ಬೆಂಗಳೂರು,ಆ.9- ರಾಜಧಾನಿ ಬೆಂಗಳೂರಿನ ಸೆಂಟ್ರಲ್ ಲೋಸಕಭಾ ಕ್ಷೇತ್ರದ ಮಹಾದೇವಪುರದಲ್ಲಿ ಮತಗಳ್ಳತನ ನಡೆದಿದೆ ಎಂಬ ಲೋಕಸಭಾ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿಗೆ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ 5 ಪ್ರಶ್ನೆಗಳ ಮೂಲಕ ವಾಗ್ದಳಿ ನಡೆಸಿದ್ದಾರೆ.
ಸುಳ್ಳುಬುರುಕ, ರಣಹೇಡಿ ರಾಹುಲ್ ಗಾಂಧಿ ಅವರಿಗೆ ನನ್ನ ಐದು ಪ್ರಶ್ನೆಗಳು ಎಂದು ಕಿಡಿಕಾರಿರುವ ಆಶೋಕ್ ಲೋಕಸಭಾ ಚುನಾವಣೆ ನಡೆಯುವಾಗ ರಾಜ್ಯದಲ್ಲಿ ಅಧಿಕಾರ ಇದ್ದದ್ದು ನಿಮ್ಮದೇ ಕಾಂಗ್ರೆಸ್ ಸರ್ಕಾರ. ಚುನಾವಣಾ ಆಯೋಗ ಕೂಡ ರಾಜ್ಯ ಸರ್ಕಾರದ ಅಧಿಕಾರಿಗಳನ್ನೇ ನಿಯೋಜನೆ ಮಾಡಿಕೊಂಡು ಕಾರ್ಯ ನಿರ್ವಹಿಸಿರುವುದು. ಹೀಗಿರುವಾಗ ಯಾವ ಆಧಾರದ ಮೇಲೆ ಬಿಜೆಪಿ ಪಕ್ಷವನ್ನ, ಪ್ರಧಾನ ಮಂತ್ರಿಗಳನ್ನ, ಕೇಂದ್ರ ಸರ್ಕಾರವನ್ನ ದೂಷಿಸುತ್ತಿದ್ದೀರಿ? ಎಂದು ಪ್ರಶ್ನೆ ಮಾಡಿದ್ದಾರೆ.
ರಾಜ್ಯದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಎಲ್ಲ ಪಕ್ಷಗಳಗಳಂತೆ ಪ್ರತಿ ಬೂತ್‌ಗೆ ಕಾಂಗ್ರೆಸ್ ಪಕ್ಷ ಕೂಡ ಬಿಎಲ್‌ಎಗಳನ್ನು (ಬೂತ್ ಲೆವೆಲ್ ಏಜೆಂಟ್) ನೇಮಕ ಮಾಡಿತ್ತು. ಅವರನ್ನು ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ನೇಮಿಸಿರುತ್ತಾರೆ. ಮತದಾರರ ಪಟ್ಟಿಯ ಪ್ರತಿಯನ್ನು ಮತದಾನಕ್ಕೂ ಮುಂಚೆಯೇ ಎಲ್ಲ ಪಕ್ಷಗಳ ಬಿಎಲ್‌ಎಗ ಗಳಿಗೆ ನೀಡಲಾಗುತ್ತದೆ ಎಂಬ ಕನಿಷ್ಠ ಅರಿವು ರಾಹುಲ್ ಗಾಂಧಿ ಅವರಿಗೆ ಇಲ್ಲವೇ? ಕಾಂಗ್ರೆಸ್ ಪಕ್ಷದ ಏಜೆಂಟರುಗಳು ಏನು ಮಾಡುತ್ತಿದ್ದರು? ಎಂದು ತರಾಟೆ ತೆಗೆದುಕೊಂಡಿದ್ದಾರೆ.
ಪರಿಷ್ಕೃತ ಕರಡು ಮತದಾರರ ಪಟ್ಟಿ ಯಾವುದೇ ಚುನಾವಣೆಯ 3-4 ತಿಂಗಳು ಮುಂಚೆಯೇ ಪ್ರಕಟವಾಗುತ್ತದೆ. ಅದನ್ನು ಎಲ್ಲಾ ಪಕ್ಷಗಳಿಗೂ ನೀಡಲಾಗುತ್ತದೆ. ಅದನ್ನಿಟ್ಟುಕೊಂಡು ರಾಜಕೀಯ ಪಕ್ಷಗಳ ಬೂತ್ ಮಟ್ಟದ ಕಾರ್ಯಕರ್ತರು ಮನೆ ಮನೆಗೆ ಹೋಗಿ ಮತದಾರರಿಗೆ ಚೀಟಿ ಕೂಡ ಕೊಟ್ಟು ಬರುತ್ತಾರೆ. ಹಾಗಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಗೆ ಮೊದಲು ಏನು ಮಾಡುತ್ತಿತ್ತು? ಎಂದು ಮತ್ತೊಂದು ಪ್ರಶ್ನೆ ಮಾಡಿದ್ದಾರೆ.
ಚುನಾವಣಾ ಫಲಿತಾಂಶ ಬಂದಮೇಲೆ 45 ದಿನಗಳವರೆಗೆ ನ್ಯಾಯಾಲಯದಲ್ಲಿ ಆಕ್ಷೇಪಣೆ ಸಲ್ಲಿಸಲು ಅವಕಾಶ ಇರುತ್ತದೆ. ಆದರೆ ಅನುಮಾನ ಇರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಚುನಾವಣೆ ಆದ ಒಂದು ವರ್ಷದವರೆಗೆ ಏನು ಮಾಡುತ್ತಿದ್ದರು? ಬಿಹಾರ ಚುನಾವಣೆಯ ಸೋಲಿಗೆ ನಿರೀಕ್ಷಣಾ ಜಾಮೀನು ಪಡೆಯಲು ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದರಾ? ಎಂದು ಕಿಡಿಕಾರಿದ್ದಾರೆ.
ಒಳಮೀಸಲಾತಿಗೆ ಸಂಬಂಧಿಸಿದ ಸಮೀಕ್ಷೆಗೆ, ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದ ಸಮೀಕ್ಷೆಗೆ ಸಾರ್ವಜನಿಕವಾಗಿ ಲಭ್ಯವಿರುವ ಮತದಾರರ ಪಟ್ಟಿಯನ್ನು ಬಳಸಿಕೊಂಡು ಸಮೀಕ್ಷಾ ಕಾರ್ಯ ನಡೆಸಬೇಕು ಎಂದು ತಮ್ಮದೇ ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ನಿರ್ಧಾರ ಮಾಡಿದೆ. ಹಾಗಾದರೆ ಮತದಾರರ ಪಟ್ಟಿ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗು ಅವರ ಸಂಪುಟಕ್ಕೆ ನಂಬಿಕೆ ಇದೆ. ಆದರೆ ರಾಹುಲ್ ಗಾಂಧಿ ಅವರಿಗೆ ಮಾತ್ರ ಇಲ್ಲ, ಅಲ್ಲವೇ? ಎಂದು ವಾಗ್ದಳಿ ನಡೆಸಿದ್ದಾರೆ.
135 ಸೀಟು ಗೆದ್ದಾಗ ಸಂಭ್ರಮಿಸಿ ಬೀಗುವುದು, ಸೋತು ಸುಣ್ಣವಾದಾಗ ಹತಾಶೆಯಲ್ಲಿ ಚುನಾವಣಾ ಆಯೋಗದ ಮೇಲೆ, ಚುನಾವಣಾ ಪ್ರಕ್ರಿಯೆ ವಿಪಕ್ಷಗಳ ಮೇಲೆ ಸಂದೇಹ ಪಟ್ಟು ಅಪಪ್ರಚಾರ ಮಾಡುವುದು, ಈ ನಾಟಕವನ್ನು ನಂಬುವಷ್ಟು ದಡ್ಡರಲ್ಲ ಕನ್ನಡಿಗರು. ಇನ್ನಾದರೂ ಜನಾದೇಶವನ್ನ ಒಪ್ಪಿಕೊಂಡು ಜವಾಬ್ದಾರಿಯುತ ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡಿ ಎಂದು ಆಶೋಕ್ ಅವರು, ರಾಹುಲ್ ಗಾಂಧಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.