ನವದೆಹಲಿ,ಸೆ.10- ಭಾರತದ ಪ್ರಜಾಪ್ರಭುತ್ವದಲ್ಲಿ ರಾಹುಲ್ ಗಾಂಧಿ ಒಬ್ಬರು ಕಪ್ಪುಚುಕ್ಕೆ ಎಂದು ಬಿಜೆಪಿ ಟೀಕಿಸಿದೆ. ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ರಾಹುಲ್ ಗಾಂಧಿ ಭಾರತದ ಪ್ರಜಾಪ್ರಭುತ್ವ ದುರ್ಬಲಗೊಳಿಸುವ ಯತ್ನ ನಡೆಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವಾಗ್ದಾಳಿ ನಡೆಸಿದ್ದಾರೆ.
ರಾಹುಲ್ ಗಾಂಧಿ ಪ್ರಬುದ್ಧತೆ ಇಲ್ಲ. ಅವರೊಬ್ಬ ಅರೆಕಾಲಿಕ ನಾಯಕ ಎಂಬುದು ಎಲ್ಲರಿಗೂ ತಿಳಿದಿದೆ. ಆದರೂ, ಜನರು ಅವರಿಗೆ ವಿಪಕ್ಷ ಸ್ಥಾನದಂತಹ ದೊಡ್ಡ ಜವಾಬ್ದಾರಿ ಕೊಟ್ಟಿದ್ದಾರೆ. ಭಾರತದ ಪ್ರಜಾಪ್ರಭುತ್ವದಲ್ಲಿ ರಾಹುಲ್ ಗಾಂಧಿ ಕಪ್ಪು ಚುಕ್ಕೆ ಎಂದು ಹೇಳಲು ಬೇಸರವಾಗುತ್ತದೆ. ವಿದೇಶಕ್ಕೆ ಭೇಟಿ ನೀಡಿದಾಗ ಅವರಿಗೆ ಹೇಗೆ ಮಾತನಾಡಬೇಕು ಎಂಬುದು ಸಹ ತಿಳಿದಿಲ್ಲ ಎಂದು ಟೀಕಿಸಿದರು.
ರಾಹುಲ್ ಗಾಂಧಿ, ತಮ ಭಾಷಣದಲ್ಲಿ ಚೀನಾದ ಬಗ್ಗೆ ಒಂದೇ ಒಂದು ಶಬ್ಧವನ್ನೂ ಅವರು ಮಾತನಾಡಲಿಲ್ಲ. ಭಾರತವನ್ನು ಅವರು ದುರ್ಬಲಗೊಳಿಸಿ, ಚೀನಾದ ಪರವಾಗಿದ್ದಾರೆ ಎಂದು ಟೀಕಿಸಿದ ಅವರು, ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಚೀನಾದ ಜೊತೆಗೆ ಅವರ ಪಕ್ಷದ ಒಪ್ಪಂದ ಕುರಿತು ಮಾತನಾಡಿದರು.
ಆ ಒಪ್ಪಂದದ ಪರಿಣಾಮವಾಗಿ ಅವರು ಭಾರತದ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಯತ್ನ ಮಾಡಿದ್ದಾರೆ. ಚೀನಾದೊಂದಿಗೆ ಮಾಡಿಕೊಂಡಿರುವ ಆ ಒಪ್ಪಂದವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಸಾರ್ವಜನಿಕಗೊಳಿಸುವಂತೆ ಸವಾಲು ಹಾಕುತ್ತೇನೆ ಎಂದು ಭಾಟಿಯಾ ಹೇಳಿದ್ದಾರೆ.
ರಾಜೀವ್ ಗಾಂಧಿ ಸುಪ್ರೀಂಕೋರ್ಟ್ ತೀರ್ಪನ್ನೇ ವಜಾ ಮಾಡಿದ್ದನ್ನು ನೆನಪಿಸಿಕೊಳ್ಳಲಿ: ಬಿಜೆಪಿ ಮತ್ತು ಆರೆಸ್ಎಸ್ ಮಹಿಳೆಯರನ್ನು ಮನೆಯಲ್ಲಿಯೇ ನಿರ್ಬಂಧಿಸುವ, ಅಡುಗೆ ಮನೆಗೆ ಸೀಮಿತಗೊಳಿಸುವ ಉದ್ದೇಶ ಹೊಂದಿದೆ ಎಂಬ ಹೇಳಿಕೆ ಟೀಕಿಸಿದ ಕೇಂದ್ರ ಜವಳಿ ಸಚಿವ ಗಿರಿರಾಜ್ ಸಿಂಗ್, ಶಾ ಬಾನು ಪ್ರಕರಣದಲ್ಲಿ ಹೇಗೆ ಸುಪ್ರೀಂ ಕೋರ್ಟ್ ವರದಿಯನ್ನು ಮಾಜಿ ಪ್ರಧಾನಿ ರಾಹುಲ್ ಗಾಂಧಿ ವಜಾ ಮಾಡಿದರು ಎಂಬುದನ್ನು ನೆನಪಿಸಿಕೊಳ್ಳುವಂತೆ ತಿಳಿಸಿದರು.
ಆರೆಸ್ಎಸ್ ಪಾತ್ರ ತಿಳಿಯಬೇಕಾದರೆ, ಇತಿಹಾಸದ ಪುಟ ತಿರುವಿ ಹಾಕಬೇಕು. ಇದನ್ನು ತಿಳಿಯಲು ರಾಹುಲ್ ಗಾಂಧಿಗೆ ಹಲವು ವರ್ಷಗಳೇ ಬೇಕಾಗಬಹುದು. ರಾಹುಲ್ ಭಾರತವನ್ನು ಅವಮಾನ ಮಾಡಲು ವಿದೇಶಕ್ಕೆ ಪ್ರಯಾಣಿಸಿದಂತೆ ಕಾಣುತ್ತದೆ ಎಂದು ಟೀಕಿಸಿದರು.
ಟೆಕ್ಸಾಸ್ನಲ್ಲಿ ಭಾರತೀಯ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ್ದ ರಾಹುಲ್ ಗಾಂಧಿ, ಭಾರತ ರಾಜಕೀಯದಲ್ಲಿ ಪ್ರೀತಿ, ಗೌರವ, ನಮ್ರತೆ ಕಣರೆಯಾಗಿದೆ ಎಂದು ಟೀಕಿಸಿದ್ದರು. ಅಷ್ಟೇ ಅಲ್ಲ ನಿರುದ್ಯೋಗ ಸೇರಿದಂತೆ ಹಲವು ವಿಚಾರಗಳ ಕುರಿತು ಮಾತನಾಡಿದ್ದರು.