ಬೆಂಗಳೂರು,ಜ.20- ಪಿಎಸ್‍ಐಗಳ ನೇಮಕಾತಿ ಪರೀಕ್ಷೆಯಲ್ಲಿ ಯಾವುದೇ ಅಕ್ರಮಗಳಾಗದಂತೆ ಕಟ್ಟೆಚ್ಚರ ವಹಿಸಲಾಗಿದೆ. ಗುಪ್ತಚರ ಇಲಾಖೆಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ಕಲೆ ಹಾಕುವ ವೇಳೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗುತ್ತಿದೆ. ಅದರ ಸತ್ಯಾಸತ್ಯತೆ ಬಗ್ಗೆಯೂ ಸಿಸಿಬಿ ತನಿಖೆ ನಡೆಸುತ್ತಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈರಲ್ ಆಗಿರುವ ಆಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿದರು. ಕಳೆದ ಮೂರು ವರ್ಷಗಳಿಂದಲೂ ಪಿಎಸ್‍ಐ ಹುದ್ದೆಗಳ ನೇಮಕಾತಿ ಮಾಡಲು ಸಾಧ್ಯವಾಗಿಲ್ಲ. ಇದರಿಂದಾಗಿ ವ್ಯವಸ್ಥೆಯ ಮೇಲೆಯೇ ಜನರಿಗೆ ಅಪನಂಬಿಕೆ ಬರುವಂತಾಗಿದೆ. ಅದನ್ನು ಸುಳ್ಳು ಎಂದು ಸಾಬೀತುಪಡಿಸಲು ನಾವು ಕ್ರಮ ಕೈಗೊಂಡಿದ್ದೇವೆ. ಎಲ್ಲಾ ಪರೀಕ್ಷಾ ಕೇಂದ್ರಗಳನ್ನೂ ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದರು.
ಪರೀಕ್ಷೆ ಹಾಗೂ ನೇಮಕಾತಿ ಪ್ರಕ್ರಿಯೆಯಲ್ಲಿ ಹಿಂದೆ ನಡೆದ ಯಾವುದೇ ಲೋಪಗಳೂ ಮರುಕಳಿಸಬಾರದು ಎಂಬ ನಿಟ್ಟಿನಲ್ಲಿ ಗುಪ್ತಚರ ಇಲಾಖೆ ಎಚ್ಚರಿಕೆಯಿಂದ ಮಾಹಿತಿ ಕಲೆ ಹಾಕುತ್ತಿದೆ. ಗುಪ್ತಚರ ಇಲಾಖೆಯ ಅಧಿಕಾರಿಯೊಬ್ಬರು ತಾವು ಮಾಹಿತಿ ಕಲೆ ಹಾಕುವ ಸಲುವಾಗಿ ನಕಲಿ ಕರೆ ಮಾಡಿದ್ದಾಗಿ ಹೇಳುತ್ತಿದ್ದಾರೆ. ಅದರ ಸತ್ಯಾಸತ್ಯತೆ ಬಗ್ಗೆ ಕೂಡ ಸಿಸಿಬಿಯವರು ವಿಚಾರಣೆ ನಡೆಸುತ್ತಿದ್ದಾರೆ.
ಅಣಕು ಕರೆ ಮಾಡಿರುವುದು ನಿಜವೇ ಅಥವಾ ಯಾವುದಾದರೂ ಹಗರಣಗಳು ನಡೆದಿವೆಯೇ ಎಂಬುದರ ಬಗ್ಗೆಯೂ ಕೂಡ ಸಿಸಿಬಿಯವರು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹೇಳಿದರು. ರಾಜ್ಯದಲ್ಲಿ ಕಾನೂನು ಎಲ್ಲರಿಗೂ ಒಂದೇ. ನನ್ನನ್ನೂ ಒಳಗೊಂಡಂತೆ ಯಾರೇ ಆದರೂ ಕಾನೂನಿನ ವ್ಯಾಪ್ತಿಯಲ್ಲೇ ನಡೆದುಕೊಳ್ಳಬೇಕಿದೆ.
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಅವರ ಹೇಳಿಕೆ ಪಡೆಯಲು ಪೊಲೀಸ್ ಅಧಿಕಾರಿಗಳು ಪ್ರಯತ್ನಿಸಿದ್ದರು. ಅದರ ಬಗ್ಗೆ ಹರಿಪ್ರಸಾದ್ ನೀಡಿರುವ ಹೇಳಿಕೆಯನ್ನು ನಾನು ಗಮನಿಸಿದ್ದೇನೆ ಎಂದರು. ಹರಿಪ್ರಸಾದ್‍ರವರಿಗೆ ರಾಜಕೀಯವಾಗಿ ತೊಂದರೆ ಮಾಡುವ ಯಾವುದೇ ಹುನ್ನಾರಗಳಿಲ್ಲ. ಪೊಲೀಸರು ಕಾನೂನಿನ ಅನುಸಾರ ನಡೆದುಕೊಳ್ಳುತ್ತಾರೆ. ಕಲ್ಲಡ್ಕ ಪ್ರಭಾಕರ್ ಭಟ್ ಎಫ್‍ಐಆರ್ ದಾಖಲಿಸಿ ದೋಷಾರೋಪಣಾ ಪಟ್ಟಿ ಸಲ್ಲಿಸುವ ತಯಾರಿ ನಡೆದಿದೆ. ಸಂಸದ ಅನಂತಕುಮಾರ್ ಹೆಗ್ಡೆ ವಿರುದ್ಧವೂ ಎಫ್‍ಐಆರ್ ದಾಖಲಿಸಲಾಗಿದೆ. ಪೊಲೀಸರು ಎಲ್ಲರ ವಿಷಯದಲ್ಲೂ ಕಾನೂನಿನ ಪ್ರಕಾರದಲ್ಲೇ ನಡೆದುಕೊಳ್ಳುತ್ತಾರೆ ಎಂದು ಹೇಳಿದರು.
ಬೋರ್ಡಿಂಗ್ ಶಾಲೆಗೆ ಬೆಂ ಕಿ ಬಿದ್ದು 13 ವಿದ್ಯಾರ್ಥಿಗಳ ಸಾವು
ಒಳಮೀಸಲಾತಿ ವಿಚಾರವಾಗಿ ಕೇಂದ್ರದ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವರು ಒಳಮೀಸಲಾತಿ ನೀಡಲು ಸಾಧ್ಯವಿಲ್ಲ ಎಂದು ರಾಜ್ಯಸಭೆಯಲ್ಲಿ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತರುವಂತೆ ನಮ್ಮ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರಮೋದಿಯವರು ಈ ಹಿಂದೆ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಒಳಮೀಸಲಾತಿಗೆ ಸಂಬಂಧಪಟ್ಟಂತೆ ಭರವಸೆ ನೀಡಿದ್ದರು. ಅದರ ಅನುಸಾರ ಕೇಂದ್ರ ಉನ್ನತ ಸಮಿತಿಯೊಂದನ್ನು ರಚಿಸಿದೆ.
ಈಗ ಆ ಸಮಿತಿ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬುದು ಕಾದುನೋಡುತ್ತೇವೆ. ಸಂವಿಧಾನ ತಿದ್ದುಪಡಿಗೆ ಒಪ್ಪುತ್ತಾರೋ ಅಥವಾ ಬೇಡ ಎನ್ನುವ ತೀರ್ಮಾನ ಮಾಡುತ್ತಾರಾ ಎಂಬುದನ್ನು ನಿರೀಕ್ಷಿಸುತ್ತಿದ್ದೇವೆ ಎಂದರು.