ಬೆಂಗಳೂರು,ಮೇ 9- ಕಳೆದ ಐದಾರು ದಿನಗಳಿಂದ ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯಾಗುತ್ತಿದ್ದು, ಬಿಸಿ ಗಾಳಿ ಹಾಗೂ ಗರಿಷ್ಠ ತಾಪಮಾನ ಸ್ವಲ್ಪ ಕಡಿಮೆಯಾಗಿತ್ತು, ವಾತಾವರಣ ಸಹಜ ಸ್ಥಿತಿಯತ್ತ ಮರಳುತ್ತಿದೆ. ರಾಜ್ಯದಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಇನ್ನೂ ನಾಲ್ಕೈದು ದಿನಗಳ ಕಾಲ ಮಳೆ ಮುಂದುವರೆಯುವ ಸಾಧ್ಯತೆಗಳಿವೆ.
ಭರಣಿ ಮಳೆಯಾಗುತ್ತಿರುವುದರಿಂದ ತೀವ್ರ ಬರದಿಂದ ಕಂಗೆಟ್ಟಿದ್ದ ರೈತ ಸಮುದಾಯದಲ್ಲಿ ಮಂದಹಾಸ ಮೂಡಿದಂತಾಗಿದೆ. ಲಘು ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ರಾಜಧಾನಿ ಬೆಂಗಳೂರು, ರಾಮನಗರ, ಕೊಡಗು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಿದೆ. ಕೆಲವೆಡೆ ಗುಡುಗು, ಮಿಂಚಿನಿಂದ ಕೂಡಿದ ಮಳೆಯಾಗಿದ್ದರೆ, ಇನ್ನೂ ಕೆಲವೆಡೆ ಬಿರುಗಾಳಿಗೆ ಮರ ಹಾಗೂ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.
ಇದೇ ರೀತಿ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಮುಂದುವರೆಯಲಿದ್ದು, ಮೇ 12ರ ನಂತರ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬಿಸಿಲ ನಾಡೆಂದು ಬಿಂಬಿಸಿರುವ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿಯಲ್ಲಿ 41.2 ಡಿ.ಸೆಂ., ಬಾಗಲಕೋಟೆ, ರಾಯಚೂರುಗಳಲ್ಲಿ 40 ಡಿ.ಸೆಂ., ಬೆಂಗಳೂರು ನಗರದಲ್ಲಿ 34.2ಡಿ.ಸೆಂ.ನಷ್ಟು ಗರಿಷ್ಠ ತಾಪಮಾನ ನಿನ್ನೆ ದಾಖಲಾಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸರಾಸರಿಗಿಂತ ಮೂರ್ನಾಲ್ಕು ಡಿ.ಸೆಂ.ನಷ್ಟು ಗರಿಷ್ಠ ತಾಪಮಾನ ಹೆಚ್ಚಾಗಿತ್ತು. ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸುಮಾರು ನಾಲ್ಕು ಡಿ.ಸೆಂ.ನಷ್ಟು ಗರಿಷ್ಠ ತಾಪಮಾನದಲ್ಲಿ ಇಳಿಕೆಯಾಗಿರುವುದು ಕಂಡುಬಂದಿದೆ.
ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಜೆಲ್ಲೆಗಳ ಗರಿಷ್ಠ ತಾಪಮಾನ 35 ಡಿ.ಸೆಂ.ಗಿಂತ ಕಡಿಮೆ ದಾಖಲಾಗುತ್ತಿದೆ. ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜನರಿಗೆ ಮಳೆ ತಂಪೆರೆದಂತಾಗಿದೆ.