Home ಇದೀಗ ಬಂದ ಸುದ್ದಿ ಆಡಿಯೋ ಸಂಭಾಷಣೆಗೂ ಪಿಎಸ್‍ಐ ಮರು ಪರೀಕ್ಷೆಗೂ ಸಂಬಂಧ ಇಲ್ಲ : ಪರಮೇಶ್ವರ್

ಆಡಿಯೋ ಸಂಭಾಷಣೆಗೂ ಪಿಎಸ್‍ಐ ಮರು ಪರೀಕ್ಷೆಗೂ ಸಂಬಂಧ ಇಲ್ಲ : ಪರಮೇಶ್ವರ್

0
ಆಡಿಯೋ ಸಂಭಾಷಣೆಗೂ ಪಿಎಸ್‍ಐ ಮರು ಪರೀಕ್ಷೆಗೂ ಸಂಬಂಧ ಇಲ್ಲ : ಪರಮೇಶ್ವರ್

ಬೆಂಗಳೂರು,ಜ.23- ಪೊಲೀಸ್ ಇಲಾಖೆಯ 545 ಸಬ್‍ಇನ್ಸ್‍ಪೆಕ್ಟರ್‍ಗಳ ಹುದ್ದೆಗೆ ಇಂದು ಮುಕ್ತ ಹಾಗೂ ಪಾರದರ್ಶಕ ಪರೀಕ್ಷೆ ನಡೆದಿದೆ. ಗುಪ್ತದಳದ ಪಿಎಸ್‍ಐ ಅವರ ಆಡಿಯೋ ಮತ್ತು ಸಂಭಾಷಣೆಗೂ, ಪರೀಕ್ಷೆಗಳಿಗೂ ಯಾವುದೇ ಸಂಬಂಧ ಇಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಪರೀಕ್ಷೆಯಲ್ಲಿ ಲೋಪಗಳಾಗಿದ್ದರಿಂದಾಗಿ ನ್ಯಾಯಾಲಯ ಸ್ವತಂತ್ರ ಸಂಸ್ಥೆಯಿಂದ ಮರುಪರೀಕ್ಷೆ ನಡೆಸುವಂತೆ ಸೂಚಿಸಿತ್ತು. ಅದರಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸಂಸ್ಥೆಯಿಂದ ಪರೀಕ್ಷೆ ನಡೆಸಲಾಗಿದೆ.

54 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಈ ಬಾರಿ ಅತ್ಯಂತ ಎಚ್ಚರಿಕೆ ಕ್ರಮಗಳನ್ನು ಅನುಸರಿಸಿದ್ದೇವೆ. ಕಳೆದ ಬಾರಿಯ ಅಕ್ರಮಗಳು ಮರುಕಳಿಸದಂತೆ ಮುಂಜಾಗ್ರತೆ ವಹಿಸಲಾಗಿದೆ. ಅಭ್ಯರ್ಥಿಗಳು ಯಾವುದೇ ಆತಂಕವಿಲ್ಲದೆ ಪರೀಕ್ಷೆ ಬರೆಯಬೇಕು ಎಂದು ಈಗಾಗಲೇ ಕರೆ ನೀಡಿದ್ದಾಗಿ ಹೇಳಿದರು.

ಈ ಹಿಂದೆ ಪಿಎಸ್‍ಐ ಪರೀಕ್ಷೆಯಲ್ಲಿನ ಅಕ್ರಮಗಳ ಬಗ್ಗೆ ವಿಚಾರಣೆಗೆ ರಚಿಸಿದ್ದ ನ್ಯಾಯಮೂರ್ತಿ ಬಿ.ವೀರಪ್ಪ ಅವರ ನೇತೃತ್ವದ ನ್ಯಾಯಾಂಗ ಆಯೋಗ ನಿನ್ನೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು. ಅದರಲ್ಲಿ ಯಾವೆಲ್ಲಾ ಅಂಶಗಳಿವೆ ಎಂಬುದನ್ನು ಇನ್ನೂ ನೋಡಿಲ್ಲ. ಸರ್ಕಾರ ವರದಿಯನ್ನು ಪರಿಶೀಲನೆ ನಡೆಸಲಿದೆ. ಬಳಿಕ ಅದರ ಅನುಷ್ಠಾನದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.

ಶ್ರೀರಾಮನಿಗೆ 11 ಕೋಟಿ ಮೌಲ್ಯದ ವಜ್ರಖಚಿತ ಕಿರೀಟ ಸಮರ್ಪಿಸಿದ ಉದ್ಯಮಿ ಮುಖೇಶ್ ಪಟೇಲ್‍

ವೀರಪ್ಪ ಸಮಿತಿ ವಿಚಾರಣೆಗಾಗಿ ಕೆಲವು ನೋಟಿಸ್ ನೀಡಿತ್ತು. ಆದರೆ ಕೆಲವರು ವಿಚಾರಣೆಗೆ ಹಾಜರಾಗಿಲ್ಲ ಎಂಬ ಮಾಹಿತಿ ಇದೆ. ಹೀಗಾಗಿ ವರದಿ ಹೇಗೆ ಪರಿಪೂರ್ಣ ಎಂಬ ಬಗ್ಗೆಯೂ ವಿಶ್ಲೇಷಣೆ ನಡೆಸಬೇಕಿದೆ ಎಂದು ಹೇಳಿದರು.ಪಿಎಸ್‍ಐ ಪರೀಕ್ಷೆಯ ನೇಮಕಾತಿಗೆ ಸಂಬಂಧಪಟ್ಟಂತೆ ಸಬ್‍ಇನ್ಸ್‍ಪೆಕ್ಟರ್ ಲಿಂಗಯ್ಯ ಅವರ ಆಡಿಯೋ ಪ್ರಸ್ತುತ ನಡೆಯುತ್ತಿರುವ ಮರುಪರೀಕ್ಷೆಗೆ ಸಂಬಂಧಿಸಿಲ್ಲ. ಆದರೂ ಸಿಸಿಬಿ ಪೊಲೀಸರು ಪಿಎಸ್‍ಐ ಲಿಂಗಯ್ಯ ಅವರನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ತಾನು ಗುಪ್ತದಳದಲ್ಲಿರುವುದರಿಂದ ಯಾವುದಾದರೂ ರೀತಿಯ ಅಕ್ರಮಗಳು ನಡೆಯುತ್ತಿವೆಯೇ ಎಂಬ ಮಾಹಿತಿ ಕಲೆ ಹಾಕಲು ಕೆಲವರೊಂದಿಗೆ ಸಂಭಾಷಣೆ ನಡೆಸಿದ್ದಾಗಿ ಲಿಂಗಯ್ಯ ಹೇಳಿಕೆ ನೀಡಿದ್ದಾರೆ. ಅದರ ಸತ್ಯಾಸತ್ಯತೆ ಬಗ್ಗೆ ವಿಚಾರಣೆಗಳು ನಡೆಯುತ್ತಿವೆ ಎಂದರು.