Sunday, August 10, 2025
Homeರಾಜ್ಯಆರ್‌.ಅಶೋಕ್‌ ಕೂಡ ಪ್ರಧಾನಿ ಮೋದಿ ಜೊತೆ ವೇದಿಕೆಯಲ್ಲಿರುತ್ತಾರೆ : ವಿಜಯೇಂದ್ರ

ಆರ್‌.ಅಶೋಕ್‌ ಕೂಡ ಪ್ರಧಾನಿ ಮೋದಿ ಜೊತೆ ವೇದಿಕೆಯಲ್ಲಿರುತ್ತಾರೆ : ವಿಜಯೇಂದ್ರ

R. Ashok will also be on stage with PM Modi: Vijayendra

ಬೆಂಗಳೂರು, ಆ.10-ಬೆಂಗಳೂರಿನ ಹಳದಿ ಮೆಟ್ರೋ ಮಾರ್ಗವನ್ನು ಉದ್ಘಾಟಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಗಮಿಸಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಹಬ್ಬದ ವಾತಾವರಣವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ಮೆಟ್ರೋ ಮಾರ್ಗವು ಬೆಂಗಳೂರಿನ ದಕ್ಷಿಣ ಭಾಗದ ಮಹಾಜನತೆಗೆ ಸಾಕಷ್ಟು ಅನುಕೂಲ ಉಂಟು ಮಾಡಲಿದೆ. ಪ್ರಧಾನಿಯವರ ಆಗಮನಕ್ಕೆ ಜನರು ಕಾತುರತೆಯಿಂದ ಕಾಯುತ್ತಿದ್ದರು. ಬೆಂಗಳೂರು- ಬೆಳಗಾವಿ ವಂದೇ ಭಾರತ್‌ ರೈಲನ್ನೂ ಪ್ರಧಾನಿಯವರು ಲೋಕಾರ್ಪಣೆ ಮಾಡಿದ್ದಾರೆ ಎಂದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಅವರ ಹೆಸರೂ ಆಹ್ವಾನ ಪತ್ರಿಕೆಯಲ್ಲಿ ಸೇರಿದ್ದು, ಅವರು ಕೂಡ ವೇದಿಕೆಯಲ್ಲಿ ಇರುತ್ತಾರೆ. ನಾನು ಈ ಕುರಿತು ಪ್ರಧಾನಮಂತ್ರಿಯವರ ಕಚೇರಿಯ ಗಮನ ಸೆಳೆದಿದ್ದೆ. ನಿನ್ನೆ ಮತ್ತೆ ಮಾತನಾಡಿದ್ದೇನೆ. ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿಯವರ ಜೊತೆ ಮಾತನಾಡಿದ್ದೆ. ಅವರೂ ಪ್ರಯತ್ನ ಮಾಡಿದ್ದಾರೆ. ಈ ವಿಷಯದಲ್ಲಿ ಆತಂಕ ಪಡಬೇಕಾದ ಅಗತ್ಯ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಮೆಟ್ರೋ 3ನೇ ಹಂತಕ್ಕೂ ಇವತ್ತು ಚಾಲನೆ ಕೊಡಲಿದ್ದಾರೆ. ಐಟಿ ಹಬ್‌ ಎನಿಸಿದ ಬೆಂಗಳೂರು ನಗರ ಜಾಗತಿಕ ಮನ್ನಣೆ ಪಡೆದಿದೆ. ಮೆಟ್ರೋ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳನ್ನು ವೇಗದಲ್ಲಿ ಒದಗಿಸಬೇಕೆಂಬ ಅಪೇಕ್ಷೆ ಪ್ರಧಾನಿಯವರದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ರಾಜ್ಯ ಸರ್ಕಾರ ಕ್ರೆಡಿಟ್‌ ತೆಗೆದುಕೊಳ್ಳುವುದನ್ನು ಬಿಟ್ಟು ಬೆಂಗಳೂರಿನ ರಸ್ತೆ ಪರಿಸ್ಥಿತಿ ಏನಾಗಿದೆ ಎಂಬುದನ್ನು ಗಮನಿಸಲಿ ಎಂದು ಅವರು ತಿರುಗೇಟು ನೀಡಿದರು.

ರಾಜಕೀಯ ಇಚ್ಛಾಶಕ್ತಿಯ ಕೊರತೆ ಹಿಂದಿನಿಂದಲೂ ಇದೆ. ಹಿಂದಿನ ಸರ್ಕಾರಗಳು ದೂರದೃಷ್ಟಿಯಿಂದ ಕೆಲಸ ಮಾಡಿಲ್ಲ. ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ ಇಲ್ಲವೆಂದರೆ, ಅದಕ್ಕೆ ಇಲ್ಲಿನ ಆಡಳಿತ ವೈಫಲ್ಯವೇ ಕಾರಣ ಎಂದು ತಿಳಿಸಿದರು. ಬೆಂಗಳೂರು ಮಹಾನಗರಕ್ಕೆ ಯಾವ ವೇಗದಲ್ಲಿ ಮೂಲಭೂತ ಸೌಕರ್ಯಗಳು ಆಗಬೇಕಿತ್ತೋ ಆ ವೇಗ ಪಡೆದುಕೊಂಡಿಲ್ಲ.ಮೋದಿಜೀ ಅವರು ಇಚ್ಛಾಶಕ್ತಿ ಮತ್ತು ಬೆಂಗಳೂರು ಕುರಿತಂತೆ ಆಸಕ್ತಿ ತೋರುತ್ತಿದ್ದು, ವೇಗದಲ್ಲಿ ಕಾರ್ಯಕ್ರಮಗಳು ನಡೆದಿವೆ ಎಂದರು.

RELATED ARTICLES

Latest News