ಬೆಂಗಳೂರು, ಏ. 26- ಇಂದು ನಡೆಯುತ್ತಿರುವ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಎರಡನೇ ಹಂತದಲ್ಲಿ ಕರ್ನಾಟಕದ 14 ಕ್ಷೇತ್ರಗಳು ಸೇರಿದಂತೆ ದೇಶದೆಲ್ಲೆಡೆ ಮತದಾನ ಪ್ರಕ್ರಿಯೆಯು ನಡೆಯುತ್ತಿದ್ದು ಸ್ಟಾರ್ ಕಲಾವಿದರು ಹಾಗೂ ಕ್ರೀಡಾಪಟುಗಳು ತಮ್ಮ ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ತಮ್ಮ ಅಭಿಮಾನಿಗಳಿಗೂ ಸುಭದ್ರ ದೇಶದ ನಿರ್ಮಾಣಕ್ಕಾಗಿ ತಪ್ಪದೇ ಮತದಾನ ಮಾಡುವಂತೆ ಮನವಿ ಮಾಡಿದ್ದಾರೆ.
ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ಇಂದು ಬೆಳಗ್ಗೆಯೇ ತಮ್ಮ ಹಕ್ಕು ಚಲಾಯಿಸಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಟೀಮ್ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರು ಕೂಡ ಯುವ ಮತದಾರರು ಸೇರಿದಂತೆ ಎಲ್ಲರೂ ಕಡ್ಡಾಯ ಮತದಾನ ಮಾಡಬೇಕೆಂದು ಕರೆ ನೀಡಿದ್ದಾರೆ.
`ದೇಶದಾದ್ಯಂತ ಚುನಾವಣೆಯು ಯಾವುದೇ ಗದ್ದಲ ಹಾಗೂ ಗೊಂದಲವಿಲ್ಲದೆ ಸರಾಗವಾಗಿ ಸಾಗುತ್ತಿದೆ. ಅಲ್ಲದೆ ಮತದಾನದ ಪ್ರಕ್ರಿಕೆಯು ಹಿಂದೆಂದಿಗಿಂತಲೂ ಸರಳವಾಗಿದೆ. ಸದೃಢ ಪ್ರಜಾಪ್ರಭುತ್ವದ ದೃಷ್ಟಿಯಿಂದ ಪ್ರತಿಯೊಬ್ಬರು ಕಡ್ಡಾಯ ಮತದಾನ ಮಾಡುವುದು ಅಗತ್ಯವಾಗಿದ್ದು , ಎಲ್ಲರೂ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿ’ ಎಂದು ರಾಹುಲ್ ದ್ರಾವಿಡ್ ಅವರು ಮನವಿ ಮಾಡಿದ್ದಾರೆ.
`ಈ ಬಾರಿಯ ಲೋಕಸಭೆಯ ಚುನಾವಣೆಯಲ್ಲಿ ಬೆಂಗಳೂರಿನಲ್ಲಿರುವ ಕ್ಷೇತ್ರಗಳಲ್ಲಿ ದಾಖಲೆಯ ಮತದಾನವಾಗಲಿ ಎಂದು ನಾನು ನಿರೀಕ್ಷಿಸುತ್ತಿದ್ದೇನೆ. ಈ ಬಾರಿ ಅತಿ ಹೆಚ್ಚು ಯುವ ಮತದಾರರು ಮತದಾನ ಮಾಡಲು ಸಂಭ್ರಮಿಸುತ್ತಿದ್ದಾರೆ. ಅಲ್ಲದೆ ಪ್ರತಿಯೊಬ್ಬರು ಯುವ ಮತದಾರರು ಕಡ್ಡಾಯವಾಗಿ ತಮ್ಮ ಹಕ್ಕನ್ನು ಚಲಾಯಿಸಬೇಕೆಂದು ಕರೆ ನೀಡಿದರು. ಯುವಕ ಅಥವಾ ಯುವತಿ ಯಾರೇ ಆಗಲಿ ತಮ್ಮ ಹಕ್ಕನ್ನು ಪ್ರದರ್ಶಿಸಬೇಕು’ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.