ಬೆಂಗಳೂರು,ಸೆ.12- ಅಭ್ಯರ್ಥಿಗಳ ಮನವಿಗೆ ಕೊನೆಗೂ ಮಣಿದಿರುವ ರಾಜ್ಯಸರ್ಕಾರ ಇದೇ ತಿಂಗಳ 22 ರಂದು ನಿಗದಿಯಾಗಿದ್ದ ಪಿಎಸ್‌ಐ ನೇಮಕಾತಿ ಪರೀಕ್ಷೆಯನ್ನು ಸೆ.28ಕ್ಕೆ ಮುಂದೂಡಿದೆ.ಇದೇ 22 ರಂದು ಯುಪಿಎಸ್‌ಸಿ ಪರೀಕ್ಷೆ ನಿಗದಿಯಾಗಿದ್ದರಿಂದ ಅದೇ ದಿನ ನಡೆಸಲು ಉದ್ದೇಶಿಸಿದ್ದ ಪಿಎಸ್‌ಐ ಪರೀಕ್ಷೆಯನ್ನು ಮುಂದೂಡಬೇಕೆಂದು ಅಭ್ಯರ್ಥಿಗಳು ರಾಜ್ಯಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು.
ಏಕಕಾಲಕ್ಕೆ ಎರಡು ಪರೀಕ್ಷೆಗಳು ನಡೆಯುವುದರಿಂದ ಗೊಂದಲ ಉಂಟಾಗುತ್ತದೆ. ಹೀಗಾಗಿ ನಿಗದಿಯಾಗಿರುವ ಪರೀಕ್ಷೆಯನ್ನು ಮುಂದೂಡಬೇಕೆಂಬುದು ಅಭ್ಯರ್ಥಿಗಳ ಮನವಿಯಾಗಿತ್ತು.
ಈ ಬಗ್ಗೆ ಬೆಂಗಳೂರಿನಲ್ಲಿ ಮಾಹಿತಿ ನೀಡಿರುವ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರು ಪಿಎಸ್‌ಐ ಪರೀಕ್ಷೆಯನ್ನು ಸೆ.22ರ ಬದಲು 28ಕ್ಕೆ ನಡೆಸಲು ತೀರ್ಮಾನಿಸಲಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಕ್ರಮವನ್ನು ತೆಗೆದುಕೊಂಡಿದ್ದೇವೆಂದು ಹೇಳಿದರು.
ಬೆಂಗಳೂರು ಸೇರಿದಂತೆ ಒಟ್ಟು 6 ಜಿಲ್ಲೆಗಳ 164 ಕೇಂದ್ರಗಳಲ್ಲಿ ಪೊಲೀಸ್ ಸಬ್‌ಇನ್‌್ಸಪೆಕ್ಟರ್ ನೇಮಕಾತಿಯ ಪರೀಕ್ಷೆಯನ್ನು ಇದೇ 22 ರಂದು (ಭಾನುವಾರ) ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಪರೀಕ್ಷೆಯನ್ನು ನಡೆಸಲು ತೀರ್ಮಾನಿಸಲಾಗಿತ್ತು.
ಅದೇ ದಿನ ಯುಪಿಎಸ್‌ಸಿ ಪರೀಕ್ಷೆ ನಿಗದಿಯಾಗಿದ್ದರಿಂದ ಪರೀಕ್ಷೆಯನ್ನು ಮುಂದೂಡಬೇಕೆಂದು ಪ್ರತಿಪಕ್ಷ ಬಿಜೆಪಿ ಜೊತೆಗೆ ಅಭ್ಯರ್ಥಿಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿಕೊಂಡಿದ್ದರು.
ಸೆ.28 ರಂದು ನಿಗದಿಯಂತೆ ಪರೀಕ್ಷೆ ನಡೆಯಲಿದೆ. ಈ ಬಗ್ಗೆ ಯಾರಿಗೂ ಗೊಂದಲ ಬೇಡ. ಯುಪಿಎಸ್‌ಸಿ ಹಾಗೂ ಪಿಎಸ್‌ಐ ಪರೀಕ್ಷೆ ಏಕಕಾಲಕ್ಕೆ ನಡೆಯುತ್ತಿದ್ದುದರಿಂದ ಅಭ್ಯರ್ಥಿಗಳ ಮನವಿ ಮೇರೆಗೆ ಮುಂದೂಡಿಕೆ ಮಾಡಲಾಗಿದೆ ಎಂದು ಪರಮೇಶ್ವರ್ ತಿಳಿಸಿದರು.
ದಾವಣಗೆರೆ, ಧಾರವಾಡ, ಕಲಬುರಗಿ, ಶಿವಮೊಗ್ಗ, ವಿಜಯಪುರ ಜಿಲ್ಲೆಗಳಲ್ಲಿ ಒಟ್ಟು 66,999 ಮಂದಿ ಪಿಎಸ್‌ಐ ಪರೀಕ್ಷೆ ಬರೆಯಲಿದ್ದರು.
ದೈಹಿಕ ಪರೀಕ್ಷೆಯಲ್ಲಿ ಅರ್ಹತೆ ಪಡೆದವರಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಕೆಲ ದಿನಗಳ ಹಿಂದೆ ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ್ ನೇತೃತ್ವದ ನಿಯೋಗ ಪರಮೇಶ್ವರ್ ಅವರನ್ನು ಭೇಟಿ ಮಾಡಿ ಪಿಎಸ್‌ಐ ಪರೀಕ್ಷೆ ಮುಂದೂಡಬೇಕೆಂದು ಮನವಿ ಮಾಡಿದ್ದರು.
ಪಿಎಸ್‌ಐ ಹಾಗೂ ಯುಪಿಎಸ್‌ಸಿ ಪರೀಕ್ಷೆ ಏಕಕಾಲದಲ್ಲಿ ನಡೆಯುವುದರಿಂದ ಗೊಂದಲ ಉಂಟಾಗುತ್ತದೆ. ಹೀಗಾಗಿ ಪರೀಕ್ಷೆಯನ್ನು ಕೆಲ ದಿನಗಳ ಮಟ್ಟಿಗೆ ಮುಂದೂಡುವಂತೆ ಅಶ್ವತ್ಥನಾರಾತಣ ನೇತೃತ್ವದ ನಿಯೋಗ ಮನವಿ ಮಾಡಿಕೊಂಡಿತ್ತು.
ರಾಜ್ಯಸರ್ಕಾರ 384 ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿತ್ತು. ಇದೇ 22 ರಂದು ಪರೀಕ್ಷೆ ನಡೆಸಲು ಉದ್ದೇಶಿಸಲಾಗಿತ್ತು. 402 ಅಭ್ಯರ್ಥಿಗಳಲ್ಲಿ 102 ಅಭ್ಯರ್ಥಿಗಳು ಯುಪಿಎಸ್‌ಸಿ ಪರೀಕ್ಷೆಯನ್ನೂ ಸಹ ತೆಗೆದುಕೊಂಡಿದ್ದರು. ಹೀಗಾಗಿ ಮುಂದೂಡಬೇಕೆಂಬುದು ಅವರ ಆಗ್ರಹವಾಗಿತ್ತು. ಕರ್ನಾಟಕ ಪರೀಕ್ಷೆ ಪ್ರಾಧಿಕಾರದ ಮೂಲಕ 384 ಪಿಎಸ್‌ಐ ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗುತ್ತಿದೆ.