Sunday, September 8, 2024
Homeರಾಜ್ಯಡಿ.ಕೆ.ಶಿವಕುಮಾರ್ ಟೀಕೆಗೆ ಅಶೋಕ್ ತಿರುಗೇಟು

ಡಿ.ಕೆ.ಶಿವಕುಮಾರ್ ಟೀಕೆಗೆ ಅಶೋಕ್ ತಿರುಗೇಟು

ಹಾಸನ, ಜು.21- ಉಪಮುಖ್ಯಮಂತ್ರಿಗಳೇ ಮನೆ ಬಿಟ್ಟು ಹೊರಗೆ ಬನ್ನಿ. ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿ ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರು ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕೊಲ್ಲಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದರೆ ಏನೂ ಪ್ರಯೋಜನ ಆಗಲ್ಲ ಎಂಬ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಕೇಂದ್ರ ಸಚಿವರು ಬಂದರೆ ಪರಿಹಾರ ಸಿಗುತ್ತಿಲ್ಲ ಎನ್ನುತ್ತೀರಾ. ನೀವಾದರೂ ಬನ್ನಿ. ನಿಮಗೆ ಯೋಗ್ಯತೆ ಇಲ್ಲವೆ. ನೀವು ಬಂದು ಬೇರೆಯವರಿಗೆ ಬುದ್ಧಿ ಹೇಳಿ ಎಂದರು. ನೀವು ಕೊಡುತ್ತಿರುವುದು NDRF ಹಣ. ನೀವು ನಯಾಪೈಸಾ ಪರಿಹಾರ ಕೊಟ್ಟಿಲ್ಲ. ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಇಲ್ಲಿಗೆ ಬರಲು ಹಕ್ಕಿದೆ. ಕೇಳಲು ಹಕ್ಕಿದೆ.

ಕುಮಾರಸ್ವಾಮಿಯವರು ಕೇಂದ್ರ ಮಂತ್ರಿ ರಾಷ್ಟ್ರೀಯ ಹೆದ್ದಾರಿ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ನಾವೆಲ್ಲಾ ಒಕ್ಕೂಟದ ವ್ಯವಸ್ಥೆಯಲ್ಲಿದ್ದೇವೆ ಎಂದು ಅಶೋಕ್ ತಿರುಗೇಟು ನೀಡಿದರು. ಕುಮಾರಸ್ವಾಮಿ ಅವರ ಕೈಯಲ್ಲಿ ಆಗುವುದಿಲ್ಲ ಎಂದಾದರೆ ನೀವು ಬಂದು ಕೆಲಸ ಮಾಡಿ ಜನರ ಕಷ್ಟಗಳಿಗೆ ಸ್ಪಂದಿಸಿ. ಕೇಂದ್ರ ಸಚಿವರಾದ ಕುಮಾರಸ್ವಾಮಿಯವರು ದೇಶವನ್ನೆಲ್ಲಾ ಸುತ್ತಬೇಕು. ಅದರ ನಡುವೆ ಕರ್ನಾಟಕಕ್ಕೆ ಆದ್ಯತೆ ನೀಡಿ ಬರುತ್ತಿದ್ದಾರೆ. ನಿಮಗೆ ಏಕೆ ಬರಲು ಆಗುತ್ತಿಲ್ಲ. ಈ ಸರ್ಕಾರ ಸತ್ತು ಹೋಗಿದೆ. ಬದುಕಿದ್ದರೆ ತಾನೇ ಏನಾದರೂ ಕೇಳಲು ಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಗರಣಗಳಲ್ಲಿ ಸರ್ಕಾರ ಮುಳುಗಿ ಹೋಗಿದ್ದು, ಅದರಿಂದ ಉತ್ತರ ಕೊಡಲು ಆಗುತ್ತಿಲ್ಲ. ಮೊದಲು ಸರ್ಕಾರ ಬದುಕಿದೆ ಎಂಬುದನ್ನು ತೋರಿಸಲಿ ಎಂದು ಟೀಕಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಸ್ವರೂಪ್ ಪ್ರಕಾಶ್, ಸಿ.ಎನ್. ಬಾಲಕೃಷ್ಣ, ಎಚ್.ಕೆ. ಸುರೇಶ್, ಮಾಜಿ ಶಾಸಕರಾದ ಎಚ್.ಕೆ. ಕುಮಾರಸ್ವಾಮಿ, ಕೆ.ಎಸ್. ಲಿಂಗೇಶ್ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.

RELATED ARTICLES

Latest News