ಬೆಂಗಳೂರು,ಜು.7– ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಘೀ ಪ್ರಕರಣಗಳು ಉಲ್ಬಣಿಸುತ್ತಿದ್ದು, ಸರ್ಕಾರ ಕೂಡಲೇ ಡೆಂಘೀ ತುರ್ತು ಘೋಷಿಸಿ ಪ್ರತಿಯೊಬ್ಬರಿಗೂ ಉಚಿತವಾಗಿ ಚಿಕಿತ್ಸೆ ನೀಡಲು ಮುಂದಾಗಬೇಕೆಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ಜಯನಗರದ ಜನರಲ್ ಆಸ್ಪತ್ರೆಯಲ್ಲಿ ಡೆಂಘೀ ಸೋಂಕಿತರ ಆರೋಗ್ಯ ವಿಚಾರಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಕಳೆದ ಹಲವು ದಿನಗಳಿಂದ ಡೆಂಘೀ ಮಹಾಮಾರಿಯಾಗಿ ಪರಿ ಣಮಿಸಿದೆ. ರಾಜ್ಯದಲ್ಲಿ ಪ್ರತಿ ದಿನ ಮೂರರಿಂದ 4 ಜನ ಸಾವನ್ನ ಪ್ಪುತ್ತಿದ್ದಾರೆ. ಕೂಡಲೇ ಡೆಂಘೀ ತುರ್ತು ಘೋಷಿಸಿ ಉಚಿತವಾಗಿ ಚಿಕಿತ್ಸೆ ನೀಡ ಬೇಕೆಂದು ಒತ್ತಾಯಿಸಿದರು.
ಭಾನುವಾರವೂ ಇಬ್ಬರು ಮಕ್ಕಳು ಡೆಂಘೀಯಿಂದ ಮೃತಪಟ್ಟಿರುವುದಾಗಿ ವರದಿಯಾಗಿದೆ. ಇದು ಅತ್ಯಂತ ಬೇಸರದ ಸಂಗತಿ. ಈ ಹಿಂದೆ ಕೋವಿಡ್-19 ಕಾಣಿಸಿಕೊಂಡಾಗ ನಮ ಸರ್ಕಾರ ಪ್ರತಿಯೊಬ್ಬರಿಗೂ ಉಚಿತವಾಗಿ ಚಿಕಿತ್ಸೆ ನೀಡಿತ್ತು. ಡೆಂಘೀ ಪರೀಕ್ಷೆ ಮಾಡುವಂತೆ ಸರ್ಕಾರ ತಕ್ಷಣವೇ ಆದೇಶ ಹೊರಡಿಸಬೇಕು, ಇದಕ್ಕೂ ಕೂಡ ಸರ್ಕಾರ ದರ ನಿಗದಿಪಡಿಸಬಾರದೆಂದು ಮನವಿ ಮಾಡಿದರು.
ಮೊದಲು ಉಚಿತವಾಗಿ ಕೊಟ್ಟು ನಂತರ ಜನರಿಂದ ಹಣ ವಸೂಲಿ ಮಾಡುವ ಕೆಲಸ ಮಾಡಬೇಡಿ. ಹೆಚ್ಚೆಂದರೆ 10 ಕೋಟಿ ಖರ್ಚಾಗಬಹುದು. ಮೂರವರೆ ಲಕ್ಷ ಕೋಟಿ ಬಜೆಟ್ ಮಂಡಿಸುವ ಸರ್ಕಾರಕ್ಕೆ ಇದು ಯಾವ ಲೆಕ್ಕವೂ ಅಲ್ಲ. ಜನರ ರಕ್ಷಣೆಗೆ ನಾವಿದ್ದೇನೆ ಎಂದು ಸರ್ಕಾರ ಅಭಯ ನೀಡಬೇಕೆಂದು ಮನವಿ ಮಾಡಿದರು.
ಕೋವಿಡ್ ಮಾದರಿಯಲ್ಲಿ ಡೆಂಘೀಗೂ ಪ್ರತ್ಯೇಕವಾದ ವಾರ್ಡ್ಗಳನ್ನು ಮಾಡಬೇಕು. ನನಗಿರುವ ಮಾಹಿತಿ ಪ್ರಕಾರ ರಾಜ್ಯದ ಅನೇಕ ಕಡೆ ಆಸ್ಪತ್ರೆಗಳಲ್ಲಿ ಔಷಧಿಯ ಕೊರತೆ ಇದೆ. ತಕ್ಷಣವೇ ಅಧಿಕಾರಿಗಳ ಸಭೆ ಕರೆದು ಈ ಸಮಸ್ಯೆಯನ್ನು ಪರಿಹರಿಸಬೇಕು. ಜನರು ಪರೀಕ್ಷೆ ಮಾಡಿಕೊಳ್ಳದೇ ಇರುವುದರಿಂದ ಪ್ರಕರಣಗಳು ಹೆಚ್ಚಾಗುತ್ತಿವೆ. ಮೊದಲು ಅಧಿಕಾರಿಗಳು ಎಸಿ ಕೊಠಡಿಯಿಂದ ಹೊರಬಂದು ಕೆಲಸ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದೆ ನಾನು ಆರೋಗ್ಯ ಸಚಿವನಾಗಿ ಕೆಲಸ ಮಾಡಿದ ಅನುಭವದಲ್ಲಿ ಸರ್ಕಾರಕ್ಕೆ ನನ್ನದೇ ಆದ ಸಲಹೆಗಳನ್ನು ಕೊಡುತ್ತಿದ್ದೇನೆ. ವಿರೋಧ ಪಕ್ಷದ ನಾಯಕನಾಗಿ ನಾನು ಮಾಡಬೇಕಾದ ಕರ್ತವ್ಯವೂ ಹೌದು. ಈಗಾಗಲೇ ಝೀಕಾ ವೈರಸ್ನಿಂದ ಒಬ್ಬರು ಮೃತಪಟ್ಟಿದ್ದಾರೆ. ಕಾಲರದಿಂದಲೂ ಜನರು ಸಾಯುತ್ತಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡು ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕೆಂದು ಅಶೋಕ್ ಒತ್ತಾಯಿಸಿದರು.
ಕೇವಲ ಅಧಿಕಾರಿಗಳ ಜೊತೆ ಸಭೆ ನಡೆಸಿದರೆ ಪ್ರಯೋಜನವಿಲ್ಲ. ಪ್ರತಿಯೊಬ್ಬರು ಮೈಚಳಿ ಬಿಟ್ಟು ಕೆಲಸ ಮಾಡಬೇಕು. ಡೆಂಘೀ ಹಾಗೂ ಝೀಕಾ ವೈರಸ್ ನಿಯಂತ್ರಣಕ್ಕೆ ಎಷ್ಟು ಹಣ ಮೀಸಲಿಟ್ಟಿದೆ ಎಂಬುದನ್ನು ಸರ್ಕಾರ ಬಹಿರಂಗಪಡಿಸಬೇಕು, ನೀವು ಸಭೆಗಳ ಮೇಲೆ ಸಭೆ ನಡೆಸಿದರೆ ಅದರು ಕಾಫಿ, ಟೀ, ದೋಸೆಗೆ ಸೀಮಿತವಾಗುತ್ತದೆ ಎಂದು ವ್ಯಂಗ್ಯವಾಡಿದರು.
ಇದಕ್ಕೂ ಮೊದಲು ಜಯನಗರದ ಆಸ್ಪತ್ರೆಗೆ ಭೇಟಿ ನೀಡಿದ ಅಶೋಕ್, ಡೆಂಘೀ ಪ್ರಕರಣದಿಂದ ಬಳಲುತ್ತಿರುವ ರೋಗಿಗಳನ್ನು ಭೇಟಿಯಾಗಿ ಅವರ ಯೋಗಕ್ಷೇಮವನ್ನು ವಿಚಾರಿಸಿದರು.
ಜಯನಗರದ ಸಂಜಯಗಾಂಧಿ ಜನರಲ್ ಅಸ್ಪತ್ರೆಗೂ ಭೇಟಿ ಕೊಟ್ಟ ಅಶೋಕ್, ಪ್ರತಿಯೊಬ್ಬ ರೋಗಿಗಳ ಬಳಿ ತೆರಳಿ ಆರೋಗ್ಯ ವಿಚಾರಿಸಿದರು. ನಿಮನ್ನು ವೈದ್ಯರು ಸರಿಯಾಗಿ ನೋಡಿಕೊಳ್ಳುತ್ತಿದ್ದಾರೆಯೇ? ಸಕಾಲಕ್ಕೆ ಸರಿಯಾಗಿ ಔಷಧಿ, ಊಟ ಕೊಡುತ್ತಿದ್ದಾರೆಯೇ? ಹೆಚ್ಚಿನ ಹಣ ಕೇಳುತ್ತಿದ್ದಾರೆಯೇ ಎಂದು ವಿಚಾರಿಸಿದರು.
ನೀವು ದೃತಿಗೆಡಬೇಡಿ. ಧೈರ್ಯದಿಂದಿರಿ. ಆದಷ್ಟು ಬೇಗ ಗುಣಮುಖರಾಗುತ್ತೀರಿ ಎಂದು ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಸ್ಥಳೀಯ ಶಾಸಕ ಸಿ.ಕೆ.ರಾಮಮೂರ್ತಿ ಮತ್ತಿತರು ಇದ್ದರು.