Friday, November 22, 2024
Homeರಾಜ್ಯಹಿಂಗಾರು ಚೇತರಿಕೆ : ರಾಜ್ಯದಲ್ಲಿ 10 ದಿನ ಮಳೆ ಸಾಧ್ಯತೆ

ಹಿಂಗಾರು ಚೇತರಿಕೆ : ರಾಜ್ಯದಲ್ಲಿ 10 ದಿನ ಮಳೆ ಸಾಧ್ಯತೆ

ಬೆಂಗಳೂರು, ನ.5-ಈಶಾನ್ಯ ಹಿಂಗಾರು ಮಳೆ ಚೇತರಿಕೆಯಾಗಿದ್ದು ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ಚದುರಿದಂತೆ ಮಳೆಯಾಗುತ್ತಿದೆ. ರಾಜಧಾನಿ ಬೆಂಗಳೂರು, ರಾಮನಗರ, ಮಂಡ್ಯ ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆಯಾಗಿದೆ. ನಿನ್ನೆ ಸಂಜೆ ಸುರಿದ ಮಳೆಗೆ ರಾಮನಗರದ ಬಳಿ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಗಳಲ್ಲಿನ ಅಂಡರ್ ಪಾಸ್‍ಗಳಲ್ಲಿ ನೀರು ನಿಂತು ವಾಹನ ಸವಾರರಿಗೆ ತೊಂದರೆ ಉಂಟಾಗಿತ್ತು.

ನಿನ್ನೆ ಸಂಜೆ ಹಾಗೂ ರಾತ್ರಿ ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಚದುರಿದಂತೆ ಮಳೆಯಾಗಿದೆ. ಹವಾಮಾನ ಮುನ್ಸೂಚನೆ ಪ್ರಕಾರ ಇನ್ನೂ ಐದುರಿಂದ ಹತ್ತು ದಿನಗಳ ಕಾಲ ರಾಜ್ಯದಲ್ಲಿ ಮಳೆ ಮುಂದುವರೆಯುವ ಸಾಧ್ಯತೆಗಳಿವೆ. ಅಕ್ಟೋಬರ್ ಕೊನೆಯ ವಾರದಲ್ಲಿ ಆರಂಭಗೊಂಡ ಹಿಂಗಾರು ದುರ್ಬಲವಾಗಿತ್ತು. ಇದರಿಂದ ರಾಜ್ಯದಲ್ಲಿ ಮಳೆ ಕೊರತೆ ಉಂಟಾಗಿತ್ತು. ನವೆಂಬರ್ ಒಂದರಿಂದ ಈ ತನಕ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.

ಮುಂಗಾರಿನಂತೆ ಹಿಂಗಾರು ಕೈಕೊಟ್ಟಿದೆ ಎಂದು ಜನರು ಅದರಲ್ಲೂ ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಕಳೆದ ಎರಡು ದಿನಗಳಿಂದ ಕೆಲವೆಡೆ ಉತ್ತಮ ಮಳೆ ಹಾಗೂ ಉಳಿದೆಡೆ ಹಗುರದಿಂದ ಸಾಧಾರಣ ಮಳೆಯಾಗುತ್ತಿರುವುದು ಸದ್ಯಕ್ಕೆ ನಿಟ್ಟುಸಿರು ಬಿಡುವಂತಾಗಿದೆ.

ವಾತಾವರಣದಲ್ಲಿ ಕೆಲವೊಂದು ಬದಲಾವಣೆಗಳಾಗಿರುವ ಹಿನ್ನೆಲೆಯಲ್ಲಿ ಹಿಂಗಾರು ಚೇತರಿಸಿಕೊಂಡಿದ್ದು, ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ಮುನ್ಸೂಚನೆಗಳು ಇವೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಂಸ್ಥಾಪಕ ಹಾಗೂ ನಿವೃತ್ತ ವಿಶೇಷ ನಿರ್ದೇಶಕ ವಿ.ಎಸ್.ಪ್ರಕಾಶ್ ಅವರು ತಿಳಿಸಿದರು.

ಅರಣ್ಯ ಸಿಬ್ಬಂದಿ-ಕಳ್ಳಬೇಟೆಗಾರರ ನಡುವೆ ಗುಂಡಿನ ಚಕಮಕಿ, ಒಬ್ಬ ಬೇಟೆಗಾರ ಸಾವು

ರಾಜ್ಯದಲ್ಲಿ ಮುಂದಿನ ಹತ್ತು ದಿನಗಳ ಕಾಲ ಸಾಧಾರಣ ಮಳೆಯಾಗುವ ಲಕ್ಷಣಗಳಿವೆ. ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮುಂದಿನ 5ದಿನಗಳ ಕಾಲ ಹೆಚ್ಚು ಮಳೆಯಾಗಲಿದೆ. ಐದು ದಿನಗಳ ನಂತರ ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ಅವರು ಹೇಳಿದರು. ಹಿಂಗಾರು ಮಳೆ ಮುಂದಿನ ಹತ್ತು ದಿನಗಳಲ್ಲಿ ರಾಜ್ಯದ ದಕ್ಷಿಣ ಒಳನಾಡಿನಲ್ಲಿ 75ರಿಂದ 100 ಮಿ.ಮೀ.ವರೆಗೂ ಮಳೆಯಾಗುವ ಸೂಚನೆಗಳಿವೆ.

ಉತ್ತರ ಒಳನಾಡಿನಲ್ಲಿ 16ರಿಂದಿ 65 ಮಿ.ಮೀ., ಕರಾವಳಿ 50-75 ಮಿ.ಮೀ. ಮಳೆಯಾಗಲಿದ್ದು, ಮಲೆನಾಡಿನಲ್ಲಿ 40ರಿದ 65 ಮಿ.ಮೀ.ನಷ್ಟು ಮಳೆಯಾಗುವ ಸಾಧ್ಯತೆಗಳಿವೆ ಎಂದು ಅವರು ವಿವರಿಸಿದರು.

ಉತ್ತರ ಕರ್ನಾಟಕದ ವಿಜಯಪುರ, ಬಾಗಲಕೋಟೆ ಭಾಗದಲ್ಲಿ ನಾಲ್ಕೈದು ದಿನಗಳ ನಂತರ ಉತ್ತಮ ಮಳೆಯಾಗುವ ಸಾಧ್ಯತೆಗಳಿವೆ. ತಡವಾಗಿ ಹಿಂಗಾರು ಚೇತರಿಸಿಕೊಂಡಿರುವುದರಿಂದ ಕಟಾವಿಗೆ ಬಂದಿರುವ ಬೆಳೆಗಳಿಗೆ ತೊಂದರೆಯಾಗಲಿದೆ. ನೀರಿನ ಅವಶ್ಯಕತೆ ಇದ್ದ ಬೆಳಗಳಿಗೆ ಅನುಕೂಲವಾಗಲಿದೆ. ಜಾನುವಾರಗಳ ಮೇವು, ಕುಡಿಯುವ ನೀರಿಗೂ ಸಹಕಾರಿಯಾಗಲಿದೆ ಎಂದರು.

RELATED ARTICLES

Latest News