ಬೆಲೆ ಕಟ್ಟಲಾಗದ ಬೆಟ್ಟದ ಹೂ ಅಪ್ಪು.. ದೈಹಿಕವಾಗಿ ಎಲ್ಲರನ್ನು ಅಗಲಿ ಇಂದಿಗೆ ನಾಲ್ಕು ವರ್ಷ.. ಅಭಿಮಾನಿಗಳ ಮನಸ್ಸಲ್ಲಿ ಈಗಲೂ ಚಿರಾಯು.. ಅಪ್ಪು ಅವರ ಸಮಾಜಮುಖಿ ಕೆಲಸಗಳು, ಅವರ ನಗುಮುಖ ಈ ಎಲ್ಲದರ ಮುಖಾಂತರ ಅವರನ್ನ ಜೀವಂತವಾಗಿ ನೋಡ್ತಿದ್ದಾರೆ. ಇಂದು ಅವರ ಪುಣ್ಯ ಸ್ಮರಣೆ. ರಾಜ್ ಕುಮಾರ್ ಸ್ಮಾರಕದ ಬಳಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದಾರೆ. ಪ್ರತಿ ವರ್ಷ ಕೂಡ ಈ ಅಭಿಮಾನದಲ್ಲಿ ಕಡಿಮೆ ಆಗ್ತಿಲ್ಲ, ಹೆಚ್ಚೆ ಆಗ್ತಿದೆ. ಇದು ಅಪ್ಪು ಸಂಪಾದಿಸಿದ ಪ್ರೀತಿ, ಅಭಿಮಾನ.
ಅಕ್ಟೋಬರ್ 29 ಅಂದ್ರೆ ಎಲ್ಲರ ಕೈ ಕಾಲು ನಡುಗುತ್ತೆ.. ಮನಸ್ಸು ದುಃಖಿಸುತ್ತೆ.. ಅಂದು ಅಪ್ಪು ಎಂಬ ಬೆಳಕನ್ನ ವಿಧಿ ಎಂಬ ಯಮ ಹೊತ್ತುಕೊಂಡು ಹೋಗಿತ್ತು. ಕೊರಗಿದ್ದು ಲಕ್ಷಾಂತರ ಮನಸ್ಸುಗಳು. ಅಪ್ಪನನ್ನ ಕಳೆದುಕೊಂಡು ಆ ಮುದ್ದು ಮಕ್ಕಳು ಕಣ್ಣೀರಿಟ್ಟಿದ್ದೆಷ್ಟೋ.. ಪ್ರೀತಿಸಿದ ಹೃದಯ ನಿಂತಿದ್ದಕ್ಕೆ ಅಶ್ವಿನಿ ಅವರು ಮೌನವಾಗಿ ಕುಳಿತು ಬಿಟ್ಟರು.

ಅಪ್ಪು ನೋಡಲು ಎಲ್ಲೆಲ್ಲಿಂದಲೋ ಬಂದ ಅಭಿಮಾನಿಗಳು 30 ಲಕ್ಷಕ್ಕೂ ಹೆಚ್ಚು.. ಉಫ್ ಇಂದಿಗೂ ಆ ದಿನ ನೆನಪಾದರೆ ಅರಿವಿಗೆ ಬಾರದಂತೆ ಕಣ್ಣಂಚಲ್ಲಿ ನೀರು ಬರುತ್ತೆ. ಆದರೂ ಎಲ್ಲರೂ ಮನಸ್ಸಲ್ಲಿ ಹೇಳಿಕೊಳ್ಳುವುದು ಅಪ್ಪು ಫಾರ್ ಎವರ್.

ಚಿಕ್ಕ ವಯಸ್ಸಲ್ಲಿಯೇ ರಾಷ್ಟ್ರಪ್ರಶಸ್ತಿ ಪಡೆದವರು, ಅಪ್ಪನ ತೇಜಸ್ಸನ್ನ ತನ್ನ ಅಭಿನಯದಲ್ಲಿ ತಂದವರು. ಅವರ ಸಿನಿಮಾಗಳೆಲ್ಲಾ ಹಿಟ್ ಲೀಸ್ಟ್ ಗೆ ಸೇರಿದವು. ಸಹಾಯ ಬೇಡಿದ ಸಾವಿರಾರು ಕೈಗಳಿಗೆ ಯಾರಿಗೂ ತಿಳಿಯದಂತೆ ಸಹಾಯ ಮಾಡಿದರು. ಆ ಸಹಾಯವೇ ಅಪ್ಪುನ ಇಂದು ದೇವರಾಗಿಸಿದೆ. ಆ ದೇವರು ಕಣ್ಮರೆಯಾಗಿ ಇಂದಿಗೆ ನಾಲ್ಕು ವರ್ಷ. ಅಪ್ಪು ಸ್ಮರಣೆಯಲ್ಲಿ ಅಭಿಮಾನಿಗಳ ಸಾಗರ.
