ಬೆಳಗಾವಿ,ಮೇ.16-ಬೆಳಗಾವಿ ತಾಲೂಕಿನ ಸಂತಿಬಸ್ತವಾಡ ಗ್ರಾಮದಲ್ಲಿ ಕುರಾನ್ ಪುಸ್ತಕ ಕಳ್ಳತನ ಮಾಡಿ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಆರೋಪದ ಮೇರೆಗೆ ಬೆಳಗಾವಿ ಗ್ರಾಮೀಣ ಠಾಣೆ ಇನ್ಸ್‌ಪೆಕ್ಟರ್ ಮಂಜುನಾಥ ಹಿರೇಮಠ ಅವರನ್ನು ಅಮಾನತು ಮಾಡಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಆದೇಶ ಹೊರಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತರು, ಪುಸ್ತಕ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಐ ಮಂಜುನಾಥ ಹಿರೇಮಠ ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇವರ ಲೋಪ ಮೇಲ್ನೋಟಕ್ಕೆ ಕಂಡು ಬಂದಿದೆ. ಬಂತಿ ಬಸ್ತವಾಡ ಗ್ರಾಮದಲ್ಲಿ ಈದ್ದಾ ಗೋಪುರ ಧ್ವಂಸ ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ನಿರ್ಲಕ್ಷ್ಯ ವಹಿದ್ದರು ಎಂದರು.
ಮುಸ್ಲಿಂ ಸಮುದಾಯದ ಜನರು ಇಂದು ಚೆನ್ನಮ್ಮ ವೃತ್ತದಲ್ಲಿ ಬೃಹತ್ ಪ್ರತಿಭಟನೆಗೆ ಮುಂದಾಗಿದ್ದು ಇದರ ನಡುವೆ ಅಮಾನತು ಆದೇಶ ಹೊರಬಿದ್ದಿದೆ. ಪ್ರಕರಣದಾರೋಪಿಗಳು ಇನ್ನೂ ಸಿಗದಿದ್ದರೂ, ಇದೇ ಗ್ರಾಮದಲ್ಲಿ ಈ ಹಿಂದಿನ ಮಸೀದಿ ಗೋಪುರ ಧ್ವಂಸಗೊಳಿಸಿದ್ದರೆನ್ನಲಾದ ಪ್ರಕರಣದಲ್ಲಿ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.