ಯಾದಗಿರಿ,ಆ.3- ಸೈಬರ್ ಠಾಣೆಯ ಪಿಎಸ್‌ಐ ಪರಶುರಾಮ್ ಅವರ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಯಾದಗಿರಿ ಕ್ಷೇತ್ರದ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಹಾಗೂ ಅವರ ಪುತ್ರ ಪಂಪನಗೌಡ ವಿರುದ್ಧ ಪ್ರಕರಣ ದಾಖಲಾಗಿದೆ.
ಪಿಎಸ್‌ಐ ಪರುಶುರಾಮ್ ನಿನ್ನೆ ಮೃತಪಟ್ಟಿದ್ದರು. ಅವರ ಪತ್ನಿ ಶ್ವೇತಾ ದೂರು ನೀಡಿದ್ದು, ತಮ ಪತಿಗೆ ವರ್ಗಾವಣೆ ಮತ್ತು ಸ್ಥಳ ನಿಯೋಜನೆಗಾಗಿ ಸ್ಥಳೀಯ ಶಾಸಕ ಮತ್ತು ಅವರ ಪುತ್ರ ಹಣದ ಬೇಡಿಕೆ ಇಟ್ಟಿದ್ದರು. ಇದರಿಂದ ಒತ್ತಡ ಹಾಗೂ ಮಾನಸಿಕ ಖಿನ್ನತೆಗೆ ಒಳಗಾದ ತಮ ಪತಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿದ್ದರು.
ಮೂರು ಪುಟಗಳ ದೂರು ಆಧರಿಸಿ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಪಿಎಸ್‌ಐ ಮೃತಪಟ್ಟು 20 ಗಂಟೆಗಳಾದರೂ ದೂರು ದಾಖಲಿಸಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು. ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರೆ ಸರ್ಕಾರ ಅಳೆದುತೂಗಿ ಕೊನೆಗೂ ಎಫ್‌ಐಆರ್ ದಾಖಲಿಸಿದೆ.
ಆಡಳಿತ ಪಕ್ಷದ ಶಾಸಕರ ವಿರುದ್ಧ ಲಂಚ ಆರೋಪಕ್ಕೆ ಸಂಬಂಧಪಟ್ಟಂತೆ ದೂರು ದಾಖಲಾಗಿರುವುದು ವಿಪಕ್ಷಗಳಿಗೆ ರಾಜಕೀಯವಾಗಿ ಮತ್ತೊಂದು ಅಸ್ತ್ರ ನೀಡಿದಂತಾಗಿದೆ.