ಬೆಂಗಳೂರು,ಜ.11- ಅಂಬಲಿ ಕುಡಿಯುವವನಿಗೆ ಮೀಸೆ ತಿಕ್ಕುವವನೊಬ್ಬ ಎಂಬ ಗಾದೆ ಮಾತಿನಂತೆ ಈಗಾಗಲೇ ಅವೈಜ್ಞಾನಿಕ ಗ್ಯಾರೆಂಟಿಗಳ ಭಾರ ವನ್ನು ಹೊರಲಾಗದೆ ಬೆನ್ನು ಮೂಳೆ ಮುರಿದಂತಾ ಗಿರುವ ಸರ್ಕಾರಕ್ಕೆ, ಗ್ಯಾರೆಂಟಿ ಜಾರಿ ಸಮತಿ ಎಂಬ ಮತ್ತೊಂದು ಹೊರೆ ಹೊರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೊರಟಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ಪೋಸ್ಟ್ ಮಾಡಿರುವ ಅವರು, ಗ್ಯಾರೆಂಟಿ ಜಾರಿಗೆ ಮುಖ್ಯಮಂತ್ರಿ ಆದಿಯಾಗಿ, 34 ಕ್ಯಾಬಿನೆಟ್ ಸಚಿವರು, ಆರ್ಥಿಕ, ರಾಜಕೀಯ, ಮಾಧ್ಯಮ ಸಲಹೆಗಾರರು, ಜಿಲ್ಲಾಡಳಿತಗಳು ಸೇರಿದಂತೆ ಇಡೀ ಆಡಳಿತ ಯಂತ್ರವೇ ಇರುವಾಗ ಪ್ರತ್ಯೇಕ ಸಮಿತಿಯ ಅಗತ್ಯ ಏನಿದೆ ಎಂದು ಪ್ರಶ್ನಿಸಿದ್ದಾರೆ.
ನೈತಿಕ ಪೊಲೀಸ್‍ಗಿರಿ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ಪರಮೇಶ್ವರ್ ಸೂಚನೆ
ಸಂಪುಟ ದರ್ಜೆ ಸ್ಥಾನಮಾನದ ಅಧ್ಯಕ್ಷರು, ರಾಜ್ಯ ಸಚಿವ ಸ್ಥಾನಮಾನದ ಐವರು ಉಪಾಧ್ಯಕ್ಷರು ಸೇರಿದಂತೆ 31 ಸದಸ್ಯರ ಸಮಿತಿಯ ಸಂಬಳ ಸಾರಿಗೆ ಖರ್ಚಿನಿಂದ ರಾಜ್ಯ ಸರ್ಕಾರಕ್ಕೆ 16 ಕೋಟಿ ರೂಪಾಯಿ ಹೊರೆಯಾಗಲಿದೆ ಎಂದು ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ. ತಮ್ಮ ಪಕ್ಷದ ಅತೃಪ್ತ ಶಾಸಕರನ್ನ, ಪ್ರಮುಖ ಕಾರ್ಯಕರ್ತರನ್ನು ಲೋಕಸಭಾ ಚುನಾವಣೆಯ ಕೆಲಸಕ್ಕೆ ಬಳಸಿಕೊಳ್ಳಲು ರಾಜ್ಯದ ಸಾರ್ವಜನಿಕ ಹಣ ಏಕೆ ದುರ್ಬಳಕೆ ಮಾಡುತ್ತೀರಿ ಸಿಎಂ ಸಿದ್ದರಾಮಯ್ಯನವರೇ ಎಂದು ಪ್ರಶ್ನೆ ಮಾಡಿದ್ದಾರೆ.
ಗ್ಯಾರೆಂಟಿ ಜಾರಿಯೇ ಹೊರೆಯಾಗಿ ಅಭಿವೃದ್ಧಿಗೆ ಹಣ ಇಲ್ಲದಿರುವಾಗ ಕಂಡ ಕಂಡವರಿಗೆ ಗೂಟದ ಕಾರು ಕೊಡಲು ರಾಜ್ಯದ ಖಜಾನೆ ಏನು ಕಾಂಗ್ರೆಸ್ ಪಕ್ಷದ ಆಸ್ತಿ ಎಂದುಕೊಂಡಿದ್ದೀರಾ? ಸಚಿವರು, ಆಡಳಿತ ಯಂತ್ರದ ಮೂಲಕ ಗ್ಯಾರೆಂಟಿ ಜಾರಿ ಮಾಡಲು ಆಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ಅದು ಬಿಟ್ಟು ಸುಮ್ಮನೆ ರಾಜ್ಯದ ಬೊಕ್ಕಸವನ್ನ ಪೋಲು ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.