Tuesday, January 21, 2025
Homeರಾಜ್ಯರಾಜ್ಯದಲ್ಲಿ ಮಿತಿಮೀರಿದ ಅತ್ಯಾಚಾರ, ಸುಲಿಗೆ ಪ್ರಕರಣಗಳು : ಅಶೋಕ್ ಆಕ್ರೋಶ

ರಾಜ್ಯದಲ್ಲಿ ಮಿತಿಮೀರಿದ ಅತ್ಯಾಚಾರ, ಸುಲಿಗೆ ಪ್ರಕರಣಗಳು : ಅಶೋಕ್ ಆಕ್ರೋಶ

Excessive rape and extortion cases in the state: Ashok outraged

ಬೆಂಗಳೂರು,ಜ. 21- ಕೆ.ಆರ್.ಮಾರುಕಟ್ಟೆಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ಸುಲಿಗೆ, ವಿಜಯಪುರದಲ್ಲಿ ಮೂವರು ಕೂಲಿ ಕಾರ್ಮಿಕರನ್ನು ಕಟ್ಟಿ ಹಾಕಿ ಅಮಾನವೀಯ ಹಲ್ಲೆ, ಕಾನೂನು ಸುವ್ಯವಸ್ಥೆಯ ಗ್ಯಾರೆಂಟಿ ಎಲ್ಲಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್. ಆಶೋಕ್ ರಾಜ್ಯ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ.

ಈ ಕುರಿತು ತಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸರ್ಕಾರದ ವಿರುದ್ಧ ಸಾಲು ಸಾಲು ಪೋಸ್ಟ್ ಮಾಡಿರುವ ಅವರು, ಬೀದರ್, ಮಂಗಳೂರು, ಚಿತ್ರದುರ್ಗ, ಮೈಸೂರು, ಆನೇಕಲ್, ಹುಬ್ಬಳ್ಳಿಯಲ್ಲಿ – 5 ದಿನಗಳ ಅಂತರದಲ್ಲಿ ಒಟ್ಟು 6 ದರೋಡೆ, ಸುಲಿಗೆ, ಕಳ್ಳತನ ಪ್ರಕರಣಗಳು ಎಂದು ಸರ್ಕಾರದ ಗಮನವನ್ನು ಸೆಳೆದಿದ್ದಾರೆ.

ಸ್ವಾಮಿ ಸಿಎಂ ಸಿದ್ದರಾಮಯ್ಯನವರೇ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಪಾತಾಳಕ್ಕೆ ಕುಸಿದಿದೆ. ಜನಸಾಮಾನ್ಯರು ಭಯಭೀತರಾಗಿ ದಿನಕಳೆಯುವ ದುಸ್ಥಿತಿ ಬಂದಿದೆ. ಹೆಣ್ಣುಮಕ್ಕಳು ಸುರಕ್ಷಿತವಾಗಿ ಓಡಾಡುವ ವಾತಾವರಣ ಇಲ್ಲದಂತಾಗಿದೆ. ಕುರ್ಚಿಗೆ ಅಂಟಿಕೊಂಡು ಇನ್ನೆಷ್ಟು ದಿನ ಇಂತಹ ಕೆಟ್ಟ ಸರ್ಕಾರ ನಡೆಸುತ್ತೀರಿ. ತಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಈ ದುರಾಡಳಿತದಿಂದ, ಆರಾಜಕತೆಯಿಂದ ರಾಜ್ಯದ ಜನತೆಗೆ ಮುಕ್ತಿ ನೀಡಿ ಎಂದು ಆಗ್ರಹಿಸಿದ್ದಾರೆ.

ಮತ್ತೊಂದು ಪೋಸ್ಟ್ ನಲ್ಲಿ ಕೊಠಡಿಗೆ ಬೀಗ, ಸಿಬ್ಬಂದಿ ಗೈರು! ಇದು ಕಾಂಗ್ರೆಸ್ ಸರ್ಕಾರದ ಹೊಸ ಘೋಷವಾಕ್ಯ! ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಸರ್ಕಾರ ಕೇವಲ ಗುರುವಾರದ ಸರ್ಕಾರವಾಗಿದ್ದು, ಸಂಪುಟ ಸಭೆ ನಡೆಯುವ ದಿನ ಮಾತ್ರ ಮುಖ್ಯಮಂತ್ರಿಗಳು, ಸಚಿವರು, ಅಧಿಕಾರಿಗಳು ವಿಧಾನಸೌಧದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ವಾಗ್ದಳಿ ನಡೆಸಿದ್ದಾರೆ.
ಪರಿಸ್ಥಿತಿ ಹೀಗಿರುವಾಗ ಇನ್ನು ಬೇರೆ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ತಾನೇ ಏನು ಮಾಡುತ್ತಾರೆ? ಎಂದು ಅಶೋಕ್ ಪ್ರಶ್ನೆ ಮಾಡಿದ್ದಾರೆ.

ಇನ್ನೊಂದು ಪೋಸ್ಟ್ನಲ್ಲಿ ಕಾಂಗ್ರೆಸ್ ಹೆಸರಿಗೆ ಮಾತ್ರ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ! ಇಲ್ಲಿ ಯಾರಿಗಾದರೂ ಗಾಂಧೀಜಿ, ಬಾಬಾಸಾಹೇಬ್ ಅಂಬೇಡ್ಕರ್ ಅಥವಾ ಸಂವಿಧಾನ ಪುಸ್ತಕದ ಕಟೌಟ್ ಕಾಣಿಸಿದರೆ ತೋರಿಸಿ ಎಂದು ಕುಹಕವಾಡಿದ್ದಾರೆ. ನನಗಂತೂ ನಕಲಿ ಗಾಂಧಿಗಳು ಮತ್ತು ಅವರ ಗುಲಾಮರು ಮಾತ್ರ ಕಾಣಿಸುತ್ತಿದ್ದಾರೆ ಎಂದು ಅಶೋಕ್ ಟೀಕಾ ಪ್ರಹಾರ ನಡೆಸಿದ್ದಾರೆ.

RELATED ARTICLES

Latest News