Monday, May 19, 2025
Homeರಾಜ್ಯಬೈಕ್‌ಗೆ ಸಾರಿಗೆ ಬಸ್‌‍ ಡಿಕ್ಕಿಯಾಗಿ ಪಿಎಸ್‌‍ಐ ಸಾವು

ಬೈಕ್‌ಗೆ ಸಾರಿಗೆ ಬಸ್‌‍ ಡಿಕ್ಕಿಯಾಗಿ ಪಿಎಸ್‌‍ಐ ಸಾವು

PSI dies after being hit by a transport bus on a bike

ಕನಕಪುರ,ಮೇ19– ಕೆಎಸ್‌‍ಆರ್‌ಟಿಸಿ ಬಸ್‌‍ ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಸಬ್‌ ಇನ್‌ಸ್ಪೆಕ್ಟರ್‌ ಮೃತಪಟ್ಟು, ಅವರ ಪುತ್ರಿ ಸೇರಿ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ಕಗಲೀಪುರ ತಿರುವಿನಲ್ಲಿ ಸಂಭವಿಸಿದೆ.

ಕನಕಪುರದಿಂದ ಬೆಂಗಳೂರಿಗೆ ಹೋಗುತ್ತಿದ್ದ ಕೆಎಸ್‌‍ಆರ್‌ಟಿಸಿ ಬಸ್‌‍ ಇಂದು ಮಧ್ಯಾಹ್ನ 12.10ರ ಸಮಯದಲ್ಲಿ ವೇಗವಾಗಿ ಬಂದು ತಿರುವಿನಲ್ಲಿ ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿದೆ.

ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿ ಸಂಚಾರಿ ಪೊಲೀಸ್‌‍ ಠಾಣೆಯಲ್ಲಿ ಸಬ್‌ ಇನ್‌ಸ್ಪೆಕ್ಟರ್‌ ಆಗಿ ಸೇವೆ ಸಲ್ಲಿಸುತ್ತಿದ್ದ ನಾಗರಾಜ್‌(55) ಸಾವನ್ನಪ್ಪಿದ್ದಾರೆ. ಇವರ ಪುತ್ರಿ ಹಾಗೂ ಮತ್ತೊಂದು ಬೈಕ್‌ನ ಸವಾರನೊಬ್ಬ ಗಂಭೀರವಾಗಿ ಗಾಯಗೊಂಡಿದ್ದು, ಅವರುಗಳನ್ನು ಬೆಂಗಳೂರಿನ ದಯಾನಂದ ಸಾಗರ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ತ್ಯಾಗರಾಜನಗರ ಪೊಲೀಸ್‌‍ ಕ್ವಾಟ್ರಸ್‌‍ನಲ್ಲಿ ವಾಸವಾಗಿದ್ದ ನಾಗರಾಜ್‌ ಅವರು ತಮ ಮಗಳೊಂದಿಗೆ ಕನಕಪುರ ತಾಲ್ಲೂಕಿನ ಮಲ್ಲಸಂದ್ರದಲ್ಲಿರುವ ಅವರ ಸಂಬಂಧಿಕರನ್ನು ಭೇಟಿ ಮಾಡಲು ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ.

ಕೆಎಸ್‌‍ಆರ್‌ಟಿಸಿ ಬಸ್‌‍ನ ಅತಿವೇಗವೇ ದುರಂತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದು, ಕನಕಪುರ ಸಾರಿಗೆ ಡಿಪೋನಲ್ಲಿ ಸಿಬ್ಬಂದಿ ಕೊರತೆ ಇದ್ದು ಕೆಲವರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡಿದ್ದಾರೆ. ಇದರಿಂದಾಗಿ ಅನುಭವ ಇಲ್ಲದ ಚಾಲಕರು ನಿರ್ಲಕ್ಷ್ಯದಿಂದ ವಾಹನ ಓಡಿಸುವುದರಿಂದ ಈ ದುರಂತಗಳು ಆಗಾಗ ಸಂಭವಿಸುತ್ತಿದೆ ಎಂದು ದೂರಿದ್ದಾರೆ.

ಕೂಡಲೇ ಚಾಲಕರು, ನಿರ್ವಾಹಕರು ಹಾಗೂ ಮೆಕಾನಿಕ್‌ಗಳನ್ನು ನೇಮಿಸಿ ಈ ಭಾಗದ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಘಟನಾ ಸ್ಥಳಕ್ಕೆ ರಾಮನಗರ ಜಿಲ್ಲಾ ಎಸ್ಪಿ ಶ್ರೀನಿವಾಸ್‌‍ ಗೌಡ, ಡಿವೈಎಸ್ಪಿ ಶ್ರೀನಿವಾಸ್‌‍, ಕಗಲೀಪುರ ಪೊಲೀಸ್‌‍ ಠಾಣೆಯ ಇನ್‌ಸ್ಪೆಕ್ಟರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಗಲೀಪುರ ಪೊಲೀಸ್‌‍ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

RELATED ARTICLES

Latest News