Thursday, November 6, 2025
Homeರಾಜ್ಯಮತಗಳ್ಳತನ ಬಗ್ಗೆ ರಾಹುಲ್‌ಗಾಂಧಿಯವರ ಆರೋಪ ಅಲ್ಲಗೆಳೆಯಲು ಸಾಧ್ಯವಿಲ್ಲ : ಪರಮೇಶ್ವರ್‌

ಮತಗಳ್ಳತನ ಬಗ್ಗೆ ರಾಹುಲ್‌ಗಾಂಧಿಯವರ ಆರೋಪ ಅಲ್ಲಗೆಳೆಯಲು ಸಾಧ್ಯವಿಲ್ಲ : ಪರಮೇಶ್ವರ್‌

Rahul Gandhi's allegations of vote rigging cannot be denied: Parameshwar

ಬೆಂಗಳೂರು, ನ.6- ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ಟನ್‌ಗಟ್ಟಲೇ ದಾಖಲಾತಿಗಳನ್ನು ಪ್ರದರ್ಶಿಸಿ ಮತಗಳ್ಳತನ ಬಗ್ಗೆ ಆರೋಪ ಮಾಡಿದ್ದಾರೆ. ಅದನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್‌ಗಾಂಧಿ ಕಾಟಚಾರಕ್ಕೆ ಹೇಳಿಕೆ ನೀಡಿಲ್ಲ. ಎಲ್ಲಾ ರೀತಿಯ ದಾಖಲಾತಿಗಳನ್ನು ಬಹಿರಂಗ ಪಡಿಸಿದ್ದಾರೆ. ಮತಗಳ್ಳತನವಾಗಿರುವುದಂತು ನಿಜ ಎಂದರು.

ಚಿತ್ತಾಪುರದಲ್ಲಿ ಆರ್‌ಎಸ್‌‍ಎಸ್‌‍ ಪಥ ಸಂಚಲನಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್‌ ತೆಗೆದುಕೊಳ್ಳುವ ತೀರ್ಮಾನವನ್ನು ಕಾದು ನೋಡುತ್ತಿದ್ದೇವೆ ಎಂದರು.ಕಬ್ಬು ಬೆಳೆಗಾರರು ಪ್ರತಿವರ್ಷ ಬೆಲೆಯ ವಿಚಾರವಾಗಿ ಪ್ರತಿಭಟನೆ ಮಾಡುತ್ತಿರುತ್ತಾರೆ. ಈ ವರ್ಷವೂ ಮಹಾರಾಷ್ಟ್ರದ ಮಾದರಿಯಲ್ಲಿ ದರ ನೀಡಲು ಒತ್ತಾಯಿಸುತ್ತಿದ್ದಾರೆ. ಮಹಾರಾಷ್ಟ್ರ ಕಬ್ಬಿಗೆ ಇಳುವರಿ ಹೆಚ್ಚಿದೆ. ನಮಲ್ಲಿನ ಕಬ್ಬು ಇಳುವರಿ ಆಧರಿಸಿ ದರ ನಿಗದಿ ಪಡಿಸುತ್ತಿದ್ದಾರೆ. ರೈತರೊಂದಿಗೆ ಚರ್ಚಿಸಲು ಸಾಕಷ್ಟು ಪ್ರಯತ್ನಗಳಾಗಿವೆ. ಆದರೆ ಸಂಧಾನ ವಿಫಲವಾಗಿದೆ. ಕಾನೂನು ಸಚಿವ ಎಚ್‌.ಕೆ.ಪಾಟೀಲ್‌ ನಿನ್ನೆ ಸ್ಥಳಕ್ಕೆ ತೆರಳಿದ್ದರು. ಇಂದು ಸಂಪುಟದಲ್ಲಿ ಚರ್ಚಿಸಲಾಗುತ್ತಿದೆ ಎಂದರು.

ರೈತರೊಂದಿಗೆ ಸಂಯಮದಿಂದ ವರ್ತಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ಕಳೆದ ಬಾರಿ ವಿಧಾನಸೌಧದ ಮುಂದೆ ನಡೆದ ಪ್ರತಿಭಟನೆಯಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು. ಈ ಬಾರಿ ಅಂತಹ ಬೆಳವಣಿಗೆಗೆ ಅವಕಾಶ ನೀಡಬಾರದು ಎಂದು ಪೊಲೀಸರಿಗೆ ಸೂಚಿಸಲಾಗಿದೆ. ಸಂಪುಟದಲ್ಲಿ ಬೆಲೆ ಪರಿಷ್ಕರಣೆಯ ಬಗ್ಗೆ ಚರ್ಚಿಸುವುದಾಗಿಯೂ ಹೇಳಿದರು.

ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುಮಕೂರಿನಲ್ಲಿ ಮಾಜಿ ಸಚಿವ ಕೆ.ಎನ್‌.ರಾಜಣ್ಣ ಅವರ ಮನೆಯಲ್ಲಿ ಊಟ ಮಾಡಲಿದ್ದು, ನಾವೆಲ್ಲರೂ ಜೊತೆಗೂಡಲಿದ್ದೇವೆ. ಅಲ್ಲಿ ಬೇರೆ ರಾಜಕೀಯ ಚರ್ಚೆಗಳಾಗುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.ಸಿದ್ದರಾಮಯ್ಯ ಅವರು 5 ಬಾರಿ ತುಮಕೂರಿಗೆ ಆಗಮಿಸಿದ್ದಾರೆ ಅದರಲ್ಲಿ 3 ಬಾರಿ ರಾಜಣ್ಣ ಅವರ ಮನೆಯಲ್ಲಿ ಊಟ ಮಾಡಿದ್ದಾರೆ. ನಾಳೆ ಅವರ ಮನೆಗೆ ಭೇಟಿ ನೀಡುವ ಬಗ್ಗೆಯೂ ಎಲ್ಲಾ ಮುಖಂಡರ ಅಭಿಪ್ರಾಯವನ್ನು ಸಿದ್ದರಾಮಯ್ಯ ಕೇಳಿದ್ದರು ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ದೆಹಲಿ ಭೇಟಿಗೂ, ರಾಜಕೀಯಕ್ಕೂ ಸಂಬಂಧವಿಲ್ಲ. ಜಲಾನಯನ ಇಲಾಖೆ ಸಂಬಂಧಪಟ್ಟಂತ ನ್ಯಾಯಾಲಯದ ಪ್ರಕರಣ ಕುರಿತು ಚರ್ಚಿಸಲು ದೆಹಲಿಗೆ ಹೋಗುತ್ತಿದ್ದೇನೆ ಎಂದು ಹೇಳಿಯೇ ಹೋಗಿದ್ದಾರೆ. ಅದರಲ್ಲಿಯೂ ರಾಜಕೀಯ ಹುಡುಕುವುದು ಸರಿಯಲ್ಲ ಎಂದರು.

ತಮಗೆ ಅವಶ್ಯಕತೆ ಇದ್ದರೆ ಮಾತ್ರ ದೆಹಲಿ ಭೇಟಿ ನೀಡುತ್ತೇನೆ. ಅನಗತ್ಯವಾಗಿ ಹೋಗುವುದಿಲ್ಲ. ನಮ ಇಲಾಖೆಗೆ ವಿಶೇಷ ಅನುದಾನಕ್ಕಾಗಿ ಬೇಡಿಕೆ ಸಲ್ಲಿಸುವುದಾದರೆ ಹೋಗುವುದು ಸಹಜ. 5 ಸಾವಿರ ಪೊಲೀಸರ ಮನೆಗಳಿಗೆ ಅನುದಾನ ನೀಡುವಂತೆ ಕೇಂದ್ರ ಗೃಹ ಸಚಿವರಲ್ಲಿ ಈ ಮೊದಲು ಮನವಿ ಮಾಡಿದ್ದೆ. ಅವರಿಂದ ಯಾವುದೇ ಪ್ರತಿಕ್ರಿಯೆಗಳು ಬಂದಿಲ್ಲ. ಅಕ್ಬರ್‌ ರಸ್ತೆಯಲ್ಲಿ ನಮಗೆ ಯಾವುದೇ ಕೆಲಸಗಳಿಲ್ಲ ಎಂದು ತಿಳಿಸಿದರು.

ಧರ್ಮಸ್ಥಳ ಪ್ರಕರಣ ಕುರಿತು ತನಿಖೆ ನಡೆಸಿರುವ ಎಸ್‌‍ಐಟಿ ಅಧಿಕಾರಿಗಳು ವರದಿ ನೀಡಲು ತಾಂತ್ರಿಕ ಕಾರಣದಿಂದಾಗಿ ವಿಳಂಬವಾಗಿದೆ. ಅಕ್ಟೋಬರ್‌ ತಿಂಗಳ ಕೊನೆಯಲ್ಲಿ ಅಥವಾ ನವೆಂಬರ್‌ ತಿಂಗಳ ಮೊದಲ ವಾರದಲ್ಲಿ ವರದಿ ನೀಡಬೇಕಿತ್ತು. ಕೆಲವು ಮಾದರಿಗಳನ್ನು ಭಾರತೀಯ ವಿಜ್ಞಾನ ಸಂಸ್ಥೆಗೆ ಮತ್ತು ಎಫ್‌ಎಸ್‌‍ಎಲ್‌ಗೆ ಕಳುಹಿಸಲಾಗಿದೆ. ಅಲ್ಲಿನ ವರದಿ ಬರಬೇಕು. ಅದನ್ನು ವಿಶ್ಲೇಷಿಸಿ ವರದಿಯಲ್ಲಿ ಸೇರಿಸಬೇಕಿದೆ. ಅದಕ್ಕಾಗಿ ಸಮಯವಕಾಶ ಕೇಳಿದ್ದಾರೆ. ಬಹುತೇಕ ಎಲ್ಲವೂ ಮುಗಿದಿದೆ ಎಂದರು.

ಒಳ ಮೀಸಲಾತಿಯ ಸಂಬಂಧಪಟ್ಟಂತೆ ಸಚಿವ ಸಂಪುಟಕ್ಕೆ ಕರಡು ಮಸೂದೆಯನ್ನು ಮಂಡಿಸಿದರೆ ಮುಂದಿನ ಬೆಳಗಾವಿ ಅಧಿವೇಶನದಲ್ಲಿ ಮಂಡನೆಯಾಗಲಿದೆ ಎಂದರು. ಬೆಂಗಳೂರು ನಗರದಲ್ಲಿ ಶಾಸಕರ ಬೇಡಿಕೆ ಆಧಾರಿತವಾಗಿ ಪೊಲೀಸ್‌‍ ಅಧಿಕಾರಿಗಳ ವರ್ಗಾವಣೆಯನ್ನು ತಡೆ ಹಿಡಿದಿದ್ದಾರೆ. ಉಳಿದಂತೆ ರಾಜ್ಯಾದ್ಯಂತ ಎಲ್ಲಾ ಅಧಿಕಾರಿಗಳ ವರ್ಗಾವಣೆ ಪೂರ್ಣಗೊಂಡಿದೆ ಎಂದರು.

ಕಾಂಗ್ರೆಸ್‌‍ ಭವನ ನಿರ್ಮಾಣಕ್ಕಾಗಿ ನಿಗದಿ ಪಡಿಸಿದ ಜಮೀನಿಗೆ ಜಿಲ್ಲಾ ನ್ಯಾಯಾಲಯದಲ್ಲಿ ತಡೆಯಾಜ್ಞೆ ದೊರೆತಿದೆ. ಆದರೆ ಅರ್ಜಿದಾರರ ಬಳಿ ಜಮೀನಿನ ಒಡೆತನಕ್ಕೆ ಸಂಬಧಪಟ್ಟಂತೆ ಯಾವುದೇ ದಾಖಲಾತಿಗಳಿಲ್ಲ. ತಡೆಯಾಜ್ಞೆ ತೆರವಿಗೆ ಸಂಬಂಧಪಟ್ಟಂತೆ ಮೇಲನವಿಗೆ ಸಲ್ಲಿಸಲಾಗುವುದು. ಕಟ್ಟಡ ನಿರ್ಮಾಣಕ್ಕೂ ಚಾಲನೆ ನೀಡಲಾಗುವುದು ಎಂದರು.

RELATED ARTICLES

Latest News