Saturday, October 5, 2024
Homeರಾಜಕೀಯ | Politicsಏಕವಚನದಲ್ಲೇ "ಬುದ್ದಿವಂತ ಅರ್ಥಶಾಸ್ತ್ರಜ್ಞ" ಸಿದ್ದರಾಮಯ್ಯ ವಿರುದ್ಧ ಅಶೋಕ್ ಹಿಗ್ಗಾಮುಗ್ಗಾ ವಾಗ್ದಾಳಿ

ಏಕವಚನದಲ್ಲೇ “ಬುದ್ದಿವಂತ ಅರ್ಥಶಾಸ್ತ್ರಜ್ಞ” ಸಿದ್ದರಾಮಯ್ಯ ವಿರುದ್ಧ ಅಶೋಕ್ ಹಿಗ್ಗಾಮುಗ್ಗಾ ವಾಗ್ದಾಳಿ

ಬೆಂಗಳೂರು,ಜೂ.27-ಬಡವರಿಗೆ ಸಹಾಯ ಮಾಡುವ ಜ್ಞಾನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇಲ್ಲ. ಅದೇನಾದರೂ ಇದ್ದರೆ ದುಡ್ಡು ಹೊಡೆಯುವ ಜ್ಞಾನ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ಜಾಸ್ತಿ ಹಾಲು ಕೊಡಬೇಕೆಂದು ನಿಮನ್ನು ಯಾರು ಕೇಳಿದರು? ಯಾರಾದರೂ ಬಂದು ಕೇಳಿದ್ದರಾ? ಅರ್ಜಿ ಕೊಟ್ಟು 50 ಎಂಎಲ್‌ ಜಾಸ್ತಿ ಕೊಡಿ ಎಂದು ಒತ್ತಾಯಿಸಿದವರ್ಯಾರು? ಎಂದು ಪ್ರಶ್ನಿಸಿದ್ದಾರೆ.

ಈ ಸರ್ಕಾರ ಹಾಲನ್ನು ಹಾಲಾಹಲ ಮಾಡಿದೆ. ವರ್ಷದ ಹಿಂದೆ 3 ರೂ. ಈಗ 2 ರೂ. ಏರಿಕೆ ಆಗಿದೆ. ಮೊದಲ ಶೇ.80ರಷ್ಟು ಹಣ ರೈತರಿಗೆ ಕೊಡುತ್ತೇವೆ ಎಂದರು, 10 ಪೈಸೆ ಹಣವನ್ನೂ ಕೊಟ್ಟಿಲ್ಲ. 50 ಎಂಎಲ್‌ಗೆ 2 ರೂ. ಜಾಸ್ತಿ ಮಾಡಿದ್ದೀನಿ ಎನ್ನತ್ತೀರಾ? ಅಪ್ಪಾ ಬುದ್ದಿವಂತ ಅರ್ಥಶಾಸ್ತ್ರಜ್ಞರೇ ದೇಶಕ್ಕೆ ಅರ್ಥ ಹೇಳಿ ಕೊಡೋಕೆ ಹೋಗ್ತಿದ್ದೀಯ ಎಂದು ಏಕವಚನದಲ್ಲೇ ವಾಗ್ದಾಳಿ ಮಾಡಿದ್ದಾರೆ.

ಕೆಂಪೇಗೌಡ ಜಯಂತಿಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡದಿರುವುದಕ್ಕೆ ಕಿಡಿಕಾರಿದ ಅವರು, ಕುಮಾರಸ್ವಾಮಿ ಕೇಂದ್ರ ಸಚಿವರು. ಈ ಸಮಾಜದ ಪ್ರಶ್ನಾತೀಥ ನಾಯಕರು. ನಾವಿನ್ನು ಬೆಳೆಯಬೇಕು. ಮಾಜಿ ಪ್ರಧಾನಿ ದೇವೇಗೌಡರು ಎತ್ತರಕ್ಕೆ ಬೆಳೆದಿದ್ದಾರೆ. ಮಾಜಿ ಪ್ರಧಾನಿಗಳಿಗೆ ಗೌರವ ಕೊಡಬೇಕಿತ್ತು. ಗೌರವ ಕೊಡೋದು ಸರ್ಕಾರದ ಕೆಲಸ ಎಂದರು.

ಕೆಂಪೇಗೌಡರ ಜಯಂತಿ ರಾಜಕೀಯ ವೇದಿಕೆ ಆಗಬಾರದು. ಇದು ದ್ವೇಷದ ರಾಜಕಾರಣಸರ್ಕಾರ ದ್ವೇಷ ರಾಜಕಾರಣದಿಂದ ಹೊರ ಬರಬೇಕು. ಸರ್ಕಾರ ಜನರ ದುಡ್ಡಲ್ಲಿ ಜಯಂತಿ ಮಾಡುತ್ತಿದೆ. ಕಾಂಗ್ರೆಸ್‌‍ ಅವರು ಸ್ವಂತ ದುಡ್ಡಲ್ಲಿ ಮಾಡಲಿ ಆಗ ಯಾರನ್ನ ಬೇಕಾದರೂ ಕರೆಯಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚನ್ನಪಟ್ಟಣ ಕ್ಷೇತ್ರಕ್ಕೆ ಮೈತ್ರಿ ಒಂದೇ ಅಭ್ಯರ್ಥಿ ಕುಮಾರಸ್ವಾಮಿ ಹೇಳಿದ್ದಾರೆ. ನಾವು ಗೆಲ್ಲಬೇಕು ಅಷ್ಟೇ ಗೆಲ್ಲುವವರು ಯಾರಾದರೂ ಪರವಾಗಿಲ್ಲ ಅಂದಿದ್ದಾರೆ. ಡಿಸಿಎಂ ಅವರಿಗೆ ಚನ್ನಪಟ್ಟಣ ಬಗ್ಗೆ ಪ್ರೀತಿ ಬಂದಿದೆ. ಮೂರು ಉಪಚುನಾವಣೆಯಲ್ಲಿ ಕಾಂಗ್ರೆಸ್‌‍ಗೆ ಮೂರು ನಾಮ ಹಾಕಬೇಕು. ಆಗ ಈ ಬೆಲೆ ಏರಿಕೆ ಎಲ್ಲ ನಿಲ್ಲುತ್ತವೆ. ಕಾಂಗ್ರೆಸ್‌‍ಗೆ ಬಿಪಿ, ಶುಗರ್‌ ಲೆವಲ್‌ ಏರಿಕೆ ಆಗಿದೆ. ಹೀಗಾಗಿ ಶಾಕ್‌ ಟ್ರೀಟ್‌ಮೆಂಟ್‌ ಕೊಡಬೇಕು ಎಂದು ಅಪಹಾಸ್ಯ ಮಾಡಿದರು.

RELATED ARTICLES

Latest News