ಇನ್ನು 3 ದಿನ ಮುಂದುವರೆಯಲಿರುವ ಮಳೆ..!

ಬೆಂಗಳೂರು,ಅ.5-ಮೇಲ್ಮೈ ಸುಳಿ ಗಾಳಿಯಿಂದಾಗಿ ರಾಜ್ಯದ ಹಲವೆಡೆ ಉತ್ತಮ ಮಳೆಯಾಗುತ್ತಿದ್ದು, ಇನ್ನು ನಾಲ್ಕೈದು ದಿನಗಳ ಕಾಲ ಇದೇ ರೀತಿ ಮಳೆ ಮುಂದುವರೆಯುವ ಮುನ್ಸೂಚನೆಗಳಿವೆ. ನೈರುತ್ಯ ಮುಂಗಾರು ಮುಂದುವರೆದಿದ್ದು, ಹಿಂಗಾರು ಮಳೆ ಆರಂಭವಾಗಲು ಇನ್ನು ಎರಡು ವಾರಗಳು ಬೇಕು ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ್ ರೆಡ್ಡಿ ತಿಳಿಸಿದರು.

ಈ ಸಂಜೆಯೊಂದಿಗೆ ಮಾತನಾಡಿದ ಅವರು, ನಿರಂತರವಾಗಿ ವಾತಾವರಣದಲ್ಲಿ ಬದಲಾವಣೆಯಾಗುತ್ತಿದ್ದು, ಮೇಲ್ಮೈ ಸುಳಿ ಗಾಳಿಯಿಂದ ಕಳೆದ ಕೆಲವು ದಿನಗಳಿಂದಲೂ ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾಗುತ್ತಿದೆ. ನಿನ್ನೆ ಕೂಡ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಪೂರ್ವ ಭಾಗದಲ್ಲಿ ಉತ್ತಮ ಮಳೆಯಾಗಿದೆ ಎಂದರು.

ಅಕ್ಟೋಬರ್ ತಿಂಗಳಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಮುನ್ಸೂಚನೆಗಳು ಕಂಡುಬರುತ್ತಿದ್ದು, ರಾಜ್ಯದ ಒಂದಲ್ಲ ಒಂದು ಕಡೆ ಈ ಮಾಸಾಂತ್ಯದವರೆಗೂ ಮಳೆ ಇದೇ ರೀತಿ ಮುಂದುವರೆಯಲಿದೆ ಎಂದು ಅವರು ತಿಳಿಸಿದರು.

ಸ್ಥಳೀಯ ಹವಾ ಮುನ್ಸೂಚನೆ ಪ್ರಕಾರ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಸಂಜೆ ಅಥವಾ ರಾತ್ರಿ ವೇಳೆ ಉತ್ತಮ ಮಳೆಯಾಗುವ ಸಾದ್ಯತೆಗಳಿವೆ ಎಂದರು.