ಹೊಸದಿಲ್ಲಿ, ಆ.9 (ಪಿಟಿಐ) ದೇಶದ ಗಣ್ಯ ವ್ಯಕ್ತಿಗಳ ಹತ್ಯೆಗೆ ಸಂಚು ರೂಪಿಸುತ್ತಿದ್ದ ಭಯೋತ್ಪಾದಕನೊಬ್ಬನನ್ನು ಬಂಧಿಸುವಲ್ಲಿ ದೆಹಲಿ ವಿಶೇಷ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಭಯೋತ್ಪಾದಕನನ್ನು ದೆಹಲಿಯ ದರಿಯಾಗಂಜ್ ನಿವಾಸಿ ರಿಜ್ವಾನ್ ಅಬ್ದುಲ್ ಹಾಜಿ ಆಲಿ ಎಂದು ಗುರುತಿಸಲಾಗಿದೆ.ಈತ ಐಸಿಸ್ ಭಯೋತ್ಪಾದಕ ಸಂಘಟನೆಯ ಪುಣೆ ಮಾಡ್ಯೂಲ್‌ನ ಸದಸ್ಯನಾಗಿದ್ದ ಹಾಗೂ ಹಲವಾರು ಉಗ್ರ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿ-ಫರಿದಾಬಾದ್ ಗಡಿಯಿಂದ ಪಡೆದ ರಹಸ್ಯ ಸುಳಿವಿನ ಮೇರೆಗೆ ವಿಶೇಷ ಪೊಲೀಸ್ ದಳದ ಅಧಿಕಾರಿಗಳು ಉಗ್ರನನ್ನು ಬಂಧಿಸಿದ್ದಾರೆ.ರಿಜ್ವಾನ್ ಬಳಿ ಇದ್ದ ಅಕ್ರಮ ಬಂದೂಕು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿಯ ದರಿಯಾಗಂಜ್ ನಿವಾಸಿ ರಿಜ್ವಾನ್ ಅಬ್ದುಲ್ ಹಾಜಿ ಅಲಿ ಬಂಧನಕ್ಕೆ ರಾಷ್ಟ್ರೀಯ ತನಿಖಾ ಸಂಸ್ಥೆ 3 ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು.ದೆಹಲಿ-ಎನ್‌ಸಿಆರ್ ಮೂಲದ ಕೆಲವು ವಿಐಪಿಗಳ ಮೇಲೆ ಸಂಭವನೀಯ ದಾಳಿಗಾಗಿ ಆತ ಸಂಚೂ ರೂಪಿಸಿದ್ದ ಎಂದು ಶಂಕಿಸಲಾಗಿದೆ.
ಉಗ್ರನನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಬಂಧಿತ ಉಗ್ರನ ಜೊತೆ ಸಂಪರ್ಕ ಹೊಂದಿರುವವರು ಹಾಗೂ ಆತನಿಗೆ ನಿರ್ದೇಶನ ನೀಡುತ್ತಿರುವವರು ಯಾರು ಎಂಬ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.