ಬೆಂಗಳೂರು, ಮಾ.28- ಮೆಟ್ರೋ, ಬಸ್ ಪ್ರಯಾಣದರ, ಹಾಲು, ವಿದ್ಯುತ್ ದರ ಏರಿಕೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸರಣಿ ಬೆಲೆ ಏರಿಕೆಯಿಂದ ಹೈರಾಣಾಗಿರುವ ಶ್ರೀಸಾಮಾನ್ಯರು ಸರ್ಕಾರದ ವಿರುದ್ಧ ಕಿಡಿಕಾರಿದ್ದು, ಇದೇ ರೀತಿ ನಿರಂತರ ಬೆಲೆ ಏರಿಕೆಯಾದರೆ ಹೇಗೆ ಬದುಕಬೇಕೆಂದು ಅಲವತ್ತುಕೊಂಡಿದ್ದಾರೆ.
ರೈತರ ನೆಪ ಹೇಳಿಕೊಂಡು ಹಾಲು, ಮೊಸರಿಗೆ 4ರೂ. ದರ ಹೆಚ್ಚಿಸಿ ಸರ್ಕಾರ ಜನಸಾಮಾನ್ಯರನ್ನು ಸುಲಿಗೆ ಮಾಡಲು ಹೊರಟಿದೆ. ಹಾಲು ಉತ್ಪಾದಕರಿಗೆ ಅನುಕೂಲ ಮಾಡಿಕೊಡಬೇಕೆಂ ದಿದ್ದರೆ ಹಿಂಡಿ, ಬೂಸಾ ದರ ಕಡಿಮೆ ಮಾಡಬೇಕಿತ್ತು. ಅದನ್ನು ಬಿಟ್ಟು ಗ್ರಾಹಕರನ್ನು ಸುಲಿಗೆ ಮಾಡಿ ರೈತರಿಗೆ ಉಪಯೋಗ ಮಾಡುವುದು ಎಷ್ಟು ಸಮಂಜಸ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಬಂದ ಎರಡು ವರ್ಷಗಳಿಂದ ಬರೀ ಬೆಲೆ ಏರಿಕೆ ಮಾಡುವುದರಲ್ಲೇ ನಿರತವಾಗಿದೆ. ಕಳೆದ ಎರಡು-ಮೂರು ತಿಂಗಳಲ್ಲಿ ಮೆಟ್ರೋ, ಬಸ್, ವಿದ್ಯುತ್, ಹಾಲಿನ ದರ, ಕುಡಿಯುವ ನೀರಿನ ದರ ಏರಿಕೆಯಾಗಿದೆ. ಈಗ ಆಟೋ ಪ್ರಯಾಣ ದರವನ್ನೂ ಏರಿಸಲು ಮುಂದಾಗಿದೆ.
ಹಾಲಿನ ದರ ಏರಿಕೆಯಿಂದ ಹೋಟೆಲ್‌ನಲ್ಲಿ ಕಾಫಿ, ಟೀ ದರವೂ ಏರಿಕೆಯಾಗಲಿದೆ. ಉಚಿತವಾಗಿ ಗ್ಯಾರಂಟಿಗಳನ್ನು ನೀಡುತ್ತೇವೆ ಎಂದು ಹೇಳುತ್ತಿರುವ ಸರ್ಕಾರ ಮತ್ತೊಂದೆಡೆಯಿಂದ ಬೆಲೆ ಏರಿಸಿ ಮಧ್ಯಮ ಹಾಗೂ ಬಡ ಜನರನ್ನು ಸುಲಿಗೆ ಮಾಡಲು ಹೊರಟಿದೆ.
ಹಬ್ಬದ ಸಂದರ್ಭದಲ್ಲಿ ಜನರಿಗೆ ರಿಯಾಯಿತಿ ದರದಲ್ಲಿ ವಸ್ತುಗಳು ಸಿಗಬೇಕಿತ್ತು. ಆದರೆ, ಸರ್ಕಾರ ಹಾಲು, ವಿದ್ಯುತ್ ದರ ಏರಿಸಿ ಡಬ್ಬಲ್ ಶಾಕ್ ನೀಡಿದೆ. ಇದೇ ರೀತಿ ಮಾಡಿದರೆ ಬೆಲೆ ಏರಿಕೆಯನ್ನು ನಿಯಂತ್ರಿಸದಿದ್ದರೆ ಈ ಸರ್ಕಾರಕ್ಕೆ ಜನರೇ ಹಾಲು-ತುಪ್ಪ ಬಿಡುತ್ತಾರೆ ಎಂದು ಹಲವು ಮಹಿಳೆಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಿತಿಮೀರಿ ಮೆಟ್ರೋ ಪ್ರಯಾಣ ದರ ಏರಿಸಲಾಗಿತ್ತು. ಅದರ ಬೆನ್ನಲ್ಲೇ ಬಸ್ ಪ್ರಯಾಣ ದರವನ್ನೂ ಏರಿಸಲಾಯಿತು. ಈಗ ಹಾಲಿನ ದರ ಏರಿಸಲಾಗಿದೆ. ಹಾಲು ಆಬಾಲವೃದ್ಧರಾದಿಯಾಗಿ ಎಲ್ಲರೂ ಬಳಸುವಂತಹ ಪದಾರ್ಥ. ಅಗತ್ಯವಾದ ಈ ಹಾಲಿನ ಉತ್ಪನ್ನಗಳ ಬೆಲೆ ಏರಿಕೆಯನ್ನು ಮನಬಂದಂತೆ ಮಾಡಬಾರದು. ಇದೇ ರೀತಿ ಮಾಡಿದರೆ ಮಾರುಕಟ್ಟೆ ಸ್ಪರ್ಧೆಯಲ್ಲಿ ನಮ್ಮ ಹಾಲಿಗೆ ಹೊಡೆತ ಬೀಳುತ್ತದೆ.
ಬೇರೆ ರಾಜ್ಯದ ಹಾಲಿನ ದರ ಹೆಚ್ಚಾಗಿದೆ ಎಂದು ನೆಪ ಹೇಳಿ ಪದೇ ಪದೇ ಹಾಲಿನ ದರವನ್ನು ಹೆಚ್ಚಿಸುತ್ತಾ ಹೋದರೆ ಜನಸಾಮಾನ್ಯರಿಗೆ ಹೊರೆಯಾಗುತ್ತದೆ. ಕೂಡಲೇ ದರ ಏರಿಕೆಯನ್ನು ಮರು ಪರಿಶೀಲಿಸಬೇಕೆಂದು ಜನರು ಆಗ್ರಹಿಸಿದ್ದಾರೆ.
ಇದು ದರ ಏರಿಕೆ ಮತ್ತು ತೆರಿಗೆ ಏರಿಕೆಯ ಸರ್ಕಾರವಾಗಿದೆ. ಮೂರು ಬಾರಿ ಹಾಲಿನ ದರ ಏರಿಕೆ ಮಾಡಲಾಗಿದೆ. ವಿದ್ಯುತ್‌ಬಿಲ್‌ನಲ್ಲಿ ಪದೇ ಪದೇ ಶಾಕ್ ನೀಡಲಾಗುತ್ತಿದೆ. ಈಗಾಗಲೇ ದಿನಬಳಕೆ ವಸ್ತುಗಳ ಬೆಲೆ ಗಗನಮುಖಿಯಾಗಿದೆ. ಇದರ ನಡುವೆ ಹಾಲು-ಮೊಸರಿನ ಬೆಲೆ ಕೂಡ ಏರಿಕೆಯಾಗಿರುವುದು ಜನರ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಆಳುವ ಸರ್ಕಾರಗಳು ಜನಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸಬೇಕೇ ಹೊರತು ಜನರನ್ನು ಸಂಕಷ್ಟಕ್ಕೆ ದೂಡಬಾರದು. ಎಲ್ಲ ಸರ್ಕಾರಗಳೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಬೆಲೆ ಏರಿಸುತ್ತಲೇ ಬಂದಿವೆ. ಇತ್ತೀಚೆಗಂತೂ ಸರಣಿ ಬೆಲೆ ಏರಿಕೆಯಿಂದ ಜನ ತತ್ತರಿಸಿಹೋಗಿದ್ದಾರೆ.ಜನರ ಸಿಟ್ಟು ರಟ್ಟೆಗೆ ಬರುವ ಮುನ್ನ ಎಚ್ಚೆತ್ತುಕೊಳ್ಳಬೇಕು. ಜನರ ಸಂಕಷ್ಟಕ್ಕೆ ಸ್ಪಂದಿಸಬೇಕಾಗಿರುವುದು ಪ್ರಭುತ್ವದ ಜವಾಬ್ದಾರಿಯಾಗಿದೆ.