ಗುವಾಹಟಿ , ಜ.14- ದೇಶದ ಪ್ರತಿಯೊಬ್ಬರನ್ನು ತಲುಪುವ ಮಹಾ ಉದ್ದೇಶದೊಂದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದಿನಿಂದ 2ನೇ ಹಂತದ ಭಾರತ್ ಜೋಡೋ ನ್ಯಾಯ ಯಾತ್ರೆ ಆರಂಭಿಸಿದ್ದಾರೆ. ಅನ್ಯಾಯದ ವಿರುದ್ಧ ನ್ಯಾಯಕ್ಕಾಗಿ ಹೋರಾಟ ಎಂಬ ಘೋಷಣೆಯೊಂದಿಗೆ ಆರಂಭಗೊಂಡಿರುವ ಯಾತ್ರೆ ಪ್ರತಿಯೊಬ್ಬ ಭಾರತೀಯನನ್ನು ತಲುಪುವ ಜೊತೆಗೆ ನ್ಯಾಯದ ಹಕ್ಕು ಸಿಗುವವರೆಗೆ ಹೋರಾಟ ಇರಲಿದೆ ಎಂದು ಕಾಂಗ್ರೆಸ್ ತಿಳಿಸಿದೆ.
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕ ಸಚಿವರು, ವಿವಿಧ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು, ಶಾಸಕಾಂಗ ಪಕ್ಷಗಳ ನಾಯಕರು, ಸಂಸದರು, ಪಕ್ಷ ಅಧಿಕಾರದಲ್ಲಿ ಇರುವ ಕಡೆಗಳಲ್ಲಿನ ಸಚಿವರು, ಪ್ರಮುಖ ನಾಯಕರು ಯಾತ್ರೆಯ ಉದ್ಘಾಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ.
ದೆಹಲಿಯಿಂದ ವಿಮಾನದಲ್ಲಿ ಒಟ್ಟಾಗಿ ಪ್ರಯಾಣಿಸಿದ ಪ್ರಮುಖ ನಾಯಕರು, ನಾವು ಹೆದರುವುದಿಲ್ಲ, ಸರ್ವಾಧಿಕಾರಿ ಹಾಗೂ ಆನ್ಯಾಯಕಾರಿ ಆಡಳಿತವನ್ನು ಮಣಿಸುತ್ತೇವೆ. ಗೆಲ್ಲುವವರೆಗೂ ಹೋರಾಡುತ್ತೇವೆ ಎಂದು ಘೋಷಣೆ ಕೂಗುವ ಮೂಲಕ ನವಚೈತನ್ಯ ಒಗ್ಗೂಡಿಸಿಕೊಂಡಿದ್ದಾರೆ. ವಿವಿಧ ರಾಜ್ಯಗಳಲ್ಲೂ ಭಾರತ್ ಜೋಡೋ ನ್ಯಾಯ ಯಾತ್ರೆಯ ಸ್ಟಿಕರ್‍ಗಳು ಕಾರು ಸೇರಿದಂತೆ ವಾಹನಗಳ ಮೇಲೆ ರಾರಾಜಿಸಲಾರಂಭಿಸಿವೆ. ಖುದ್ದು ಪ್ರಮುಖ ನಾಯಕರೇ ಯಾತ್ರೆ ಸ್ಟಿಕರ್‍ಗಳನ್ನು ಅಂಟಿಸುವ ಮೂಲಕ ಪ್ರಚಾರಕ್ಕೆ ಮುನ್ನುಡಿ ಬರೆಸಿದ್ದಾರೆ.
ರಾಮಮಂದಿರ ನಿರ್ಮಾಣಕ್ಕೆ ಶೇ.74 ಮುಸ್ಲಿಮರ ಒಪ್ಪಿಗೆ ; MRM
ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳ ಮುನ್ನಾ ಶುರುವಾಗಿರುವ ಈ ಯಾತ್ರೆ ರಾಜಕೀಯ ಬದಲಾವಣೆಗೆ ಕಾರಣವಾಗಲಿದೆ ಎಂಬ ವಿಶ್ಲೇಷಣೆಗಳು ನಡೆದಿವೆ. ಈ ಮೊದಲು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಕಾಲ್ನಡೆಗೆ ಜಾಥ ನಡೆಸಿದ್ದ ರಾಹುಲ್‍ಗಾಂ ಪಕ್ಷಕ್ಕೆ ಹೊಸ ಉತ್ಸಾಹ ತುಂಬಿದ್ದರು. ಈಗ ಎರಡನೇ ಸುತ್ತಿನಲ್ಲಿ ಮಣಿಪುರದ ತೌಬಲ್‍ನಲ್ಲಿ ಆರಂಭವಾದ ಯಾತ್ರೆಯು 15 ರಾಜ್ಯಗಳು, 100 ಲೋಕಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿದೆ.
ರಾಹುಲ್ ಗಾಂಧಿ ನೇತೃತ್ವದ ಯಾತ್ರೆಯು ಸೈದ್ಧಾಂತಿಕ ಸಂಘರ್ಷವೇ ಹೊರತು ಚುನಾವಣಾ ಯಾತ್ರೆಯಲ್ಲ ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ನರೇಂದ್ರ ಮೋದಿ ಸರ್ಕಾರದ 10 ವರ್ಷಗಳ ಅನ್ಯಾಯ ಕಾಲ ವಿರುದ್ಧ ಹೋರಾಟವಾಗಿದೆ. 67 ದಿನಗಳಲ್ಲಿ 110 ಜಿಲ್ಲೆಗಳ ಮೂಲಕ 6,700 ಕಿಲೋಮೀಟರ್ ದೂರವನ್ನು ರಾಹುಲ್‍ಗಾಂಧಿ ಕ್ರಮಿಸಲಿದ್ದಾರೆ. ಈಶಾನ್ಯ ರಾಜ್ಯಗಳಿಂದ ಆರಂಭಗೊಂಡು, ಉತ್ತರ ಮತ್ತು ಮಧ್ಯ ಭಾಗದ ಮೂಲಕ ಮಾರ್ಚ್ 20 ರಂದು ಮಹಾರಾಷ್ಟ್ರದಲ್ಲಿ ಮುಕ್ತಾಯಗೊಳ್ಳಲಿದೆ.
ಯೋಗಿ ಆದಿತ್ಯನಾಥ್‍ರ ಆಡಳಿತದಲ್ಲಿರುವ ಹಾಗೂ ರಾಮಮಂದಿರದಿಂದ ಜಾಗತಿಕ ಗಮನ ಸೆಳೆದಿರುವ ಉತ್ತರ ಪ್ರದೇಶದಲ್ಲಿ ಯಾತ್ರೆ ಗರಿಷ್ಠ ಅವಧಿಯನ್ನು ಕಳೆಯಲಿದೆ. ಉತ್ತರ ಪ್ರದೇಶದ 20 ಜಿಲ್ಲೆಗಳಲ್ಲಿ 11 ದಿನಗಳಲ್ಲಿ 1,074 ಕಿಮೀ ಕ್ರಮಿಸುತ್ತದೆ. ಅಮೇಥಿ, ರಾಯ್ ಬರೇಲಿಯ ಗಾಂಧಿ ಕುಟುಂಬದ ಭದ್ರಕೋಟೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಕ್ಷೇತ್ರವಾದ ವಾರಣಾಸಿ ಸೇರಿದಂತೆ ರಾಜಕೀಯವಾಗಿ ಪ್ರಮುಖ ಪ್ರದೇಶಗಳನ್ನು ಉತ್ತರ ಪ್ರದೇಶ ಹೊಂದಿದೆ. 80 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವುದರಿಂದ ಆ ರಾಜ್ಯವನ್ನು ಕೇಂದ್ರಿಕರಿಸಲಾಗಿದೆ ಎಂಬ ವಿವರಣೆಗಳಿವೆ.
ನಂತರ ಜಾರ್ಖಂಡ್, ಅಸ್ಸಾಂನಲ್ಲಿ ಎಂಟು ದಿನ, ಮಧ್ಯಪ್ರದೇಶದಲ್ಲಿ ಏಳು ದಿನ ಕಳೆಯಲಿದೆ. ಬಿಹಾರದ ಏಳು ಜಿಲ್ಲೆಗಳು ಮತ್ತು ಜಾರ್ಖಂಡ್‍ನ 13 ಜಿಲ್ಲೆಗಳಲ್ಲಿ ರಾಹುಲ್ ಗಾಂಧಿ ಅವರ ಪಾದಯಾತ್ರೆ ಕ್ರಮವಾಗಿ 425 ಕಿಮೀ ಮತ್ತು 804 ಕಿಮೀ ಕ್ರಮಿಸಲಿದೆ.
ಬಹುತೇಕ ಬಸ್‍ಗಳಲ್ಲಿ ಮತ್ತು ಕೆಲವೆಡೆ ಕಾಲ್ನಡಿಗೆಯಲ್ಲಿ ಯಾತ್ರೆ ಸಾಗಲಿದೆ. ಇದು ಸುಮಾರು 100 ಲೋಕಸಭಾ ಸ್ಥಾನಗಳು ಮತ್ತು 337 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಕಾಂಗ್ರೆಸ್ ಪಕ್ಷದ ಮಹತ್ವಾಕಾಂಕ್ಷೆಯ ಯಾತ್ರೆಯು ಭೌಗೋಳಿಕ ವ್ಯತ್ಯಾಸಗಳನ್ನು ಒಳಗೊಳ್ಳಲು ಮತ್ತು ನೆಲದ ಮೇಲಿನ ಸಮುದಾಯಗಳೊಂದಿಗೆ ಸಂಪರ್ಕ ಸಾಧಿಸುವ ಗುರಿಯನ್ನು ಹೊಂದಿದೆ ಎಂದು ಪಕ್ಷವು ಮೊದಲು ಹೇಳಿದೆ.
ಇಂಫಾಲ್ ಬದಲಿಗೆ ತೌಬಲ್ ಜಿಲ್ಲೆಯ ಖಾಸಗಿ ಮೈದಾನದಿಂದ ಯಾತ್ರೆಯನ್ನು ಆರಂಭಿಸಲಾಗುತ್ತಿದೆ. ಬಿಜೆಪಿ ನೇತೃತ್ವದ ಮಣಿಪುರ ಸರ್ಕಾರವು ರಾಜ್ಯ ರಾಜಧಾನಿ ಇಂಫಾಲ್‍ನ ಅರಮನೆ ಮೈದಾನದಿಂದ ಯಾತ್ರೆಯನ್ನು ಆರಂಭಿಸಬೇಕಾದರೆ ಷರತ್ತುಗಳನ್ನು ಪಾಲನೆ ಮಾಡಬೇಕು, ಇಂತಿಷ್ಟೆ ಸಂಖ್ಯೆಯಲ್ಲಿ ಯಾತ್ರೆಯಲ್ಲಿ ಭಾಗವಹಿಸಬೇಕು ಎಂಬ ಷರತ್ತು ವಿಧಿಸಿತ್ತು. ಹೀಗಾಗಿ ಇಂಪಾಲ್ ಬದಲಿಗೆ ತೌಬಲ್ ಪ್ರದೇಶವನ್ನು ಕಾಂಗ್ರೆಸ್ ಆಯ್ಕೆ ಮಾಡಿಕೊಂಡಿದೆ. ಅಲ್ಲಿಯೂ ಕೂಡ ಸಮಾವೇಶಗೊಳ್ಳುವವರ ಸಂಖ್ಯೆ ಮೂರು ಸಾವಿರ ಮೀರಬಾರದು ಎಂದು ಜಿಲ್ಲಾಡಳಿತ ತಿಳಿಸಿದೆ.
2023ರಿಂದ ಮೇ ತಿಂಗಳಿನಿಂದ ಈಶಾನ್ಯಅಸ್ಸಾಂ ಸುದೀರ್ಘವಾದ ಜನಾಂಗೀಯ ಹಿಂಸಾಚಾರದಿಂದ ನಲುಗಿದೆ. ಕುಕಿ ಮತ್ತು ಮೈಟೈ ಸಮುದಾಯಗಳ ನಡುವಿನ ಸಂಘರ್ಷದಿಂದಾಗಿ 180 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ, ನೂರಾರು ಜನರು ಗಾಯಗೊಂಡಿದ್ದಾರೆ. ಹಲವಾರು ಲೈಂಗಿಕ ದೌರ್ಜನ್ಯ ಪ್ರಕರಣಗಳು ಮತ್ತು ಘೋರ ಅಪರಾಧಗಳು ವರದಿಯಾಗಿವೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಶಾಶ್ವತ ಸ್ಥಾನ ಅಗತ್ಯ : ಲೆಟರ್ಮ್
ಇಂದು ಬೆಳಗ್ಗೆ ಯಾತ್ರೆಯನ್ನು ಪ್ರಾರಂಭಿಸುವ ಮೊದಲು ಗಾಂಧಿ 1891 ರಲ್ಲಿ ಕೊನೆಯ ಆಂಗ್ಲೋ-ಮಣಿಪುರ ಯುದ್ಧದಲ್ಲಿ ಹುತಾತ್ಮರಾದವರ ನೆನಪಿಗಾಗಿ ತೌಬಲ್‍ನಲ್ಲಿರುವ ಖೋಂಗ್‍ಜೋಮ್ ನಿರ್ಮಿಸಲಾದ ಯುದ್ಧ ಸ್ಮಾರಕದಲ್ಲಿ ಹುತಾತ್ಮರಿಗೆ ಗೌರವ ಸಲ್ಲಿಸಿದರು.
ಮಣಿಪುರದಿಂದ, ಯಾತ್ರೆಯು ನಾಗಾಲ್ಯಾಂಡ್‍ಗೆ ಮುಂದುವರಿಯುತ್ತದೆ, ಎರಡು ದಿನಗಳಲ್ಲಿ 257 ಕಿಮೀ ಮತ್ತು ಐದು ಜಿಲ್ಲೆಗಳನ್ನು ಕ್ರಮಿಸುತ್ತದೆ, ಮೊದಲು 833 ಕಿಮೀ ಮತ್ತು ಅಸ್ಸಾಂನ 17 ಜಿಲ್ಲೆಗಳನ್ನು ಕ್ರಮಿಸುತ್ತದೆ. ಇದು ಅರುಣಾಚಲ ಪ್ರದೇಶ ಮತ್ತು ಮೇಘಾಲಯದಲ್ಲಿ ತಲಾ ಒಂದು ದಿನ ಇರಲಿದೆ. ನಂತರ ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಒಡಿಶಾ, ಛತ್ತೀಸ್‍ಗಢ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರಕ್ಕೆ ಯಾತ್ರೆ ಸಾಗಲಿದೆ.
ಇಂಡಿಯಾ ರಾಜಕೀಯ ಕೂಟದ ಸಹವರ್ತಿಗಳೊಂದಿಗೆ ಸಭೆ ನಡೆಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಾಧ್ಯವಿರುವ ಕಡೆಗಳಲ್ಲಿ ಯಾತ್ರೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ.