ಬೆಂಗಳೂರು,ನ.10- ರಾಜ್ಯದ ಜೈಲುಗಳು ಉಗ್ರರ ಪಾಲಿಗೆ ಸ್ವರ್ಗವಾಗುತ್ತಿವೆ. ಇವರಿಗೆ ಇಲ್ಲಿ ಫೈಸ್ಟಾರ್ ಹೋಟೆಲ್‌ಗಳಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಸಕಲ ಸವಲತ್ತುಗಳು ಸಿಗುತ್ತಿವೆ. ವರದಿ ತರಿಸಿಕೊಳ್ಳುತ್ತೇನೆ ಎಂದು ಹೇಳುವ ಗೃಹಸಚಿವರು ಕತ್ತೆ ಕಾಯುತ್ತಾ ಇದ್ದರೇ? ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.
ಪ್ರತಿಭಟನೆಯಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೈಲುಗಳಲ್ಲಿ ಉಗ್ರರಿಗೆ ಮೊಬೈಲ್, ಸ್ಯಾಟಲೈಟ್ ಫೋನ್, ಮಾಂಸ, ಮದ್ಯ, ಗಾಂಜಾ ಪ್ರತಿಯೊಂದು ಸಿಗುತ್ತದೆ. ಇವರು ಮನೆಯಲ್ಲಿರುವ ಬದಲು ಜೈಲಿನಲ್ಲೇ ವೈಭೋಗದ ಜೀವನ ನಡೆಸುತ್ತಿದ್ದಾರೆ. ಗೃಹ ಇಲಾಖೆ ಇದೆಯೋ? ಸತ್ತಿದೆಯೋ ಎಂದು ತರಾಟೆಗೆ ತೆಗೆದುಕೊಂಡರು. ಪರಪ್ಪನ ಅಗ್ರಹಾರ ಜೈಲಿನಲ್ಲಿ ಆರೋಪಿಗಳು ಮತ್ತು ಉಗ್ರರಿಗೆ ಸಕಲ ಸವಲತ್ತು ಸಿಗುತ್ತಿದೆ. ಭಯೋತ್ಪಾದಕರನ್ನು ಓಲೈಕೆ ಮಾಡುತ್ತಿರುವ ಪರಿಣಾಮ ಇದು. ಕಾಂಗ್ರೆಸ್ ಈಗ ಜಾತ್ಯತೀತ ಪಕ್ಷವಾಗಿ ಉಳಿದಿಲ್ಲ. ಅದು ಕೋಮುವಾದಿ ಪಕ್ಷ ಎಂದು ವಾಗ್ದಾಳಿ ನಡೆಸಿದರು.
ಪ್ರತಿಯೊಂದು ವಿಷಯಕ್ಕೂ ನನಗೆ ಗೊತ್ತಿಲ್ಲ, ಮಾಹಿತಿ ತರಿಸಿಕೊಳ್ಳುತ್ತೇನೆ, ಸಭೆ ಬಳಿಕ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸುತ್ತೇನೆ, ನಾನು ದೇಶದಲ್ಲೇ ಅತ್ಯಂತ ಸಕ್ರಿಯ ಸಚಿವ ಎಂದು ಹೇಳಿಕೊಳ್ಳುವ ಪರಮೇಶ್ವರ್ ಅವರ ಗಮನಕ್ಕೆ ಇದು ಬಂದಿಲ್ಲ ಎಂದರೆ ಹೇಗೆ? ಎರಡೂವರೆ ವರ್ಷ ನೀವು ಏನು ಮಾಡುತ್ತಿದ್ದೀರಿ ಎಂದು ಆಕ್ರೋಶ ಹೊರಹಾಕಿದರು. ಬಾಂಬ್ ಹಾಕುವವರಿಗೆ, ದೇಶ ವಿಭಜನ ಮಾಡುವವರಿಗೆ, ಪಾಕಿಸ್ತಾನದವರಿಗೆ ರಾಜಾತಿಥ್ಯ ಸಿಗುತ್ತಿದೆ. ಕುಕ್ಕರ್ ಬಾಂಬ್ ಹಾಕಿದವನು ಬ್ರದರ್, ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದವರಿಗೆ ಬಿರಿಯಾನಿ ಸಿಗುತ್ತದೆ ಎಂದು ಕುಹುಕವಾಡಿದರು.
ಐದು ಕೋಟಿ ವೆಚ್ಚದಲ್ಲಿ ಜೈಲಿನಲ್ಲಿ ನೂರಾರು ಸಿಸಿಟಿವಿ ಅಳವಡಿಸಲಾಗಿದೆ. ಅಷ್ಟೂ ಹೇಗೆ ಒಂದೇ ಸಲ ಆಫ್ ಆಗುತ್ತವೆ? ಗುಪ್ತಚರ ಇಲಾಖೆ ನೆಲಕಚ್ಚಿದೆ. ಅದರ ಅಧಿಕಾರಿಗಳು ಕಾಂಗ್ರೆಸ್ ಗುಲಾಮಗಿರಿಯಲ್ಲಿದ್ದಾರೆ ಎಂದು ಕಿಡಿಕಾರಿದರು. ಜೈಲಿನೊಳಗೆ ಮೊಬೈಲ್, ಗಾಂಜಾ, ಮಾಂಸ ಹೋದರೂ ಗೊತ್ತಾಗುವುದಿಲ್ಲ. ಜೈಲಿನ ವಿಡಿಯೋಗಳು ವೈರಲ್ ಆಗಿವೆ. ಪಾರ್ಟಿ ಮಾಡುತ್ತಿರುವ ಫೋಟೋಗಳು ಬಯಲಾಗಿವೆ. ಜೈಲಿನೊಳಗಿಂದಲೇ ಫೋನ್ ಮಾಡಿ ಉದ್ಯಮಿಗಳಿಗೆ ಬೆದರಿಸಿ ಹಣ ತರಿಸಿಕೊಳ್ಳುತ್ತಿದ್ದಾರೆ? ಇಲ್ಲದಿದ್ರೆ ಅಷ್ಟೊಂದು ಹಣ ಹೇಗೆ ಕೈದಿಗಳಿಗೆ ಬರುತ್ತದೆ ಎಂದು ಪ್ರಶ್ನಿಸಿದರು.
ಜೈಲಿನಲ್ಲಿ ಈ ಸವಲತ್ತು ಸುಲಭಕ್ಕೆ ಸಿಗುವುದಿಲ್ಲ. ಸಾಕಷ್ಡು ಹಣಬೇಕು. ಆ ಹಣ ಕೈದಿಗಳಿಗೆ ಎಲ್ಲಿಂದ ಬರುತ್ತದೆ? ಜೈಲು ಸವಲತ್ತು ಉಚಿತ ಭಾಗ್ಯನಾ? ದರ್ಶನ್ ಒಂದು ಸಿಗರೇಟ್ ಸೇದಿದ್ದಕ್ಕೆ ಸರ್ಕಾರ ಸುಪ್ರೀಂಕೋರ್ಟ್ ವರೆಗೆ ಹೋಗಿ ಬೇಲ್ ರದ್ದು ಮಾಡಿಸಿತು. ನಾನು ದರ್ಶನ್ ಬೆಂಬಲಿಸುತ್ತಿಲ್ಲ, ದರ್ಶನ್ ಸಿಗರೇಟು ಸೇದಿದ್ದು ತಪ್ಪೇ. ಆದರೆ ದರ್ಶನ್ ವಿಚಾರದಲ್ಲಿ ಕೈಗೊಂಡ ನಿಲುವು, ಇವರಿಗ್ಯಾಕಿಲ್ಲ? ಈಗ ಏನ್ ಮಾಡುತ್ತೀರಿ ಹೇಳಿ? ಎಂದು ಪ್ರಶ್ನೆ ಮಾಡಿದರು.
ಈ ಸರ್ಕಾರ ಸತ್ತಿದೆ, ಸರ್ಕಾರ ನೆಗೆದು ಬಿದ್ದಿದೆ. ಈ ಹೆಣ ಹೊರಲು ಸಿಎಂ, ಡಿಸಿಎಂ ಪೈಪೋಟಿಗಿಳಿದಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ವಿಮಾನ ನಿಲ್ದಾಣದಲ್ಲಿ ನಮಾಜ್ ನಡೆಸಿರುವ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಅವರು, ಈ ಸರ್ಕಾರಕ್ಕೆ ಹೇಳೋರು ಕೇಳೋರು ಯಾರೂ ಇಲ್ಲ? ಮುಸ್ಲಿಮರ ಓಲೈಕೆ ಮಿತಿ ಮೀರಿದೆ ಎಂದು ಅಸಮಾಧಾ ವ್ಯಕ್ತಪಡಿಸಿದರು.
