ಬೆಂಗಳೂರು,ಮೇ 21- ಮಾನ್ಯತಾ ಟೆಕ್ ಪಾರ್ಕ್ ಬಳಿಯಲ್ಲಿ ರಾಜಕಾಲುವೆ ಒತ್ತುವರಿಯನ್ನು ಮುಲಾಜಿಲ್ಲದೆ ತೆರವು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಕೆ.ಜೆ.ಜಾರ್ಜ್, ಭೈರತಿ ಸುರೇಶ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ನಗರ ವೀಕ್ಷಣೆ ನಡೆಸಿದ ಮುಖ್ಯಮಂತ್ರಿಯವರು ನಾಗವಾರ ಜಂಕ್ಷನ್ ಬಳಿ ರಾಜಕಾಲುವೆ ಒತ್ತುವರಿಯಾಗಿರುವುದನ್ನು ಗಮನಿಸಿ ಅಧಿಕಾರಿಗಳನ್ನು ಪ್ರಶ್ನಿಸಿದರು.
ಮಾನ್ಯತಾ ಟೆಕ್ ಪಾರ್ಕ್ ಇಬ್ಕು ಮ್ಯಾನ್‌ಪ್ರೊ ಹಾಗೂ ಕಾರ್ಲೆ ಖಾಸಗಿ ಬಿಲ್ಡರ್‌ಗಳು ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಒತ್ತುವರಿ ತೆರವಿಗೆ ಯಾವ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು.
ಮೇ 7ರಿಂದ ನೋಟೀಸ್ ನೀಡಿರುವುದಾಗಿ ತಿಳಿಸಿದರು. ಇದರಿಂದ ಸಿಟ್ಟಾದ ಮುಖ್ಯಮಂತ್ರಿಯವರು ಒತ್ತುವರಿಯಾಗಿದ್ದರೂ ನೋಟೀಸ್ ನೀಡಿ ಸುಮನೇ ನೋಡುತ್ತಾ ಕುಳಿತಿದ್ದೀರ?, ಎಷ್ಟೇ ದೊಡ್ಡ ಬಿಲ್ಡರ್‌ಗಳಾದರೂ ಮುಲಾಜಿಲ್ಲದೆ ತೆರವು ಮಾಡಿ ಎಂದು ಸ್ಪಷ್ಟ ಆದೇಶ ನೀಡಿದರು.
ಯಲಹಂಕ ರಾಜಕಾಲುವೆ ಒತ್ತುವರಿಯಿಂದಾಗಿ ನೀರು ಸರಾಗವಾಗಿ ಹರಿಯದೆ ಜನವಸತಿ ಪ್ರದೇಶಗಳಿಗೆ ನುಗ್ಗುತ್ತಿದೆ. ಕಾನೂನು ಪ್ರತ್ಯಯಗಳನ್ನು ಜವಾಬ್ದಾರಿಯುತವಾಗಿ ನಿರ್ವಹಣೆ ಮಾಡಿ ಒತ್ತುವರಿಯನ್ನು ತೆರವು ಮಾಡಿ ಮತ್ತು ಒತ್ತುವರಿದಾರರ ಬಗ್ಗೆ ಕ್ರಮ ವಹಿಸಿ ಎಂದು ತಾಕೀತು ಮಾಡಿದ್ದಾರೆ.ಅಲ್ಲಿಂದ ಹೆಣ್ಣೂರು ರಸ್ತೆಗೆ ಆಗಮಿಸಿದ ಮುಖ್ಯಮಂತ್ರಿಯವರು ರಾಜಕಾಲುವೆ ಒತ್ತುವರಿಯನ್ನು ಪರಿಶೀಲಿಸಿದರು.
ಜನರಿಗೆ ತೊಂದರೆಯಾಗುತ್ತಿದ್ದರೂ ಅಧಿಕಾರಿಗಳು ಇಲ್ಲಸಲ್ಲದ ನೆಪ ಹೇಳಿ ಒತ್ತುವರಿಯನ್ನು ಉಳಿಸಿಕೊಂಡಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.ನಗರ ಪ್ರದಕ್ಷಿಣೆ ವೇಳೆ ಕೆಲವು ಸಾರ್ವಜನಿಕರು ಮಳೆನೀರಿನಿಂದ ತಮಗಾಗಿರುವ ತೊಂದರೆಗಳ ಬಗ್ಗೆ ಮುಖ್ಯಮಂತ್ರಿಯವರ ಬಳಿ ವಿವರಣೆ ನೀಡಿದರು.