ಬೆಂಗಳೂರು,ಮೇ 20– ಮಳೆಯಿಂದಾಗಿ ಭಾರೀ ಸಮಸ್ಯೆಗೀಡಾಗಿರುವ ಸಿಲ್ಕ್ ಬೋರ್ಡ್ ಸರ್ಕಲ್‌ನಲ್ಲಿ ಸ್ಥಳ ಪರಿಶೀಲನೆ ನಡೆಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಮೆಟ್ರೋ ಕಾಮಗಾರಿಯಿಂದಾಗಿ ನೀರಿನ ಹರಿವಿಗೆ ತಡೆಯುಂಟು ಮಾಡಲಾಗಿತ್ತು. ಕಳೆದ ವರ್ಷ ಇದೇ ಜಾಗದಲ್ಲಿ ಒಬ್ಬ ವ್ಯಕ್ತಿ ಮಳೆಯಿಂದಾಗಿ ಮೃತಪಟ್ಟಿದ್ದರು. ಆದರೂ ನೀವು ಎಚ್ಚೆತ್ತುಕೊಂಡಿಲ್ಲ. ನೀರಿನ ಹರಿವಿಗೆ ಅಡ್ಡಲಾಗಿರುವ ತಡೆಗಳನ್ನು ಏಕೆ ತೆರವು ಮಾಡಿಲ್ಲ. ಇದರಿಂದಾಗಿ ಜನ ಸಮಸ್ಯೆ ಅನುಭವಿಸುವಂತಾಗಿದೆ ಎಂದು ತರಾಟೆಗೆ ತೆಗೆದುಕೊಂಡರು. ತಕ್ಷಣವೇ ನೀರಿನ ಹರಿವು ಸರಾಗವಾಗಲು ರಾಜಕಾಲುವೆ, ಒಳಚರಂಡಿ ಹಾಗೂ ಇತರ ವ್ಯವಸ್ಥೆಗಳನ್ನು ಮುಕ್ತಗೊಳಿಸಬೇಕು ಎಂದು ಆದೇಶಿಸಿದರು.
ಸ್ಥಳೀಯ ಜನಪ್ರತಿನಿಧಿಗಳು ಮೆಟ್ರೋ ಅಧಿಕಾರಿಗಳ ವಿರುದ್ಧ ದೂರಿನ ಸರಮಾಲೆಯನ್ನೇ ಹೇಳಿದರು. ನೀರು ನಿಂತು ಪರದಾಡುತ್ತಿದ್ದರೆ ಮೆಟ್ರೋ ಅಧಿಕಾರಿಗಳು ಯಾವುದಕ್ಕೂ ಸ್ಪಂದಿಸುತ್ತಿಲ್ಲ. ಕೊನೆಗೆ ನಾವೇ ಜೆಸಿಬಿ ತಂದು ಅಡೆತಡೆಗಳನ್ನು ತೆರವು ಮಾಡಬೇಕಾದ ಪರಿಸ್ಥಿತಿಯಿದೆ. ಅದಕ್ಕೂ ಸಹಕಾರ ನೀಡುವುದಿಲ್ಲ. ಪೋನ್‌ಗೂ ಸಿಗುವುದಿಲ್ಲ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಒಂದು ಹಂತದಲ್ಲಿ ಸಿಟ್ಟಾದ ಸಚಿವ ರಾಮಲಿಂಗಾರೆಡ್ಡಿ, ಏನು ಕೆಲಸ ಮಾಡುತ್ತೀರ?, ನಿಮ ಉದ್ದೇಶಗಳೇನು?, ಕಾಮನ್‌ಸೆನ್‌್ಸ ಇಲ್ಲವೇ ಎಂದು ಕಿಡಿಕಾರಿದರು.ನಿಮ ಬೇಜವಾಬ್ದಾರಿ ಯಿಂದ ಒಬ್ಬ ವ್ಯಕ್ತಿ ಮೃತಪಟ್ಟ ಬಳಿಕವೂ ನೀವು ಎಚ್ಚೆತ್ತುಕೊಂಡಿಲ್ಲ ಎಂದರೆ ನಿಮ ಉದ್ದೇಶವೇನು?, ರಾಜಕಾಲುವೆಗಳನ್ನು ಅಡ್ಡ ಹಾಕಿ ಏಕೆ ತೊಂದರೆ ಕೊಡುತ್ತಿದ್ದೀರಾ ಎಂದು ಮೆಟ್ರೋ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.