ಬೆಂಗಳೂರು,ಜ.16- ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರವಾಗಿ ಸಚಿವರು, ಶಾಸಕರು ಸೇರಿದಂತೆ ಎಲ್ಲರೂ ಬ್ಯಾಟಿಂಗ್ ಮಾಡುತ್ತಿದ್ದಾರೆ. ಆದರೆ ಉಪಮುಖ್ಯಮಂತ್ರಿಯಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ಗೆ ಹೈಕಮಾಂಡ್ ಪಾದವೇ ಗತಿ ಎಂಬಂತಾಗಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಒಂದು ತಿಂಗಳಿನಿಂದ ಸಚಿವರು, ಶಾಸಕರು, ಪದಾಧಿಕಾರಿಗಳು, ಎಲ್ಲರೂ ಸಿದ್ದರಾಮಯ್ಯನವರಿಗೆ ಜೈ ಜೈ ಅನ್ನುತ್ತಿದ್ದಾರೆ. ಅವರೇ ಅಧಿಕಾರದಲ್ಲಿ ಮುಂದುವರೆಯಲಿ ಹೇಳುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷರಿಗೆ ಪಕ್ಷದಲ್ಲಿ ಕವಡೆ ಕಾಸಿನ ಕಿಮಿತ್ತಿನ ಬೆಲೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ನನಗೆ ಯಾರ ಬೆಂಬಲವೂ ಬೇಡ. ಯಾವ ಶಾಸಕರು, ಸಚಿವರ ಬೆಂಬಲವೂ ಬೇಡ ಎಂದು ಹೇಳಿರುವ ಉದ್ದೇಶವೇ ಡಿ.ಕೆ.ಶಿವಕುಮಾರ್ಗೆ ಯಾರು ಕೂಡ ಬೆಂಬಲ ಕೊಡುತ್ತಿಲ್ಲ ಎಂಬ ಕಾರಣಕ್ಕಾಗಿಯೇ. ಹಾಗಾಗಿ ಅವರು ಪಕ್ಷದಲ್ಲಿ ಒಬ್ಬಂಟಿಯಾಗಿದ್ದಾರೆ. ಹೈಕಮಾಂಡ್ ಪಾದವೇ ಗತಿ ಎಂದು ದೆಹಲಿಯಲ್ಲಿ ಕೂತಿದ್ದಾರೆ ಎಂದು ವ್ಯಂಗ್ಯವಾಡಿದರು.
ಈ ಕಾಂಗ್ರೆಸ್ ಸರ್ಕಾರ ಬೀಳೋದು ಬೆಳಗಾವಿಯಿಂದಲೇ. ಒಂದು ಕಡೆ ಸತೀಶ್ ಜಾರಕಿಹೊಳಿ ವರ್ಸಸ್ ಲಕ್ಷಿ ಹೆಬ್ಬಾಳ್ಕರ್. ಇನ್ನೊಂದು ಕಡೆ ಸತೀಶ್ ವರ್ಸಸ್ ಡಿಕೆಶಿ. ಎಲ್ಲಕ್ಕೂ ಸಿದ್ದರಾಮಯ್ಯ ಸೂತ್ರಧಾರಿ ಎಂದು ಗಂಭೀರ ಆರೋಪ ಮಾಡಿದರು. ಸಿದ್ದರಾಮಯ್ಯ ಪರ ಎಲ್ಲರೂ ಅಖಾಡಕ್ಕಿಳಿದು ಬ್ಯಾಟ್ ಮಾಡುತ್ತಿದ್ದಾರೆ. ಡಿಕೆಶಿ ಒಬ್ಬಂಟಿ ಆಗಿದ್ದಾರೆ. ಹಾಗಾಗಿ ಹೈಕಮಾಂಡ್ ಪಾದವೇ ಗತಿ ಎಂದು ಡಿಕೆಶಿ ಹೈಕಮಾಂಡ್ ಬಳಿ ಕೂತಿದ್ದಾರೆ ಎಂದು ಅಶೋಕ್ ಲೇವಡಿ ಮಾಡಿದರು.
ಸಿದ್ದರಾಮಯ್ಯ ಯಾವ ರೀತಿ ಸಿಎಂ ಕುರ್ಚಿ ಬಿಡುತ್ತಿಲ್ಲವೋ ಹಾಗೆ ಡಿಕೆಶಿ ಅಧ್ಯಕ್ಷ ಸ್ಥಾನ ಬಿಡುತ್ತಿಲ್ಲ. ಸುರ್ಜೇವಾಲ ಮೊನ್ನೆ ಬಹಿರಂಗವಾಗಿ ಮಾತಾಡಬೇಡಿ ಅಂದರು. ನಿನ್ನೆಯಿಂದಲೂ ಎಲ್ಲರೂ ಬಹಿರಂಗವಾಗೇ ಮಾತಾಡುತ್ತಿದ್ದಾರೆ ಎಂದು ಟೀಕಿಸಿದರು.ಕಾಂಗ್ರೆಸ್ ಸರ್ಕಾರದಲ್ಲಿ ಜನರ ಸಮಸ್ಯೆಗಳು ಹೆಚ್ಚಾಗುತ್ತಿದೆ. ಇವರಿಗೆ ಯಾವುದನ್ನೂ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ರಾಜ್ಯ ಆರ್ಥಿಕ ದುಸ್ಥಿತಿಯಲ್ಲಿದೆ. ಕಾಂಗ್ರೆಸ್ನವರು ಆಡಳಿತ ಮರೆತು ದೆಹಲಿಗೆ ಹೋಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ದೆಹಲಿಗೆ ಹೋಗುವವರ ಸಂಖ್ಯೆ ಇನ್ನೂ ಹೆಚ್ಚಾಗುತ್ತದೆ ಎಂದು ಭವಿಷ್ಯ ನುಡಿದರು.
ಜಾತಿ ಜನಗಣತಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಜಾತಿ ಜನಗಣತಿ ವರದಿಗೆ ನಮ ವಿರೋಧವಿಲ್ಲ. ಜಾತಿ ಗಣತಿ ಎಲ್ಲರೂ ಒಪ್ಪುವಂತೆ ಆಗಬೇಕು. ಎಲ್ಲ ಮನೆಗಳ ಸಮೀಕ್ಷೆ ಆಗಬೇಕು. ಆದರೆ ಇವ್ರು ಒಕ್ಕಲಿಗರನ್ನು, ಲಿಂಗಾಯತರನ್ನು ಒಡೆದಿದ್ದಾರೆ, ವೈಜ್ಞಾನಿಕವಾಗಿ ಜಾತಿ ಗಣತಿ ಆಗಬೇಕು ಎಂದು ವಾದಿಸಿದರು.
ಈಗ ಕೇಂದ್ರದಿಂದಲೂ ಜನಗಣತಿ ಆಗುತ್ತಿದೆ. ಇದರಲ್ಲೇ ಎಲ್ಲವೂ ಬರುತ್ತದೆ. ಹತ್ತು ವರ್ಷ ಸುಮನಿದ್ದು ಈಗ ಜಾತಿ ಗಣತಿ ಜಾರಿಗೆ ತರುತ್ತೇವೆ ಎಂದರೆ ಹೇಗೆ? ಕೇಂದ್ರದ ಜನಗಣತಿಗೂ ಇವರ ಗಣತಿಗೂ ಘರ್ಷಣೆಯಾಗುತ್ತದೆ. ಈಗಾಗಲೇ ಜಾತಿ ಜನಗಣತಿ ವರದಿಯಲ್ಲಿ ಏನಿದೆ ?ಎಂಬುದು ಎಲ್ಲರಿಗೂ ಗೊತ್ತಾಗಿದೆ ಎಂದರು.ಇದೆಲ್ಲ ಸಿದ್ದರಾಮಯ್ಯನವರ ಟ್ರಿಕ್ಸ್ . ಅವರು ಡಬಲ್ ಗೇಮ್ ಅಷ್ಟೇ ಅಲ್ಲ ತ್ರಿಬಲ್ ಗೇಮ್ ಗೇಮ್ ಆಡುತ್ತಿದ್ದಾರೆ. ಮುಂದಿನ ಕ್ಯಾಬಿನೆಟ್ ನಲ್ಲಿ ತರುತ್ತೇವೆ ಎನ್ನುತ್ತಿರುವುದೂ ನಾಟಕನೇ ಎಂದು ಕಿಡಿಕಾರಿದರು.
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಗೆ ರಮೇಶ್ ಜಾರಕಿಹೊಳಿ ಆಗ್ರಹ ವಿಚಾರ ಕುರಿತು ಮಾತನಾಡಿದ ಅವರು, ನಾನು ಪಕ್ಷದ ಶಿಸ್ತಿನ ಸಿಪಾಯಿ. ಏನೇ ಇದ್ದರೂ ನಾನು ಪಕ್ಷದ ವೇದಿಕೆಯಲ್ಲೇ ಮಾತ ನಾಡುತ್ತೇನೆ. ಪಕ್ಷದ ವೇದಿಕೆ ಬಿಟ್ಟು ಹೊರಗೆ ಮಾತಾಡುವುದಿಲ್ಲ. ಈಗಾಗಲೇ ನಾನು ಹೈಕಮಾಂಡ್ ಭೇಟಿ ಮಾಡಿ ಏನು ಹೇಳಬೇಕೋ ಹೇಳಿದ್ದೇನೆ. ನಮ ಪಕ್ಷದಲ್ಲಿ ಬಹಿರಂಗ ಹೇಳಿಕೆಗಳನ್ನು ಕೊಡುತ್ತಿರುವ ಬಗ್ಗೆ ಹೈಕಮಾಂಡ್ ಗಮನಕ್ಕೆ ಬಂದಿದೆ. ಅವೆಲ್ಲವನ್ನೂ ಪಕ್ಷ ನೋಡಿಕೊಳ್ಳುತ್ತದೆ ಎಂದು ಹೇಳಿದರು.