ಬೆಂಗಳೂರು,ನ.11- ತಮ ಪುನರಾವರ್ತಿತ ವೈಫಲ್ಯಗಳ ನಂತರ, ರಫೇಲ್ ಹಗರಣ ಮತ್ತು ಚೌಕಿದಾರ್ ಚೋರ್ ಹೈ ನಿರೂಪಣೆಯಿಂದ ಜಾತಿ ರಾಜಕೀಯ ಮತ್ತು ಸುಳ್ಳು ಪ್ರಚಾರದವರೆಗೆ, ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಈಗ ಭಾರತದ ಯುವಕರನ್ನು ತಮ ರಾಜಕೀಯ ಸಾಧನವಾಗಿ ಬಳಸಲು ಯತ್ನಿಸುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಭಾರತದ ಯುವ ಪೀಳಿಗೆಯು ವಿಭಜಕ, ಆಧಾರರಹಿತ ಮತ್ತು ದೂರದೃಷ್ಟಿಯಿಲ್ಲದ ರಾಜಕೀಯವನ್ನು ಮೀರಿ ಸಾಗಿದೆ. ನವಭಾರತದ ಯುವಕರು ಕಾರ್ಯಕ್ಷಮತೆ, ಪ್ರಗತಿ ಮತ್ತು ದೇಶಭಕ್ತಿಯಲ್ಲಿ ನಂಬುತ್ತಾರೆ, ಪಿತೂರಿ ಸಿದ್ಧಾಂತಗಳಲ್ಲಿ ಅಲ್ಲ. ರಾಹುಲ್ ಗಾಂಧಿಯವರ 100 ಚುನಾವಣಾ ಸೋಲುಗಳ ದಾಖಲೆಯು ಭಾರತದ ಜನರನ್ನು ಮತ್ತು ವಿಶೇಷವಾಗಿ ಯುವಕರನ್ನು ಇನ್ನು ಮುಂದೆ ತಪ್ಪುದಾರಿಗೆ ಎಳೆಯಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.
ರಾಹುಲ್ ಗಾಂಧಿಯವರು ಮಹೇವಪುರ ಮತ್ತು ಆಳಂದ ಮಾತ್ರವಲ್ಲದೆ ರಾಜ್ಯಾದ್ಯಂತ ಮತ್ತು ರಾಷ್ಟ್ರಮಟ್ಟದಲ್ಲೂ ಇಡೀ ರಾಜ್ಯ ಚುನಾವಣೆಯನ್ನು ಕದ್ದಿದ್ದಾರೆ ಎಂದು ಹೇಳುವ ಮೂಲಕ ಮತ್ತೊಮೆ ರಾಷ್ಟ್ರವನ್ನು ದಾರಿತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ಇಂತಹ ಹೇಳಿಕೆಗಳು ಆಧಾರರಹಿತವಾಗಿರುವುದು ಮಾತ್ರವಲ್ಲದೆ ಭಾರತದ ಪ್ರಜಾಸತ್ತಾತಕ ಸಂಸ್ಥೆಗಳ ಮೇಲಿನ ಸಾರ್ವಜನಿಕ ನಂಬಿಕೆಯನ್ನು ಕುಗ್ಗಿಸುವ ಗುರಿ ಹೊಂದಿದೆ.
ಮತದಾರರ ಪಟ್ಟಿಯಲ್ಲಿ ವೃದ್ಧೆಯ ಹೆಸರು 220 ಬಾರಿ ಕಾಣಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ. ಆದಾಗ್ಯೂ ಅವರು ಉಲ್ಲೇಖಿಸಿದ ಮತದಾರರ ಪಟ್ಟಿಯು ಮುಲಾನಾ ಅಸೆಂಬ್ಲಿ ಕ್ಷೇತ್ರಕ್ಕೆ ಸೇರಿದೆ. ಇದನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ವತಃ ಗೆದ್ದಿದೆ. ಇದು ಸುಳ್ಳು ಮತ್ತು ವಾಸ್ತವಿಕ ನಿಖರತೆಯ ಕೊರತೆಯನ್ನು ಸ್ಪಷ್ಟವಾಗಿ ಬಹಿರಂಗಪಡಿಸುತ್ತದೆ.
ತಮ ಮೂರನೇ ಹೇಳಿಕೆಯಲ್ಲಿ, ಬ್ಯಾಲೆಟ್ ಪೇಪರ್ಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸುತ್ತಿದೆ. ಆದರೆ ಅಂತಿಮ ಫಲಿತಾಂಶದಲ್ಲಿ ಸೋತಿದೆ ಎಂದು ಆರೋಪಿಸಿದ್ದಾರೆ. ಆದಾಗ್ಯೂ ಹರಿಯಾಣದಲ್ಲಿ ಬ್ಯಾಲೆಟ್ ಪೇಪರ್ಗಳು ಒಟ್ಟು ಮತಗಳ ಶೇ.0.57ರಷ್ಟು ಮಾತ್ರವೇ ಎಂಬುದು ಸತ್ಯ. ರಾಹುಲ್ ಗಾಂಧಿಗೆ, ಇವಿಎಂಗಳ ಮೂಲಕ ತಮ ಹಕ್ಕನ್ನು ಚಲಾಯಿಸಿದ ಉಳಿದ 99.43% ಮತದಾರರಿಗಿಂತ 0.57% ಅಭಿಪ್ರಾಯವು ಹೆಚ್ಚು ಮಹತ್ವದ್ದಾಗಿದೆ.
2015ರಲ್ಲಿ ಬಿಹಾರ ಅಸೆಂಬ್ಲಿ ಚುನಾವಣೆ ಸಂದರ್ಭದಲ್ಲಿ ಇದೇ ರೀತಿಯ ಪರಿಸ್ಥಿತಿಯು ಸಂಭವಿಸಿತು. ಮತಪತ್ರ ಎಣಿಕೆಯ ಸಮಯದಲ್ಲಿ ಬಿಜೆಪಿ ಮತ್ತು ಎನ್ಡಿಎ ಮುನ್ನಡೆ ಸಾಧಿಸಿತು, ಆದರೆ ಅಂತಿಮವಾಗಿ ಮಹಾಘಟಬಂಧನ್ ಅನುಕೂಲಕರ ಅಂತರದಿಂದ ಗೆದ್ದಿತು. ಆಗ ವೋಟ್ ಚೋರಿ ಎಂಬ ಯಾವುದೇ ಆರೋಪಗಳನ್ನು ಮಾಡಲಿಲ್ಲ.
2024ರ ಅಕ್ಟೋಬರ್ 6ರಂದು ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರು ನೀಡಿದ ಹೇಳಿಕೆಯನ್ನು ರಾಹುಲ್ ಗಾಂಧಿ ತಿರುಚಿದ್ದಾರೆ. ಅವರು ವ್ಯವಸ್ಥಾ ಪದವನ್ನು ಸಿಎಂ ಬಳಸಿರುವುದನ್ನು ವೋಟ್ ಚೋರಿ ಎಂದು ಉಲ್ಲೇಖಿಸಿದ್ದಾರೆ. ವಾಸ್ತವದಲ್ಲಿ ಚುನಾವಣೋತ್ತರ ಮೈತ್ರಿಯ ಸಂದರ್ಭದಲ್ಲಿ ಸಿಎಂ ಮಾತನಾಡುತ್ತಿರುವುದು ಅವರ ಪತ್ರಿಕಾಗೋಷ್ಠಿಯ ಪೂರ್ಣ, ಎಡಿಟ್ ಮಾಡದ ವೀಡಿಯೋದಿಂದ ಸ್ಪಷ್ಟವಾಗಿದೆ.
ವಿಪರ್ಯಾಸವೆಂದರೆ 2019 ಮತ್ತು 2024ರ ಸಾರ್ವತ್ರಿಕ ಚುನಾವಣೆಗಳ ಸಂದರ್ಭದಲ್ಲಿ ಯಾವುದೇ ವಾಸ್ತವಿಕ ಆಧಾರವಿಲ್ಲದೆ ಇಂತಹ ಹೇಳಿಕೆಗಳನ್ನು ನೀಡುತ್ತಾ, ವಾರಣಾಸಿಯಿಂದ ಪ್ರಧಾನಿ ಸೋಲುತ್ತಾರೆ ಎಂದು ಸ್ವತಃ ರಾಹುಲ್ ಗಾಂಧಿ ಅವರೇ ಆಗಾಗ ಹೇಳಿಕೊಂಡಿದ್ದಾರೆ.
ಹರಿಯಾಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಒಟ್ಟು ಮತ ಹಂಚಿಕೆಯಲ್ಲಿ ಕೇವಲ 1.18 ಲಕ್ಷ ಮತಗಳ ವ್ಯತ್ಯಾಸವಿದ್ದು, ಒಟ್ಟು 22,779 ಮತಗಳಿಂದ ಕಾಂಗ್ರೆಸ್ ಎಂಟು ಸ್ಥಾನಗಳನ್ನು ಕಳೆದುಕೊಂಡಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಅವರು ಇದನ್ನು ಅವ್ಯವಹಾರದ ಪುರಾವೆಯಾಗಿ ಪ್ರಸ್ತುತಪಡಿಸಿದರು. ಆದಾಗ್ಯೂ ನಿಕಟ ಅಂತರಗಳು ಪ್ರತಿ ಚುನಾವಣೆಯ ಭಾಗವಾಗಿದೆ ಎಂಬುದು ಸತ್ಯ. ಹರಿಯಾಣದ ಹತ್ತು ಕ್ಷೇತ್ರಗಳ ವಿಶ್ಲೇಷಣೆಯು ಕಡಿಮೆ ಅಂತರದಲ್ಲಿ ಕಾಂಗ್ರೆಸ್ 6ರಲ್ಲಿ ಗೆದ್ದಿದ್ದರೆ, ಬಿಜೆಪಿ 3ರಲ್ಲಿ ಮಾತ್ರ ಗೆದ್ದಿದೆ. ಆದ್ದರಿಂದ ಕಿರಿದಾದ ಗೆಲುವುಗಳು ಯಾವುದೇ ಒಂದು ಪಕ್ಷಕ್ಕೆ ಮಾತ್ರ ಸೀಮಿತವಾಗಿಲ್ಲ.
