ಬೆಂಗಳೂರು, ಆ.8- ಮತಗಳ್ಳತನದ ಕುರಿತಂತೆ ಕಳೆದ 15 ದಿನಗಳಿಂದ ನಡೆಯುತ್ತಿದ್ದ ಬಿರುಸಿನ ಚರ್ಚೆಯ ತಾರ್ಕಿಕ ಘಟ್ಟವಾಗಿ, ಇಂದು ಬೆಂಗಳೂರಿನಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ರಾಜ್ಯ ಸರ್ಕಾರದ ಸಚಿವರು, ಕಾಂಗ್ರೆಸ್‌ನ ಪ್ರಮುಖ ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ನಿನ್ನೆ ದೆಹಲಿಯಲ್ಲಿ ರಾಹುಲ್‌ಗಾಂಧಿ ಪತ್ರಿಕಾಗೋಷ್ಠಿ ನಡೆಸಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ಮತಗಳನ್ನು 5 ಮಾದರಿಯಲ್ಲಿ ಕಳ್ಳತನ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಇದಕ್ಕೆ ಪೂರಕವಾಗಿ ದಾಖಲೆಗಳನ್ನು ಬಿಡುಗಡೆ ಮಾಡಿ, ಮಾಧ್ಯಮಗೋಷ್ಠಿಯಲ್ಲಿ ಸಮಗ್ರ ವಿವರಣೆಯನ್ನು ನೀಡಿದರು. ತಕ್ಷಣವೇ ಇದಕ್ಕೆ ಪ್ರತಿಕ್ರಿಯಿಸಿದ ಚುನಾವಣಾ ಆಯೋಗ ರಾಹುಲ್ ಗಾಂಧಿ ಅವರಿಗೆ ಕೆಲ ಪ್ರಶ್ನೆಗಳನ್ನು ಕೇಳಿ, ಸ್ಪಷ್ಟನೆ ನೀಡುವಂತೆ ಸೂಚಿಸಿದೆ. ಪತ್ರಿಕಾಗೋಷ್ಠಿಯಲ್ಲಿ ರಾಹುಲ್‌ಗಾಂಧಿ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮತಗಳ್ಳತನವಾಗಿದೆ ಎಂದರು. ಆಯಾ ರಾಜ್ಯಗಳ ಚುನಾವಣಾ ಆಯೋಗದ ಮುಖ್ಯಾಧಿಕಾರಿಗಳು ರಾಹುಲ್‌ಗಾಂಧಿ ಅವರಿಗೆ ಪತ್ರ ಬರೆದು ತಾವು ಮಾಡಿರುವ ಆರೋಪಗಳನ್ನು ದೃಢೀಕೃತ ನಮೂನೆಯಲ್ಲಿ ಸಲ್ಲಿಸುವಂತೆ ಸೂಚಿಸಿದ್ದಾರೆ.
ಒಂದು ವೇಳೆ ದೃಢಿಕೃತ ನಮೂನೆಯಲ್ಲಿ ಮಾಡಲಾದ ಆರೋಪಗಳು ಸಾಬೀತು ಅಗದೆ ಇದ್ದರೆ ಜನ ಪ್ರಾತಿನಿಧ್ಯ ಕಾಯ್ದೆ ಮತ್ತು ಬಿಎನ್‌ಎಸ್‌ನ ವಿವಿಧ ಸೆಕ್ಷನ್‌ಗಳ ಅಡಿ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಮುಖ್ಯಾ ಚುನಾವಣಾಧಿಕಾರಿಗಳು ನೀಡಿದ್ದಾರೆ.
ಕಾಂಗ್ರೆಸ್‌ನ ನಿಯೋಗ ನಿನ್ನೆ ಚುನಾವಣಾ ಆಯೋಗಕ್ಕೆ ಆಗಮಿಸಿ, ರಾಹುಲ್‌ಗಾಂಧಿ ಅವರ ಭೇಟಿಗೆ ಆ. 8ರಂದು ಮಧ್ಯಾಹ್ನ 1ಗಂಟೆಯಿಂದ 3 ಗಂಟೆಯವರೆಗೆ ಸಮಯ ಕೇಳಿದೆ. ಇದಕ್ಕೆ ಚುನಾವಣಾ ಅಯೋಗದ ಮುಖ್ಯಾಧಿಕಾರಿಗಳು ಸಹಮತ ಸೂಚಿಸಿದ್ದಾರೆ. ಆಯೋಗಕ್ಕೆ ರಾಹುಲ್‌ಗಾಂಧಿ ಭೇಟಿ ನೀಡಿದ ವೇಳೆಯಲ್ಲಿ ದೃಢೀಕೃತ ನಮೂನೆಯ ಪ್ರಮಾಣ ಪತ್ರಕ್ಕೆ ಸಹಿ ಹಾಕುವಂತೆ ಗಂಭೀರ ಸಲಹೆ ನೀಡಲಾಗಿದೆ. ಆಯೋಗದ ಒತ್ತಾಯಕ್ಕೆ ನಿನ್ನೆಯೇ ಪ್ರತ್ಯುತ್ತರಿಸಿರುವ ರಾಹುಲ್‌ಗಾಂಧಿ ನಾನು ಚುನಾಯಿತ ಪ್ರತಿನಿಧಿ, ನನ್ನ ಮಾತುಗಳೇ ವಾಗ್ದಾನ. ಹೊಸದಾಗಿ ದೃಢೀಕೃತ ನಮೂನೆಗೆ ಸಹಿ ಹಾಕುವ ಅಗತ್ಯವಿಲ್ಲ ಎಂದಿದ್ದಾರೆ.

ಇಂದು ಬೆಂಗಳೂರಿನ ಫ್ರೀಡಂಪಾಕ್‌ನಲ್ಲಿ ಮಾತನಾಡಿದ ರಾಹುಲ್‌ಗಾಂಧಿ, ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಮ ಆರೋಪಗಳನ್ನು ಪುನರುಚ್ಚರಿಸಿರುವ ಅವರು, ದೇಶದಲ್ಲಿ ಸಂವಿಧಾನ ಹಾಗೂ ಚುನಾವಣಾ ವ್ಯವಸ್ಥೆಗೆ ಅಪಾಯ ಎದುರಾಗಿದೆ ಎಂದು ಗಂಭೀರ ಎಚ್ಚರಿಕೆ ನೀಡಿದ್ದಾರೆ.