳೂರು,ಸೆ.16- ಮಂಡ್ಯಜಿಲ್ಲೆ ನಾಗಮಂಗಲದಲ್ಲಿ ನಡೆದ ಕೋಮುಸಂಘರ್ಷ ತಹಬದಿಗೆ ಬರುವ ಮುನ್ನವೇ ಮಂಗಳೂರಿನಲ್ಲಿ ಹಿಂದೂಪರ ಸಂಘಟನೆಗಳು ಬೀದಿಗಿಳಿದಿದ್ದು, ಕಾವೇರಿದ ವಾತಾವರಣ ನಿರ್ಮಾಣವಾಗಿತ್ತು.
ನಾಗಮಂಗಲದಲ್ಲಿ ಗಣೇಶೋತ್ಸವದ ವೇಳೆ ಕಲ್ಲುತೂರಾಟ ನಡೆಸಿದ ಘಟನೆಯ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಆರೋಪ-ಪ್ರತ್ಯಾರೋಪಗಳು ಭುಗಿಲೆದ್ದಿದ್ದವು. ಹಿಂದೂ ಸಂಘಟನೆಯ ಮುಖಂಡ ಶರಣ್ ಪಂಪ್‌ವೆಲ್ ಈದ್ ಮಿಲಾದ್ ಮೆರವಣಿಗೆಗೆ ಅವಕಾಶ ಮಾಡಿಕೊಡಬಾರದೆಂದು ಒತ್ತಾಯಿಸಿದ್ದರು. ಇದಕ್ಕೆ ಪ್ರತಿಸವಾಲು ಹಾಕಿದ್ದ ಬಂಟ್ವಾಳ ಪುರಸಭೆಯ ಮಾಜಿ ಅಧ್ಯಕ್ಷ ಶರೀಫ್ ಹಾಗೂ ಹುಸೇನ್ ಎಂಬುವರು ತಾಕತ್ತಿದ್ದರೆ ಬಂಟ್ವಾಳದ ಬಿಸಿ ರೋಡ್‌ಗೆ ಬನ್ನಿ ಎಂದು ಹೇಳಿದ್ದರು.
ಈ ಸವಾಲನ್ನು ಸ್ವೀಕರಿಸಿದ ಹಿಂದೂ ಸಂಘಟನೆಯ ಕಾರ್ಯ ಕರ್ತರು ಇಂದು ಬೆಳಿಗ್ಗೆ ಏಕಾಏಕಿ ಸಾವಿರಾರು ಮಂದಿ ಬಂಟ್ವಾಳದ ಬಿಸಿ ರೋಡ್ ಬಳಿ ಜಮಾಯಿಸಿದರು. ಜೈ ಶ್ರೀರಾಮ್, ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗಿದರು. ಏಕಾಏಕಿ ನಡೆದ ಬಿಸಿ ರೋಡ್ ಚಲೋ ಪೊಲೀಸರನ್ನು ಪರದಾಡುವಂತೆ ಮಾಡಿತು. ಯಾವುದೇ ಪೂರ್ವ ಮಾಹಿತಿ ಇಲ್ಲದೇ ನಡೆದ ಹಿಂದೂ ಸಂಘಟನೆ ಕಾರ್ಯಕರ್ತರ ಪ್ರತಿಭಟನಾ ಮೆರವಣಿಗೆಯನ್ನು ನಿಯಂತ್ರಿಸಲು ಬ್ಯಾರಿಕೇಡ್ ಹಾಕಿ ಹರಸಾಹಸ ಪಟ್ಟರು. ಈ ವೇಳೆ ತಳ್ಳಾಟ, ನೂಕಾಟಗಳು ನಡೆದವು.
ಈ ವೇಳೆ ಹಿಂದೂ ಪರ ಸಂಘಟನಾ ಕಾರ್ಯಕರ್ತರು ಪೊಲೀಸರ ಜೊತೆ ಮಾತಿನ ಚಕಮಕಿ ನಡೆಸಿದರು.ಈ ವೇಳೆ ಮಾತನಾಡಿದ ಶರಣ್ ಪಂಪ್‌ವೆಲ್, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹಿಂದೂಗಳಿಗೆ ಒಂದು, ಮುಸ್ಲಿಮರಿಗೆ ಮತ್ತೊಂದು ಎಂಬ ರೀತಿ ವರ್ತಿಸುತ್ತಿದೆ. ಗಣೇಶೋತ್ಸವದ ವೇಳೆ ಕಲ್ಲು ತೂರಾಟ ನಡೆದಿದ್ದಕ್ಕೆ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ನಾವು ಯಾರನ್ನೂ ಪ್ರಚೋದಿಸಿಲ್ಲ. ಅವರ ಕಡೆಯಿಂದ ಕೆಲವು ನಾಯಕರು ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿ ನಮನ್ನು ಕೆಣಕುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಇಂದು ಸಾವಿರಾರು ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ಇಲ್ಲಿಗೆ ಆಗಮಿಸಿದ್ದಾರೆ. ಈಗಲಾದರೂ ಅವರು ಎಚ್ಚೆತ್ತುಕೊಂಡು ಹೇಗಿರಬೇಕೊ ಹಾಗಿದ್ದರೆ ಸರಿ. ಇಲ್ಲವಾದರೆ, ಮುಂದಿನ ದಿನಗಳಲ್ಲಿ ಆಗುವ ಅನಾಹುತಗಳಿಗೆ ನಾವು ಹೊಣೆ ಅಲ್ಲ ಎಂದು ತಿರುಗೇಟು ನೀಡಿದ್ದಾರೆ.
ಪರಿಸ್ಥಿತಿಯನ್ನು ತಿಳಿಗೊಳಿಸಲು ಆರ್‌ಎಎಫ್‌ನ ತುಕಡಿಗಳನ್ನು ತಕ್ಷಣವೇ ಸ್ಥಳಕ್ಕೆ ಕರೆಸಿಕೊಳ್ಳಲಾಯಿತು. ಜಿಲ್ಲಾಪೊಲೀಸ್ ಮುಖ್ಯ ಅಧಿಕಾರಿಯಾದಿಯಾಗಿ ಎಲ್ಲಾ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ಹೆಚ್ಚಿನ ಪೊಲೀಸ್ ಬಂದೊಬಸ್ತ್ ಅನ್ನು ನಿಯೋಜಿಸಲಾಯಿತು.ನಾಗಮಂಗಲದ ಘಟನೆ ಇನ್ನೂ ಬೂದಿ ಮುಚ್ಚಿದ ಕೆಂಡದಂತಿರುವಾಗಲೇ ಕೋಮುಪ್ರದೇಶ ಕರಾವಳಿಯಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ರೊಚ್ಚಿಗೆದ್ದು ಬೀದಿಗಿಳಿದಿದ್ದಾರೆ.