ಬೆಂಗಳೂರು,ಜ.5- ಆರ್ಥಿಕ ನಷ್ಟದ ಸುಳಿಗೆ ಸಿಲುಕಿರುವ ಸಾರಿಗೆ ನಿಗಮಗಳನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಏಕಾಏಕಿ ಶೇ.15ರಷ್ಟು ಬಸ್ ಪ್ರಯಾಣ ದರವನ್ನು ಪರಿಷ್ಕರಣೆ ಮಾಡಿರುವ ಸರ್ಕಾರದ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಒಂದು ಕಡೆ ಉಚಿತವಾಗಿ ಗ್ಯಾರಂಟಿ ಕೊಡುವ ಸರ್ಕಾರ ಮತ್ತೊಂದು ಕಡೆ ಅದೇ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ. ಹಾವು ಸಾಯಬಾರದು, ಕೋಲು ಮುರಿಯಬಾರದು ಎಂಬಂತಾಗಿದೆ ಸರ್ಕಾರದ ಧೋರಣೆ ಎಂದು ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
ನಾವೇನು ಉಚಿತ ಗ್ಯಾರಂಟಿಗಳನ್ನು ಕೊಡಿ ಎಂದು ಅಂಗಲಾಚಿದ್ದೆವಾ? ಚುನಾವಣೆಯಲ್ಲಿ ಗೆಲ್ಲಲು ಇವರಿಗೆ ಭಾಗ್ಯಗಳು ಬೇಕಾಗಿತ್ತು. ಈಗ ಅವುಗಳನ್ನು ಮುಂದುವರೆಸಲು ಮೀನಾಮೇಷ ಎಣಿಸುತ್ತಿದೆ. ಹೀಗಾಗಿ ಸಂಕಷ್ಟಕ್ಕೆ ಸಿಲುಕಿರುವ ನಮಗೆ ದರ ಏರಿಕೆ ಭಾಗ್ಯ ನೀಡುತ್ತಿದೆ ಎಂದು ಪುರುಷ ಪ್ರಯಾಣಿಕರು ಎಲ್ಲೆಡೆ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಈ ಪುರುಷಾರ್ಥಕ್ಕೆ ಸರ್ಕಾರ ಗ್ಯಾರಂಟಿ ಭಾಗ್ಯಗಳನ್ನು ನಿಲ್ಲಿಸುವುದೇ ಲೇಸು. ಈಗಾಗಲೇ ಕಳೆದ ಬಜೆಟ್‌ನಲ್ಲಿ ಡೀಸೆಲ್,ಪೆಟ್ರೋಲ್ ಮೇಲಿನ ಮಾರಾಟ ತೆರಿಗೆಯನ್ನು ಹೆಚ್ಚಳ ಮಾಡಲಾಗಿತ್ತು. ಜೊತೆಗೆ ಹಾಲಿನ ದರ, ವಿದ್ಯುತ್ ದರ ಪರಿಷ್ಕರಣೆ ಮಾಡಲಾಗಿದೆ.
ಒಂದು ಕಡೆ ಸರ್ಕಾರ ಎಲ್ಲವನ್ನೂ ಉಚಿತವಾಗಿ ಕೊಟ್ಟಿದ್ದೇವೆ. ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ ಎಂದು ಹೇಳುತ್ತಿದೆ. ಮತ್ತೊಂದು ಕಡೆ ಅದೇ ಜನರ ಜೇಬಿನಿಂದಲೇ ಬೆಲೆ ಏರಿಸುವ ಮೂಲಕ ಕಿತ್ತುಕೊಳ್ಳುತ್ತದೆ. ಇದನ್ನು ಕೊಟ್ಟರೂ ಸರಿಯೇ ಬಿಟ್ಟರೂ ಸರಿಯೇ ಎಂದು ಪ್ರಯಾಣಿಕರು ಶಾಪ ಹಾಕುತ್ತಿದ್ದಾರೆ.
ಕೇವಲ ಸಾರ್ವಜನಿಕರಿಂದ ಮಾತ್ರವಲ್ಲದೆ ಸರ್ಕಾರದ ಕ್ರಮವನ್ನು ವಿವಿಧ ರಾಜಕೀಯ ಮುಖಂಡರು ಕೂಡ ಖಂಡಿಸಿದ್ದಾರೆ. ಬಿಜೆಪಿ, ಜೆಡಿಎಸ್, ಆಮ್ ಆದಿ, ಕೆಆರ್‌ಎಸ್ ರೈತ ಸಂಘಟನೆಗಳು, ಎಡಪಕ್ಷಗಳು ಸೇರಿದಂತೆ ವಿವಿಧ ಸಂಘಟನೆಗಳು ಕೂಡ ಸರ್ಕಾರದ ಬೆಲೆ ಪರಿಷ್ಕರಣೆಗೆ ಕಿಡಿಕಾರಿದ್ದಾರೆ.
ಅಧಿಕೃತ ವಿರೋಧ ಪಕ್ಷವಾದ ಬಿಜೆಪಿ ರಾಜ್ಯದೆಲ್ಲೆಡೆ ಬಸ್ ಪ್ರಯಾಣ ದರ ಏರಿಕೆ ವಿರೋಧಿಸಿ ಪ್ರತಿಭಟನೆಗೆ ಕರೆ ಕೊಟ್ಟಿದೆ. ಇನ್ನು ಕೇಂದ್ರ ಸಚಿವ ಕುಮಾರಸ್ವಾಮಿ ಕೂಡ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಿರಂತರವಾಗಿ ಬೆಲೆ ಹೆಚ್ಚಳ ಮಾಡುವುದಾದರೆ ನೀವು ಭಾಗ್ಯಗಳನ್ನು ನಿಲ್ಲಿಸುವುದೇ ಸರಿಯಾದ ಕ್ರಮ ಎಂದು ಸಿಡಿಮಿಡಿಗೊಂಡರು.
ಕಾಂಗ್ರೆಸ್ ಸರ್ಕಾರದಿಂದ ಎತ್ತಿನಬಂಡಿ ಗ್ಯಾರಂಟಿ, ಸರ್ಕಾರ ಜಾಲಿ ಜಾಲಿ-ಜನರ ಜೇಬು ಖಾಲಿ ಖಾಲಿ ಎಂದು ಆಮ್ ಆದಿ ಪಾರ್ಟಿ ವಿಶೇಷವಾಗಿ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರದ ವಿರುದ್ಧ ಆಕ್ಷೇಪ ಎತ್ತಿದೆ. ಭ್ರಷ್ಟಾಚಾರವನ್ನು ನಿಲ್ಲಿಸದೆ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡದೆ ವಿಫಲವಾಗಿದೆ. ಹೀಗಾಗಿ ಪದೇ ಪದೇ ದರ ಏರಿಕೆ ಮಾಡುತ್ತಿದೆ ಎಂದು ಕಿಡಿಕಾರಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ 2 ಬಜೆಟ್‌ಗಳಲ್ಲಿ 2 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಈ ದುಡ್ಡು ಯಾರ ಜೇಬು ಸೇರುತ್ತಿದೆ ಎಂಬುದನ್ನು ಜನತೆಗೆ ತಿಳಿಸಬೇಕು. ಈಗಾಗಲೇ ಸ್ಟ್ಯಾಂಪ್ ಡ್ಯೂಟಿ, ಅಬಕಾರಿ ಸುಂಕ, ವಿದ್ಯುತ್ ದರ, ಹಾಲಿನ ದರ ಎಲ್ಲವನ್ನು ಗಗನಕ್ಕೆ ಮುಟ್ಟಿಸಿದ್ದಾರೆ. ಈಗ ಬಸ್ ದರ ಏರಿಸಿದ್ದಾರೆ.
ಮುಂದಿನ ದಿನಗಳಲ್ಲಿ ನೀರಿನ ದರವನ್ನು ಏರಿಸುತ್ತಿದ್ದಾರೆ. ಈ ರೀತಿಯ ಜನ ಪರ ಕಾಳಜಿ ಇಲ್ಲದ ಕಾಂಗ್ರೆಸ್ ಸರ್ಕಾರವು ಆರ್ಥಿಕ ದಿವಾಳಿಯಾಗುವ ಹಂತಕ್ಕೆ ತಲುಪಿರುವ ಅನುಮಾನ ಜನತೆಯಲ್ಲಿ ಕಾಡುತ್ತಿದೆ. ಬಸ್ ದರ ಏರಿಕೆಯನ್ನು ಈ ಕೂಡಲೇ ಹಿಂಪಡೆಯದಿದ್ದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಎಪಿ ಎಚ್ಚರಿಕೆ ಕೊಟ್ಟಿದೆ.
ಶ್ರೀಲಂಕಾ ಆಗದಿರಲಿ:
ದರ ಏರಿಕೆ ಕುರಿತು ಪರ-ವಿರೋಧ ವ್ಯಕ್ತವಾಗಿದ್ದು, ಇದೆಲ್ಲದರ ನಡುವೆಯೇ ಗೊಣಗಾಡುತ್ತ ಹೊಸ ದರದ ಟಿಕಟ್ ಖರೀದಿಸಿ ಪ್ರಯಾಣಿಸುತ್ತಿದ್ದ ದೃಶ್ಯಗಳು ಕಂಡುಬಂದವು.
ತುಮಕೂರಿಗೆ 80 ರೂ.ಗೆ ಹೋಗಿದ್ದೆ. ಇಂದು ಏಕೆ 91 ರೂ. ಎಂದು ಪ್ರಯಾಣಿಕರೊಬ್ಬರು ನಿರ್ವಾಹಕನ ವಿರುದ್ದ ವಾಕ್ಸಮರಕ್ಕಿಳಿದಿದ್ದ ದೃಶ್ಯ ಕಂಡುಬಂತು. ಇದು ನಾನೇನ್ ಹೆಚ್ಚಳ ಮಾಡಿಲ್ಲ ಸ್ವಾಮಿ, ಸರ್ಕಾರ ಮಾಡಿರುವುದು ಎಂದು ನಿರ್ವಾಹಕ ಟಿಕೆಟ್ ನೀಡುತ್ತಿದ್ದುದು ಕಂಡಬಂದಿತು.
ವೇಗದೂತ, ರಾಜಹಂಸ, ವೋಲ್ವೊ, ಸಾಮಾನ್ಯ ಕೆಎಸ್‌ಆರ್‌ಟಿಸಿ ಸೇರಿದಂತೆ ಎಲ್ಲಾ ಮಾದರಿಯ ಬಸ್‌ಗಳ ಪ್ರಯಾಣ ದರ ದರ ಹೆಚ್ಚಳ ಮಾಡಲಾಗಿದೆ. ಕರ್ನಾಟಕವನ್ನು ಕಾಂಗ್ರೆಸ್ ಸರ್ಕಾರ ಮತ್ತೊಂದು ಪಾಕಿಸ್ತಾನ ಇಲ್ಲವೇ ಶ್ರೀಲಂಕಾ ಮಾಡದಿರಲಿ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಜನವರಿ 2ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಎಲ್ಲಾ ಸರ್ಕಾರಿ ಬಸ್ ಟಿಕೆಟ್ ದರವನ್ನು ಶೇ 15ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ತಡರಾತ್ರಿ ಹನ್ನೆರಡು ಗಂಟೆಯಿಂದ ಹೊಸ ದರ ಜಾರಿಯಾಗಿದೆ.
ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ ಟಿಕೆಟ್ ದರ ಏರಿಕೆಯಾಗಿ ತಡರಾತ್ರಿ 12 ಗಂಟೆಯಿಂದ ಹೊಸ ದರ ಜಾರಿಯಾಗಿದೆ. ಹೊಸ ದರದಂತೆ ಕಂಡಕ್ಟರ್ ಟಿಕೆಟ್ ವಿತರಿಸಿದ್ದಾರೆ. ಹೆಚ್ಚಿನ ದುಡ್ಡು ಕೊಟ್ಟು ಪ್ರಯಾಣಿಕರು ಮೆಜೆಸ್ಟಿಕ್ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಿಂದ ದೂರದ ಊರುಗಳಿಗೆ ಪ್ರಯಾಣ ಬೆಳೆಸಿದರು.
ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹಳೇ ದರ – 312, ಈಗ ಹೊಸ ದರ-356. ಕಡೂರಿಗೆ ಹಳೇ ದರ – 241, ಹೊಸ ದರ- 271. ಭದ್ರಾವತಿಗೆ- ಹಳೇ ದರ – 294, ಹೊಸ ದರ -335 ಇಷ್ಟಾಗಿದೆ. ಈ ಹೊಸ ದರದಂತೆ ಪ್ರಯಾಣಿಕರು ಟಿಕೆಟ್ ಪಡೆದು ಪ್ರಯಾಣಿಸಿದ್ದಾರೆ.