ಬೆಂಗಳೂರು,ನ.10- ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಕೋಚ್ ರಾಹುಲ್ ದ್ರಾವಿಡ್ ಅವರ ಕಿರಿಯ ಪುತ್ರ ಕೂಡ ಕ್ರಿಕೆಟ್‌ನಲ್ಲಿ ತನ್ನ ಛಾಪೂ ಮೂಡಿಸಲು ಮುಂದಾಗಿದ್ದಾರೆ.ಡಿ. 16 ರಿಂದ ಶುರುವಾಗಲಿರುವ ವಿಜಯ್ ಮರ್ಚೆಂಟ್ ಟ್ರೋಫಿಗಾಗಿ ಕರ್ನಾಟಕ ಸಂಭಾವ್ಯ ಆಟಗಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಈ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಕಿರಿಯ ಪುತ್ರ ಅನ್ವಯ್ ದ್ರಾವಿಡ್ ಸ್ಥಾನ ಪಡೆದಿದ್ದಾರೆ.
ದ್ರಾವಿಡ್ ಅವರ ಹಿರಿಯ ಪುತ್ರ ಸಮಿತ್ ದ್ರಾವಿಡ್ ಈಗಾಗಲೇ ಕರ್ನಾಟಕ ಅಂಡರ್ 19 ತಂಡವನ್ನು ಪ್ರತಿನಿಧಿಸಿದ್ದು, ಇದೀಗ ಕಿರಿಯ ಪುತ್ರ ಕೂಡ ಅಣ್ಣನ ಹಾದಿ ಹಿಡಿದಿದ್ದಾರೆ.ವಿಜಯ್ ಮರ್ಚೆಂಟ್ ಟೂರ್ನಿಗಾಗಿ ಆಯ್ಕೆ ಮಾಡಲಾದ 35 ಸದಸ್ಯರ ಬಳಗದಲ್ಲಿ ಅನ್ವಯ್ ಹೆಸರು ಕೂಡ ಕಾಣಿಸಿಕೊಂಡಿದೆ.
ವಿಶೇಷ ಎಂದರೆ ಅನ್ವಯ್ ದ್ರಾವಿಡ್ ವಿಕೆಟ್ ಕೀಪರ್ ಬ್ಯಾಟ್‌್ಸಮನ್ ಈ ಹಿಂದೆ ರಾಹುಲ್ ದ್ರಾವಿಡ್ ಕೂಡ ವಿಕೆಟ್ ಕೀಪರ್ ಆಗಿ ಕರ್ನಾಟಕ ಪರ ಕ್ರಿಕೆಟ್ ಕೆರಿಯರ್ ಆರಂಭಿಸಿದ್ದರು. ಇದೀಗ ಕಿರಿಯ ಪುತ್ರ ಕೂಡ ವಿಕೆಟ್ ಕೀಪಿಂಗ್ ಜವಾಬ್ದಾರಿಯೊಂದಿಗೆ ಕಿರಿಯರ ತಂಡದಲ್ಲಿ ಮಿಂಚುತ್ತಿದ್ದಾರೆ.
ವಿಜಯ್ ಮರ್ಚೆಂಟ್ ಟೂರ್ನಿಗಾಗಿ ಕರ್ನಾಟಕದ ಸಂಭಾವ್ಯ ತಂಡದಲ್ಲಿ ಮೂವರು ವಿಕೆಟ್ ಕೀಪರ್‌ಗಳು ಸ್ಥಾನ ಪಡೆದಿದ್ದು, ಅನ್ವಯ್ ಜೊತೆ ಆದಿತ್ಯ ಝಾ ಮತ್ತು ಜಾಯ್ ಜೇಮ್ಸ್ ಕೂಡ ಸ್ಥಾನ ಪಡೆದಿದ್ದಾರೆ.
ಕಳೆದ ವರ್ಷ ನಡೆದ ಅಂತರ ವಲಯ ಕೂಟದಲ್ಲಿ 14 ವರ್ಷದೊಳಗಿನವರ ರಾಜ್ಯ ತಂಡದ ನಾಯಕರಾಗಿ ಅನ್ವಯ್ ದ್ರಾವಿಡ್ ಕಾಣಿಸಿಕೊಂಡಿದ್ದರು. ಅಲ್ಲದೆ, ಇತ್ತೀಚೆಗೆ ಕೆಎಸ್‌ಸಿಎ 16 ವರ್ಷದೊಳಗಿನವರ ಅಂತರ ವಲಯ ಟೂರ್ನಿಯಲ್ಲಿ ತುಮಕೂರು ವಲಯ ವಿರುದ್ಧ ಬೆಂಗಳೂರು ವಲಯದ ಪರವಾಗಿ ಅನ್ವಯ್ ಅಜೇಯ 200 ರನ್ ಬಾರಿಸಿ ಮಿಂಚಿದ್ದರು.