ಶಿವಮೊಗ್ಗ,ಮೇ.1- ಕಾಂಗ್ರೆಸ್ ವರಿಷ್ಠ ನಾಯಕ ರಾಹುಲ್‌ಗಾಂಧಿ ನಾಳೆ ಶಿವಮೊಗ್ಗಕ್ಕೆ ಆಗಮಿಸಲಿದ್ದು, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ ಸೇರಿದಂತೆ ಹಲವು ಕ್ಷೇತ್ರಗಳ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನಟ ಡಾ.ಶಿವರಾಜ್‌ಕುಮಾರ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಶಿವಮೊಗ್ಗದಲ್ಲಿ ಈಗಾಗಲೇ ಚುನಾವಣಾ ಪ್ರಚಾರ ವ್ಯವಸ್ಥಿತವಾಗಿ ನಡೆದಿದೆ. ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಹೆಚ್ಚನ ಒಗ್ಗಟ್ಟು ಕಂಡುಬರುತ್ತಿದೆ. ಶಿವಮೊಗ್ಗ ನಗರ ಸೇರಿದಂತೆ ಎಲ್ಲಾ ಕಡೆಯೂ ಜನಬೆಂಬಲ ವ್ಯಾಪಕವಾಗಿದೆ. ಈ ಮೊದಲು ಭಾಷಣ ಕೇಳಿ ಜನ ಮತ ಹಾಕುತ್ತಿದ್ದು, ಈಗ ಪರಿಸ್ಥಿತಿ ಬೇರೆ ಇದೆ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಮಾತ್ರ ಮತಗಳಿಕೆ ಸಾಧ್ಯವಾಗಲಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರ ಹತಾಶ ಹೇಳಿಕೆಯನ್ನು ನೋಡಿದರೆ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ಗೆ ಉತ್ತಮ ಫಲಿತಾಂಶ ಬರುವ ಸಾಧ್ಯತೆಯಿದೆ. ಮೋದಿಯವರು ವೈಯಕ್ತಿಕ ಟೀಕೆಗಳು ಸತ್ಯಕ್ಕೆ ದೂರವಾದ ಹೇಳಿಕೆಗಳ ಮೂಲಕ ಜನರನ್ನು ಸೆಳೆಯುವ ಯತ್ನ ನಡೆಸುತ್ತಿದ್ದಾರೆ. ಅವರ ಈ ಪ್ರಯತ್ನದಲ್ಲಿ ಸೋಲಿನ ಸುಳಿವು ಕಾಣುತ್ತಿದೆ ಎಂದರು.
ತಮ್ಮ ಸಹೋದರ ಕುಮಾರ್ ಬಂಗಾರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಮಧು ಬಂಗಾರಪ್ಪ, ಇಷ್ಟು ದಿನ ಅವರು ಎಲ್ಲಿದ್ದರು? ವಿಧಾನಸಭೆ ಚುನಾವಣೆಯಲ್ಲಿ ಏಕೆ ಸೋಲು ಕಂಡರು? ಎಂಬ ಎರಡು ಪ್ರಶ್ನೆಗಳಿಗೆ ಜನರಿಗೆ ಉತ್ತರ ಹೇಳಲಿ. ನಾನು ಕೆಸರಿನ ಮೇಲೆ ಕಲ್ಲು ಹಾಕುವುದಿಲ್ಲ ಎಂದು ತಿರುಗೇಟು ನೀಡಿದರು.