ಬೆಂಗಳೂರು,ಜೂ.7-ಬಿಜೆಪಿ ನಾಯಕರು ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯ ವಿಚಾರಣೆಗೆ ಕಾಂಗ್ರೆಸ್‌ನ ವರಿಷ್ಠ ನಾಯಕ ರಾಹುಲ್ ಗಾಂಧಿ ಇಂದು ನಗರದ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರಾಗಿದ್ದಾರೆ. ನಿಯಮಗಳು ಎರಡು ಬಾರಿ ರಾಹುಲ್ ಗಾಂಧಿ ವಿಚಾರಣೆಗೆ ಗೈರು ಹಾಜರಾಗಿದ್ದರು. ಖುದ್ದು ಹಾಜರಾಗುವಂತೆ ನ್ಯಾಯಾಧೀಶರು ಸೂಚಿಸಿದ ಹಿನ್ನಲೆಯಲ್ಲಿ ಇಂದು ಬೆಳಗ್ಗೆ ದೆಹಲಿಯಿಂದ ಆಗಮಿಸಿದ್ದ ರಾಹುಲ್ ಗಾಂಧಿ ನ್ಯಾಯಾಲಯಕ್ಕೆ ಹಾಜರಾದರು.
42ನೇ ಎಸಿಎಂಎಂ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶರು ಅವರಿಗೆ ಜಾಮೀನು ಮಂಜೂರು ಮಾಡಿ, ಮುಂದಿನ ವಿಚಾರಣೆಯನ್ನು ಜುಲೈ 30ಕ್ಕೆ ಮುಂದೂಡಿದ್ದಾರೆ.ರಾಹುಲ್ ಗಾಂಧಿ ಆಗಮನದ ಹಿನ್ನಲೆಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಿಟಿ ಸಿವಿಲ್ ಕೋರ್ಟ್‌ವರೆಗೂ ವ್ಯಾಪಕ ಭದ್ರತೆಯನ್ನು ಒದಗಿಸಲಾಗಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸಿಂಗ್ ಸುರ್ಜೆವಾಲ, ಕೆ.ಸಿ.ವೇಣುಗೋಪಾಲ್ ಸೇರಿದಂತೆ ಅನೇಕರು ರಾಹುಲ್ ಗಾಂಧಿ ಅವರ ಜೊತೆ ಕೋರ್ಟ್‌ಗೆ ಆಗಮಿಸಿದ್ದರು. ವಿಚಾರಣೆಯಲ್ಲಿ ರಾಹುಲ್ ಗಾಂಧಿಗೆ ಮಾಜಿ ಸಂಸದ ಡಿ.ಕೆ.ಸುರೇಶ್ ಅವರು 70 ಲಕ್ಷ ರೂ. ಮೌಲ್ಯದ ಆಸ್ತಿಯ ವೈಯಕ್ತಿಕ ಬಾಂಡ್‌ನ ಭದ್ರತೆ ಒದಗಿಸಿದ್ದಾರೆ.