Monday, June 24, 2024
Homeರಾಜ್ಯಪೆಟ್ರೋಲ್‌-ಡೀಸೆಲ್‌ ತೆರಿಗೆ ಹೆಚ್ಚಿಸಿ ಸುಲಿಗೆಗಿಳಿದ ಗ್ಯಾರಂಟಿ ಸರ್ಕಾರದ ವಿರುದ್ಧ ಜನಾಕ್ರೋಶ

ಪೆಟ್ರೋಲ್‌-ಡೀಸೆಲ್‌ ತೆರಿಗೆ ಹೆಚ್ಚಿಸಿ ಸುಲಿಗೆಗಿಳಿದ ಗ್ಯಾರಂಟಿ ಸರ್ಕಾರದ ವಿರುದ್ಧ ಜನಾಕ್ರೋಶ

ಬೆಂಗಳೂರು, ಜೂ.16- ಪೆಟ್ರೋಲ್‌, ಡೀಸೆಲ್‌ ಮಾರಾಟ ತೆರಿಗೆಯನ್ನು ಹೆಚ್ಚಿಸುವ ಮೂಲಕ ರಾಜ್ಯಸರ್ಕಾರ ಜನಾಕ್ರೋಶಕ್ಕೆ ಕಾರಣವಾಗಿದೆ.ನಿನ್ನೆ ಏಕಾಏಕಿ ಸರ್ಕಾರಿ ಆದೇಶ ಜಾರಿ ಮಾಡಿ ತಕ್ಷಣದಿಂದಲೇ ಜಾರಿಯಾಗುವಂತೆ ಪೆಟ್ರೋಲ್‌ ಮೇಲೆ 3 ರೂ. ಡೀಸೆಲ್‌ ಮೇಲೆ 3.50 ಪೈಸೆ ದರ ಹೆಚ್ಚಳ ಮಾಡಲಾಗಿದೆ.

ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ನಾಗರಿಕರಿಗೆ ಸರ್ಕಾರದ ಈ ಆದೇಶ ಗಾಯದ ಮೇಲೆ ಬರೆ ಎಳೆದಂತಾಗಿದೆ. ತೈಲ ಬೆಲೆ ಏರಿಕೆ ಸಹಜವಾಗಿಯೇ ಸರಕು ಸಾಗಾಣಿಕೆ ಸೇವೆಗಳ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಅಗತ್ಯ ವಸ್ತುಗಳ ಬೆಲೆ ಕೂಡ ದುಬಾರಿಯಾಗಲಿದೆ.

ದೈನಂದಿನ ಜೀವನದಲ್ಲಿ ಸಾರಿಗೆ ವೆಚ್ಚ ಅತ್ಯಂತ ಮಹತ್ವದ ಪಾತ್ರ ವಹಿಸುತ್ತಿದೆ. ತೈಲ ಬೆಲೆ ಏರಿಕೆಯಿಂದಾಗಿ ತರಕಾರಿ, ದಿನಸಿ ಸೇರಿದಂತೆ ಎಲ್ಲಾ ವಸ್ತುಗಳ ಬೆಲೆಯನ್ನೂ ಹೆಚ್ಚಿಸಲಿದೆ.ವಿಧಾನಸಭಾ ಚುನಾವಣೆಗೂ ಮೊದಲು ಪೆಟ್ರೋಲ್‌, ಡೀಸೆಲ್‌ ಮತ್ತು ಅಡುಗೆ ಅನಿಲದ ಬೆಲೆ ಏರಿಕೆಯನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ಕಾಂಗ್ರೆಸ್‌‍ ಪಕ್ಷ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿಯನ್ನು ಟೀಕಿಸಿತ್ತು. ಹಾದಿಬೀದಿಯಲ್ಲಿ ಪ್ರತಿಭಟನೆ ನಡೆಸಿ ಜನಾಕ್ರೋಶವನ್ನು ಹೆಚ್ಚುವಂತೆ ಮಾಡಿತ್ತು.

ಅಧಿಕಾರಕ್ಕೆ ಬಂದ ಬಳಿಕವೂ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯನ್ನೇ ಮುಂದಿಟ್ಟುಕೊಂಡು ಕೇಂದ್ರದ ಮೇಲೆ ವಾಗ್ದಾಳಿ ನಡಸಲಾಗುತ್ತಿತ್ತು. ಈಗ ತಾನಾಗಿಯೇ ಮಾರಾಟ ತೆರಿಗೆಯನ್ನು ಪರಿಷ್ಕರಣೆ ಮಾಡುವ ಮೂಲಕ ಸಿಕ್ಕಿ ಹಾಕಿಕೊಂಡಂತಾಗಿದೆ.

ಜಿಎಸ್‌‍ಟಿ ವ್ಯಾಪ್ತಿಯಿಂದ ಹೊರಗಿರುವ ತೈಲ ಮಾರಾಟದಿಂದ ರಾಜ್ಯಸರ್ಕಾರಕ್ಕೆ ಕೇಂದ್ರಕ್ಕೆ ಸಮನಾಂತರವಾಗಿಯೇ ಆದಾಯ ಬರುತ್ತಿದೆ. ಪೆಟ್ರೋಲ್‌ ಮೇಲೆ ಈ ಮೊದಲಿದ್ದ ಸರಿಸುಮಾರು 26 ರಷ್ಟು ತೆರಿಗೆ ಈಗ 29.84 ಕ್ಕೆ ಹೆಚ್ಚಾಗಿದೆ. ಡೀಸೆಲ್‌ ಮೇಲಿನ ತೆರಿಗೆ ಶೇ.14.34 ರಿಂದ ಶೇ.18.44 ರಷ್ಟು ಏರಿಕೆಯಾಗಿದೆ. ಇದರಿಂದ ಸರಿಸುಮಾರು 2 ರಿಂದ 3 ಸಾವಿರ ಕೋಟಿ ರೂ.ಗಳಷ್ಟು ಆದಾಯವನ್ನು ರಾಜ್ಯಸರ್ಕಾರ ಪಡೆಯುತ್ತಿದೆ.

ಕೇಂದ್ರ ಸರ್ಕಾರ ಲೋಕಸಭಾ ಚುನಾವಣೆಗೂ ಮೊದಲು ಜನಾಕ್ರೋಶವನ್ನು ಮನಗಂಡು ಪೆಟ್ರೋಲ್‌, ಡೀಸೆಲ್‌ ದರವನ್ನು ಕಡಿಮೆ ಮಾಡಿತ್ತು. ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಕೇಂದ್ರ ಸರ್ಕಾರ ದರ ಪರಿಷ್ಕರಣೆ ಮಾಡಲಿದೆ ಎಂಬ ಅಂದಾಜುಗಳಿದ್ದವು. ಆದರೆ ಅದಕ್ಕೂ ಮೊದಲೇ ರಾಜ್ಯಸರ್ಕಾರ ಮಾರಾಟ ತೆರಿಗೆಯನ್ನು ಹೆಚ್ಚಿಸುವ ಮೂಲಕ ಮರ್ಮಾಘಾತ ನೀಡಿದೆ.

ಈ ಬೆಳವಣಿಗೆ ಜನರ ಸಿಟ್ಟಿಗೆ ಕಾರಣವಾಗಿದ್ದು, ರಾಜಕೀಯ ಕಾರಣಕ್ಕಾಗಿ ಪಂಚಖಾತ್ರಿ ಯೋಜನೆಗಳನ್ನು ಜಾರಿಗೆ ತಂದು ಅದರ ಹೊರೆಯನ್ನು ಜನರ ಮೇಲೆ ಹಾಕಲಾಗುತ್ತಿದೆ ಎಂಬ ಆಕ್ರೋಶ ತೀವ್ರಗೊಂಡಿದೆ.

ಆಂತರಿಕವಾಗಿ ರಾಜ್ಯಸರ್ಕಾರ ಇದೇ ರೀತಿಯ ಜನಾಭಿಪ್ರಾಯ ರೂಢಿಯಾಗಬೇಕು ಎಂಬ ಮುಂದಾಲೋಚನೆ ಇಟ್ಟುಕೊಂಡು ತೈಲಬೆಲೆ ಪರಿಷ್ಕರಣೆ ಮಾಡಿದಂತಿದೆ. ಗ್ಯಾರಂಟಿ ಯೋಜನೆಗಳ ಬಗ್ಗೆ ವ್ಯಾಪಕ ಟೀಕೆಗಳು ಕೇಳಿಬಂದಿದ್ದು, ಅದನ್ನು ಸ್ಥಗಿತಗೊಳಿಸಬೇಕು ಎಂಬ ಒತ್ತಡಗಳು ಹೆಚ್ಚಾದರೆ ರಾಜ್ಯಸರ್ಕಾರ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿಯಂತಹ ಯೋಜನೆಗಳಿಗೆ ಕಡಿವಾಣ ಹಾಕಿ ವೆಚ್ಚವನ್ನು ತಗ್ಗಿಸಲು ಮಾರ್ಗಸೂಚಿ ರೂಪಿಸಬಹುದು ಎಂಬ ಲೆಕ್ಕಾಚಾರ ಇದ್ದಂತಿದೆ.

ಪಂಚಖಾತ್ರಿ ಯೋಜನೆಗಳಿಗೆ ಬಜೆಟ್‌ನಲ್ಲಿ ಈಗಾಗಲೇ ಹಣಕಾಸು ಹೊಂದಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ ಬೇರೆ ಅಭಿವೃದ್ಧಿ ಯೋಜನೆಗಳಿಗೆ ಸಂಪನೂಲದ ಕೊರತೆಯಿದೆ. ಅದನ್ನು ಸರಿದೂಗಿಸಲು ಪೆಟ್ರೋಲ್‌, ಡೀಸೆಲ್‌ ಮೇಲೆ ತೆರಿಗೆ ಹೆಚ್ಚಿಸುವುದಾಗಿ ತಿಳಿದುಬಂದಿದೆ.

ಸರ್ಕಾರ ರಚನೆಯಾಗುತ್ತಿದ್ದಂತೆ ಸ್ಟಾಂಪ್‌ ಡ್ಯೂಟಿ, ಅಬಕಾರಿ ಶುಲ್ಕ ಹೆಚ್ಚಿಸಲಾಗಿತ್ತು. ಹಿಂದಿನ ಸರ್ಕಾರ ಹೆಚ್ಚಿಸಿದ್ದ ವಿದ್ಯುತ್‌ ದರದ ಲಾಭವೂ ಕಾಂಗ್ರೆಸ್‌‍ ಸರ್ಕಾರಕ್ಕೆ ದೊರೆತ್ತಿತ್ತು. ಈಗ ನೇರವಾಗಿ ಪೆಟ್ರೋಲ್‌, ಡೀಸೆಲ್‌ ಮೇಲೆಯೇ ಶುಲ್ಕ ಹೆಚ್ಚಿಸಿರುವುದರಿಂದ ಮತ್ತಷ್ಟು ಆದಾಯ ನಿರೀಕ್ಷಿಸಲಾಗುತ್ತಿದೆ.

RELATED ARTICLES

Latest News