Sunday, January 12, 2025
Homeರಾಜ್ಯಹಸುಗಳ ಕೆಚ್ಚಲು ಕೊಯ್ದು ಪಾಪಿಗಳನ್ನು ತಕ್ಷಣವೇ ಬಂಧಿಸದಿದ್ದರೆ 'ಕರಾಳ ಸಂಕ್ರಾಂತಿ ಆಚರಣೆ' : ಸರ್ಕಾರಕ್ಕೆ ಆರ್‌.ಅಶೋಕ್‌...

ಹಸುಗಳ ಕೆಚ್ಚಲು ಕೊಯ್ದು ಪಾಪಿಗಳನ್ನು ತಕ್ಷಣವೇ ಬಂಧಿಸದಿದ್ದರೆ ‘ಕರಾಳ ಸಂಕ್ರಾಂತಿ ಆಚರಣೆ’ : ಸರ್ಕಾರಕ್ಕೆ ಆರ್‌.ಅಶೋಕ್‌ ಎಚ್ಚರಿಕೆ

R. Ashok warns government to arrest culprits for cutting cows' udders

ಬೆಂಗಳೂರು,ಜ.12- ನಗರದ ಚಾಮರಾಜಪೇಟೆಯ ವಿನಾಯಕನಗರದಲ್ಲಿ ಹಸುಗಳ ಕೆಚ್ಚಲು ಕೊಯ್ದು ವಿಕೃತ ಮಾಡಿರುವವರನ್ನು ತಕ್ಷಣವೇ ಬಂಧಿಸಿ ಜೈಲಿಗಟ್ಟದಿದ್ದರೆ ಕರಾಳ ಸಂಕ್ರಾಂತಿ ಆಚರಣೆ ಮಾಡುವುದಾಗಿ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ರಾಜ್ಯಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ತಪ್ಪಿತಸ್ಥರು ಯಾರೇ ಇರಲಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲೇಬೇಕೆಂದು ಒತ್ತಾಯ ಮಾಡಿದರು.

ಹಿಂದೂಗಳನ್ನು ಭಯಭೀತರನ್ನಾಗಿ ಮಾಡುವ ಉದ್ದೇಶದಿಂದಾಗಿಯೇ ಈ ಕೃತ್ಯವನ್ನು ನಡೆಸಲಾಗಿದೆ. ದುಷ್ಕರ್ಮಿಗಳು ಸಿಸಿ ಟಿವಿಗಳನ್ನು ಒಡೆದು ಹಾಕಿದ್ದಾರೆ. ಭಯೋತ್ಪಾದಕರು ಮಾತ್ರ ಇಂತಹ ಕೃತ್ಯಗಳನ್ನು ನಡೆಸಲು ಸಾಧ್ಯ. ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಬೀದಿಗಿಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು.

ಪಶು ಆಸ್ಪತ್ರೆ ಉಳಿವಿಗಾಗಿ ಹೋರಾಟ ನಡೆಸಿದ ಹಸು ಮಾಲಿಕರು ಈ ಘಟನೆಯಿಂದ ಭಯಭೀತರಾಗಿದ್ದಾರೆ. ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಲಿ. ಸ್ಥಳೀಯ ಶಾಸಕರಾಗಿರುವ ಸಚಿವ ಜಮೀರ್‌ ಏಕೆ ಬಂದಿಲ್ಲ ಎಂದು ಅವರು ಪ್ರಶ್ನೆ ಮಾಡಿದರು.

ಹಿಂದೂಗಳಿಗೆ ಗೋವುಗಳೆಂದರೆ ದೇವರ ಸಮಾನ. ನಾವು ಅವುಗಳನ್ನು ಪವಿತ್ರ ಪ್ರಾಣಿ ಎಂದು ಪೂಜಿಸುತ್ತೇವೆ. ಅವುಗಳಿಗೆ ಯಾರಾದರೂ ನೋವು ಮಾಡಿದರೂ ನಮ ಮನಸ್ಸು ತಡೆಯುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌‍ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಸುವಿನ ಕೆಚ್ಚಲು ಕೊಯ್ದಿರುವ ಗಿಫ್‌್ಟ ಕೊಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇದು ಜಿಹಾದಿ ಮನಸ್ಥಿತಿ. ಹಾಲು ಕೊಡುವ ಹಸುವಿನ ಕೆಚ್ಚಲು ಕೊಯ್ದಿದ್ದಾರೆ. ಹಸುವಿನ ಮಾಲಿಕ ಆರ್‌ಎಸ್‌‍ಎಸ್‌‍ ಕಾರ್ಯಕರ್ತ. ಸ್ಥಳೀಯ ಪಶು ಆಸ್ಪತ್ರೆ ಉಳಿವಿಗಾಗಿ ಹೋರಾಟ ನಡೆಸಿದ್ದರು. ಅದನ್ನು ಸಹಿಸದ ಕೆಲವು ದುಷ್ಕರ್ಮಿಗಳು ಈ ದುಷ್ಕೃತ್ಯ ನಡೆಸಿರುವ ಸಾಧ್ಯತೆ ಇದೆ ಎಂದು ಅಶೋಕ್‌ ಶಂಕೆ ವ್ಯಕ್ತಪಡಿಸಿದರು.

ನಾವು ಈ ಹಿಂದೆ ಅನೇಕ ಬಾರಿ ಪ್ರತಿಭಟನೆ ನಡೆಸಿದ್ದೆವು. ಅದರಲ್ಲಿ ಹಸುವಿನ ಮಾಲಿಕರು ಕೂಡ ಭಾಗಿಯಾಗಿದ್ದರು. ಕಾಂಗ್ರೆಸ್‌‍ ಮಾತೆತ್ತಿದರೆ ದೇವಸ್ಥಾನಗಳಲ್ಲಿ ಹೋಮ, ಹವನ, ಪುನಸ್ಕಾರ ಮಾಡುತ್ತಿದ್ದೇವೆ ಎಂದು ಹೇಳುತ್ತಾರೆ. ಇದು ಓಟಿಗಾಗಿ ಮಾಡುತ್ತಿರುವ ನಾಟಕ ಎಂದು ಎಲ್ಲರಿಗೂ ಗೊತ್ತು ಎಂದು ಕಿಡಿಕಾರಿದರು.

ಕಾಂಗ್ರೆಸ್‌‍ನಲ್ಲಿ ಅಧಿಕಾರ ಹಂಚಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿದ ಅಶೋಕ್‌, ಈಗ ಅದು ಒಡೆದ ಮನೆಯಾಗಿದೆ. ಸಚಿವ ರಾಜಣ್ಣ, ಕೆಪಿಸಿಸಿ ಅಧ್ಯಕ್ಷರಿಗೆ ಆವಾಜ್‌ ಹಾಕಿದ್ದಾರೆ. ಪರಮೇಶ್ವರ್‌ ಕೂಡ ಅದೇ ದಾಟಿಯಲ್ಲಿ ಮಾತನಾಡಿದ್ದಾರೆ. ಸಿದ್ದರಾಮಯ್ಯ 2 ವರ್ಷದ ನಂತರ ಅಧಿಕಾರ ಬಿಟ್ಟುಕೊಡಬೇಕೆಂಬುದು ಡಿ.ಕೆ.ಶಿವಕುಮಾರ್‌ ಆಸೆ. ಸರ್ಕಾರದಲ್ಲಿ ಅವರೇ ಸಮಸ್ಯೆಯಾಗಿದ್ದಾರೆ ಎಂದು ಅವರು ಆರೋಪಿಸಿದರು.

ಹಸುವಿನ ಮಾಲಿಕನಿಗೆ ಒಂದು ಲಕ್ಷ ರೂ.ಗಳ ಪರಿಹಾರ ಘೋಷಣೆ :
ಚಾಮರಾಜಪೇಟೆಯ ವಿನಾಯಕನಗರದಲ್ಲಿ ಹಸುಗಳ ಕೆಚ್ಚಲು ಕೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಸುವಿನ ಮಾಲಿಕನಿಗೆ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಒಂದು ಲಕ್ಷ ರೂ.ಗಳ ಪರಿಹಾರ ಘೋಷಣೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಬಿಜೆಪಿ ನಾಯಕರೊಂದಿಗೆ ಭೇಟಿ ನೀಡಿದ್ದ ಅವರು, ಹಸುವಿನ ಮಾಲಿಕ ಕರ್ಣ ಕುಟುಂಬಕ್ಕೆ ವೈಯಕ್ತಿಕವಾಗಿ ಒಂದು ಲಕ್ಷ ರೂ. ಪರಿಹಾರವನ್ನು ಘೋಷಣೆ ಮಾಡಿದರು. ದುಷ್ಕರ್ಮಿಗಳಿಂದ ಹಸುಗಳು ತೀವ್ರವಾಗಿ ಬಳಲುತ್ತಿದ್ದು, ತಕ್ಷಣವೇ ಪಶುಸಂಗೋಪನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ವ್ಯವಸ್ಥೆಯನ್ನು ಅವರು ಮಾಡಿದರು.

RELATED ARTICLES

Latest News