ಬೆಂಗಳೂರು, ಮೇ 2- ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶವು ಇಂದು ಪ್ರಕಟಗೊಂಡಿದ್ದು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಬಾಡಿಗಾರ್ಡ್ ಆಗಿದ್ದ ಛಲಪತಿ ಅವರ ಪುತ್ರ ಹರ್ಷವರ್ಧನ್ 595 ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡು ಶಾಲೆ ಹಾಗೂ ಪೋಷಕರಿಗೆ ಕೀರ್ತಿ ತಂದಿದ್ದಾನೆ.
ಪುನೀತ್ ರಾಜ್ ಕುಮಾರ್ ಅವರು ಛಲಪತಿ ಅವರ ಮಕ್ಕಳಾದ ಅಮೂಲ್ಯ ಹಾಗೂ ಹರ್ಷವರ್ಧನ್ ಅವರ ವಿದ್ಯಾಭ್ಯಾಸಕ್ಕೆ ಸಾಕಷ್ಟು ಆರ್ಥಿಕ ನೆರವು ನೀಡಿದ್ದರು. ಇತ್ತೀಚೆಗೆ ಪ್ರಕಟಗೊಂಡಿದ್ದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಅಮೂಲ್ಯ ಕೂಡ 600 ಅಂಕಗಳಿಗೆ 566 ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾರೆ.
ಈಗ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹಿಂದಿಯಲ್ಲಿ 100ಕ್ಕೆ 100 ಅಂಕ ಪಡೆದಿರುವ ಛಲಪತಿ ಅವರ ಪುತ್ರ ಹರ್ಷವರ್ಧನ್, ಕನ್ನಡದಲ್ಲಿ 121, ಇಂಗ್ಲೀಷ್ ನಲ್ಲಿ 93, ಗಣಿತದಲ್ಲಿ 97, ವಿಜ್ಞಾನದಲ್ಲಿ 86, ಸಮಾಜ ವಿಜ್ಞಾನದಲ್ಲಿ 98 ಅಂಕಗಳು ಸೇರಿದಂತೆ 625 ಅಂಕಗಳಿಗೆ 595 ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗುವ ಮೂಲಕ ಅಮೋಘ ಸಾಧನೆ ಮಾಡಿದ್ದಾನೆ.
ಛಲಪತಿ ಅವರು ತಮ ಪುತ್ರ ಹರ್ಷವರ್ಧನ್ ಪಡೆದಿರುವ ಅಂಕಗಳ ಪ್ರತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದು, ಇದನ್ನು ಕಂಡ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳು ಹರ್ಷವರ್ಧನ್ ಸಾಧನೆಯನ್ನು ಮೆಚ್ಚಿಕೊಂಡಿದ್ದಾರೆ.