ಮ್ಯಾಡ್ರಿಡ್, ಸೆ.24- ನಾನು ಹಣಕಾಸು ಸಲಹೆ ನೀಡುತ್ತಿರುವಂತೆ ಹರಿದಾಡುತ್ತಿರುವ ಆನ್‌ಲೈನ್ ವಿಡಿಯೋಗಳು ನಕಲಿಯಾಗಿವೆ. ಇವು ಕೃತಕ ಬುದ್ಧಿಮತ್ತೆ (ಎಐ)ಯಿಂದ ಸೃಷ್ಟಿಗೊಂಡಂಥವೇ ಹೊರತು ನನಗೂ ಇದಕ್ಕೂ ಸಂಬಂಧವಿಲ್ಲ ಎಂದು ಟೆನ್ನಿಸ್ ದಿಗ್ಗಜ ರಫೇಲ್ ನಡಾಲ್ ಸ್ಪಷ್ಟಪಡಿಸಿದ್ದಾರೆ.
ನಾನು ಈ ರೀತಿಯ ಯಾವುದೇ ಆನ್‌ಲೈನ್ ಸಂದೇಶ ಕಳುಹಿಸಿಲ್ಲ ಎಂದು ನಿವೃತ್ತ ಟೆನ್ನಿಸ್ ದಂತಕಥೆ ನಡಾಲ್ ಹೇಳಿದ್ದಾರೆ.ನಾನು ಈ ಎಚ್ಚರಿಕೆಯ ಸಂದೇಶವನ್ನು ಹಂಚಿಕೊಳ್ಳಬೇಕಾಗಿದೆ. ಇದು ನನ್ನ ಸಾಮಾಜಿಕ ಜಾಲತಾಣಕ್ಕೆ ಅಸಹಜ. ಆದರೆ ಅತ್ಯವಶ್ಯಕವಾಗಿದೆ ಎಂದು ಅವರು ಲಿಂಕೆಡಿನ್‌ನಲ್ಲಿ ಬರೆದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನಾನು ಮತ್ತು ನನ್ನ ತಂಡ ಕೆಲವು ಜಾಲತಾಣದ ವೇದಿಕೆಗಳಲ್ಲಿ ನಕಲಿ ವಿಡಿಯೋಗಳು ಪ್ರಸಾರವಾಗುತ್ತಿರುವುದನ್ನು ಪತ್ತೆ ಹಚ್ಚಿದ್ದೇವೆ. ಇವು ಎಐನ ಸೃಷ್ಟಿಯಾಗಿದೆ. ಈ ವಿಡಿಯೋಗಳಲ್ಲಿ ನಾನು ಹಣ ಹೂಡಿಕೆ ಮಾಡುವ ಪ್ರಸ್ತಾವನೆಗಳನ್ನು ಮತ್ತು ಸಲಹೆಗಳನ್ನು ನೀಡುತ್ತಿರುವುದಾಗಿ ತಪ್ಪಾಗಿ ತೋರಿಸಲಾಗಿದೆ. ಇವ್ಯಾವುವೂ ನನ್ನಿಂದ ಪ್ರಕಟಗೊಂಡಿಲ್ಲ ಎಂದು ನಡಾಲ್ ವಿವರಿಸಿದ್ದಾರೆ.
ಇವು ಹಾದಿ ತಪ್ಪಿಸುವ ಜಾಹಿರಾತುಗಳಾಗಿದ್ದು ಇದಕ್ಕೂ ನನಗೂ ಅರ್ಥಾರ್ಥಕ್ಕೂ ಸಂಬಂಧ ಇಲ್ಲ ಎಂದಿದ್ದಾರೆ.ಆವಿಷ್ಕಾರವು ಜನತೆಗೆ ಸೇವೆ ಸಲ್ಲಿಸುವಾಗ ಯಾವಾಗಲೂ ಸಕಾರಾತಕವಾಗಿರುತ್ತದೆ. ಆದರೆ ತಂತ್ರಜ್ಞಾನದ ದುರ್ಬಳಕೆ ಬಗ್ಗೆ ನಾವು ಜಾಗ್ರತೆಯಿಂದಿರಬೇಕು.
ಕೃತಕ ಬುದ್ಧಿಮತ್ತೆಯು ಶಿಕ್ಷಣ, ವೈದ್ಯಕೀಯ, ಕ್ರೀಡೆಗಳು ಮತ್ತು ಸಂಪರ್ಕ ಕ್ಷೇತ್ರಗಳಲ್ಲಿ ಅಭೂತಪೂರ್ವ ಪ್ರಗತಿ ತರುವ ಅಗಾಧ ಸಾಮರ್ಥ್ಯ ಹೊಂದಿದೆ. ಹೀಗಿದ್ದರೂ ಅದನ್ನು ತಪ್ಪು ವಿಚಾರಗಳಿಂದ ದುರ್ಬಳಕೆ ಸಹ ಮಾಡಬಹುದಾಗಿದೆ. ಈ ರೀತಿಯ ಸುಳ್ಳು ಪ್ರಚಾರಗಳು ಗೊಂದಲವನ್ನುಂಟು ಮಾಡಿ ಜನರನ್ನು ವಂಚಿಸುತ್ತವೆ ಎಂದು ನಡಾಲ್ ಎಚ್ಚರಿಸಿದ್ದಾರೆ.