ವಯನಾಡ್ (ಕೇರಳ), ಫೆ 18 (ಪಿಟಿಐ) : ಕಾಂಗ್ರೆಸ್ ರಾಷ್ಟ್ರೀಯ ನಾಯಕ ಮತ್ತು ವಯನಾಡ್ ಸಂಸದ ರಾಹುಲ್ ಗಾಂಧಿ ಅವರು ಈ ಹೈರೇಂಜ್ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಕಾಡಾನೆ ದಾಳಿಗೆ ಬಲಿಯಾಗಿದ್ದ ಇಬ್ಬರ ಮನೆಗಳಿಗೆ ಇಂದು ಭೇಟಿ ನೀಡಿ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ತಮ್ಮ ಲೋಕಸಭಾ ಕ್ಷೇತ್ರದಲ್ಲಿನ ಮಾನವ-ಪ್ರಾಣಿ ಸಂಘರ್ಷಗಳಿಗೆ ಪರಿಹಾರಕ್ಕೆ ಆಗ್ರಹಿಸಿ ಸ್ಥಳೀಯರ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಯವರು ನಿನ್ನೆ ರಾತ್ರಿ ತಮ್ಮ ಭಾರತ್ ಜೋಡೋ ನ್ಯಾಯಯಾತ್ರೆಯನ್ನು ವಾರಣಾಸಿಯಲ್ಲಿ ಹಠಾತ್ತನೆ ಸ್ಥಗಿತಗೊಳಿಸಿ ನೆರೆಯ ಕಣ್ಣೂರು ಜಿಲ್ಲೆಗೆ ಆಗಮಿಸಿದರು.
ಕಣ್ಣೂರಿನಿಂದ ರಸ್ತೆ ಮಾರ್ಗವಾಗಿ ವಯನಾಡಿಗೆ ತೆರಳಿದ ಅವರ ಜೊತೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮತ್ತು ಇತರ ಸ್ಥಳೀಯ ಮುಖಂಡರಿದ್ದರು. ಕಳೆದ ವಾರ ವಯನಾಡ್ ಜಿಲ್ಲೆಯ ಮನಂತವಾಡಿ ಪ್ರದೇಶದಲ್ಲಿ ರೇಡಿಯೋ ಕಾಲರ್ ಆನೆ ತುಳಿದು ಸಾವನ್ನಪ್ಪಿದ ಅಜಿ (42) ಅವರ ಮನೆಯಲ್ಲಿ ರಾಹುಲ್ ಗಾಂಧಿ 20 ನಿಮಿಷವಿದ್ದು, ಕುಟುಂಬದ ಸದಸ್ಯರ ನೋವನ್ನು ಆಲಿಸಿ ಸಾಂತ್ವನ ಹೇಳಿದರು.
ಬಳಿಕ ಶುಕ್ರವಾರ ಕುರುವ ದ್ವೀಪದ ಬಳಿ ಕಾಡಾನೆ ದಾಳಿಗೆ ಬಲಿಯಾದ ಅರಣ್ಯ ಇಲಾಖೆಯ ಪರಿಸರ ಪ್ರವಾಸೋದ್ಯಮ ಮಾರ್ಗದರ್ಶಕ ಪಾಲ್ ಅವರ ನಿವಾಸಕ್ಕೆ ಭೇಟಿ ನೀಡಿದ ಅವರು ಕುಟುಂಬದವರ ಸಂಕಷ್ಟವನ್ನು ಆಲಿಸಿ ಸಾಂತ್ವನ ಹೇಳಿ ತೆರಳಿದರು.
ಮಧ್ಯಾಹ್ನ ಅಲಹಾಬಾದ್‍ಗೆ ತೆರಳುವ ಮೊದಲು ಕಲ್ಪೆಟ್ಟಾದಲ್ಲಿರುವ ಪಿಡಬ್ಲ್ಯುಡಿ ವಿಶ್ರಾಂತಿ ಗೃಹದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಜಾ ನುವಾರು ಮತ್ತು ಮನುಷ್ಯರ ಮೇಲೆ ವನ್ಯ ಜೀವಿಗಳ ದಾಳಿಗಳು ಇತ್ತೀಚೆಗೆ ವಯನಾಡಿನಿಂದ ಆಗಾಗ್ಗೆ ವರದಿಯಾಗುತ್ತಿವೆ. ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕಾಡು ಪ್ರಾಣಿಗಳ ದಾಳಿಯನ್ನು ವಿರೋಸಿ ವಿವಿಧ ರಾಜಕೀಯ ಪಕ್ಷಗಳು ಕರೆ ನೀಡಿದ್ದ ಪ್ರತಿಭಟನೆ ಶನಿವಾರ ಇಲ್ಲಿ ಹಿಂಸಾಚಾರಕ್ಕೆ ತಿರುಗಿತು.