ಹಾಸನ,ಡಿ.5- ಜನಕಲ್ಯಾಣ ಸಮಾವೇಶಕ್ಕೆ ಜನರನ್ನು ಕರೆತರಲು ಸಾರಿಗೆ ಬಸ್‌ಗಳನ್ನು ಬಳಕೆ ಮಾಡಿರುವ ಹಿನ್ನಲೆಯಲ್ಲಿ ನಿತ್ಯ ಪ್ರಯಾಣಿಸುವ ನೌಕರರು, ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರು ಬಸ್‌ಗಳಿಲ್ಲದೆ ಪರದಾಡುವಂತಾಗಿತ್ತು.
ಪ್ರತಿ ಜಿಲ್ಲೆಯಿಂದಲೂ ಜನರನ್ನು ಕರೆತರಲು ಸಾರಿಗೆ ಬಸ್‌ಗಳನ್ನು ಬಳಸಿಕೊಳ್ಳಲಾಗಿತ್ತು. ಇದರಿಂದ ಇಂದು ಬೆಳಿಗ್ಗೆ ಕೆಲಸ ಕಾರ್ಯಗಳಿಗೆ ತೆರಳಲು ತೀವ್ರ ತೊಂದರೆ ಉಂಟಾಗಿತ್ತು.
ಗ್ರಾಮೀಣ ಭಾಗಕ್ಕೆ ತೆರಳುವ ಬಸ್‌ಗಳು ವಿರಳವಾಗಿದ್ದು, ಖಾಸಗಿ ಆಟೋ, ವ್ಯಾನ್, ದ್ವಿಚಕ್ರ ವಾಹನ ಬಳಸುವಂತಹ ಅನಿವಾರ್ಯತೆ ಎದುರಾಗಿತ್ತು. ಗಂಟೆಗೊಂದು ಬಸ್‌ಗಳು ಬಂದಿದ್ದರಿಂದ ಪ್ರಯಾಣಿಕರಿಂದ ತುಂಬಿತ್ತು.
ವೃದ್ಧರು, ಮಹಿಳೆಯರು, ಮಕ್ಕಳು ಬಸ್‌ಗಳಲ್ಲಿ ಹತ್ತಲು ಪರದಾಡುವಂತಾಗಿತ್ತು. ಮೈಸೂರಿಗೂ ಸಹ ಬಸ್‌ನ ಕೊರತೆ ತಟ್ಟಿದ್ದು, ನೂರಾರು ಬಸ್‌ಗಳು ಜಿಲ್ಲೆಯಿಂದ ಹೊರಟಿದ್ದು, ಹುಣಸೂರು ತಾಲೂಕಿನ ಬಿಳಿಕೆರೆಯಲ್ಲಿ ಬಸ್‌ಗಳಿಲ್ಲದೆ ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ತೆರಳಲು ಪರದಾಡುವಂತಾಗಿತ್ತು. ಈ ವೇಳೆ ವಿದ್ಯಾರ್ಥಿಗಳು ಚಾಲಕರ ಜೊತೆ ಮಾತಿನ ಚಕಮಕಿ ನಡೆಸಿದರು.
ಬಸ್‌ಗಳಿಗೆ ಅಳವಡಿಸಲಾಗಿದ್ದ ಬ್ಯಾನರ್‌ಗಳನ್ನು ಕಿತ್ತೆಸೆದು ಆಕ್ರೋಶ ವ್ಯಕ್ತಪಡಿಸಿದರು. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ವಿದ್ಯಾರ್ಥಿಗಳ ಮನವೊಲಿಸಲು ಯತ್ನಿಸಿದರು.ಅದೇ ರೀತಿ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲೂ ಬಸ್‌ಗಳ ಕೊರತೆ ಎದುರಾಗಿದ್ದು, ಇಂದಿನ ಕೆಲಸ ಕಾರ್ಯಗಳಿಗೆ ತೊಂದರೆಯಾಗಿದೆ.