Tuesday, September 17, 2024
Homeರಾಜ್ಯಮಳೆಗೆ ತತ್ತರಿಸಿದ ಕರಾವಳಿ, ಮಲೆನಾಡು : 2 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ

ಮಳೆಗೆ ತತ್ತರಿಸಿದ ಕರಾವಳಿ, ಮಲೆನಾಡು : 2 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ

ಬೆಂಗಳೂರು,ಜು.17- ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಎರಡು ದಿನಗಳಿಂದ ಕಾಣಿಸಿಕೊಂಡಿರುವ ಮುಂಗಾರು ಮಳೆಯಬ್ಬರ ಬುಧವಾರವೂ ಮುಂದುವರಿದಿದೆ. ಭಾರೀ ಮಳೆ, ಪ್ರವಾಹ ಹಾಗೂ ಗುಡ್ಡಕುಸಿತದಿಂದಾಗಿ ಉತ್ತರಕನ್ನಡ ಜಿಲ್ಲೆಯ ಜನಜೀವನ ಅಸ್ತವ್ಯಸ್ತಗೊಂಡಿದ್ದು, ನಿರಾಶ್ರಿತರಾಗಿರುವ 2 ಸಾವಿರಕ್ಕೂ ಹೆಚ್ಚು ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.

ಅಂಕೋಲಾ- ಶಿರೂರು ಹೆದ್ದಾರಿಯಲ್ಲಿ ಗುಡ್ಡ ಕುಸಿದ ಪ್ರಕರಣದಲ್ಲಿ ಇನ್ನೊಂದು ಅವಾಂತರ ಉಂಟಾಗಿದ್ದು, ಗುಡ್ಡ ಕುಸಿತದಿಂದ ಭಾರಿ ಪ್ರಮಾಣದ ಮಣ್ಣು ಗಂಗಾವಳಿ ನದಿಗೆ ಬಿದ್ದ ಪರಿಣಾಮ ನದಿ ಬದಿಯ ಉಳುವರೆ ಗ್ರಾಮಕ್ಕೂ ಭಾರೀ ಹಾನಿಯಾಗಿದೆ. ನೀರಿನ ರಭಸಕ್ಕೆ ಮೂರು ಮನೆಗಳು ನಾಶವಾಗಿ ಮಹಿಳೆಯೊಬ್ಬರು ಕೊಚ್ಚಿ ಹೋಗಿದ್ದಾರೆ. ಎನ್‌ಡಿಆರೆಫ್‌ ಹಾಗೂ ತಾಲೂಕು ಆಡಳಿತದಿಂದ ಮಹಿಳೆಗಾಗಿ ಶೋಧಕಾರ್ಯ ಆರಂಭವಾಗಿದೆ.

ಮನೆಯಲ್ಲಿದ್ದ ಸೀಥಿಗೌಡ (65) ಎಂಬ ವೃದ್ಧೆ ನಾಪತ್ತೆಯಾಗಿದ್ದಾರೆ. 14 ಜನರಿಗೆ ಗಾಯವಾಗಿದ್ದು, ಓರ್ವ ವ್ಯಕ್ತಿಯ ಸ್ಥೀತಿ ಚಿಂತಾಜನಕವಾಗಿದೆ. ಕಾರವಾರ ಜಿಲ್ಲೆಯ ಅಂಕೋಲ ತಾಲೂಕಿನ ಶಿರೂರು ಬಳಿ ಗುಡ್ಡ ಉಂಟಾದ ಗುಡ್ಡ ಕುಸಿತದಿಂದ 9 ಜನ ಮಣ್ಣಿನಡಿ ಸಿಲುಕಿದ್ದಾರೆ ಎಂದು ಹೇಳಲಾಗಿತ್ತು. ಮಾಹಿತಿಯ ಪ್ರಕಾರ ದುರ್ಘಟನೆಯಲ್ಲಿ 20ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಗುಡ್ಡದ ಕೆಳಗಿದ್ದ 2 ಮನೆಗಳು ಮತ್ತೊಂದು ಟೀ ಸ್ಟಾಲ್‌ ಧ್ವಂಸಗೊಂಡಿವೆ. ಒಂದು ಮನೆಯಲ್ಲಿದ್ದ ಪೂರ್ತಿ ಕುಟುಂಬ ಬಲಿಯಾಗಿದ್ದಾರೆ. ಎನ್‌ಡಿಅರ್‌ ಎಫ್‌ ತಂಡದ ಸಿಬ್ಬಂದಿ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ ಇದುವರೆಗೆ 5 ಮೃತದೇಹಗಳು ಪತ್ತೆಯಾಗಿವೆ. ಮತ್ತೊಂದು ಮನೆಯಲ್ಲಿದ್ದ 7 ಜನರ ಪೈಕಿ ಒಬ್ಬ ವೃದ್ಧೆ ಮಾತ್ರ ಸಾವನ್ನಪ್ಪಿದ್ದಾರೆ ಉಳಿದವರು ಬಚಾವಾಗಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಕಾರವಾರ, ಕುಮಟಾ ತಾಲೂಕುಗಳಲ್ಲಿ ತಲಾ 6 ಮತ್ತು ಹೊನ್ನಾವರ ತಾಲೂಕಿನಲ್ಲಿ 14 ಸೇರಿದಂತೆ ಒಟ್ಟು 26 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಇವುಗಳಲ್ಲಿ 2,368 ಮಂದಿಗೆ ಆಶ್ರಯ ಕಲ್ಪಿಸಲಾಗಿದೆ. ಕಾಳಜಿ ಕೇಂದ್ರಗಳನ್ನು ಆಶ್ರಯಿಸಿರುವ ಜನರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಊಟ, ವೈದ್ಯರ ತಂಡದಿಂದ ಆರೋಗ್ಯ ತಪಾಸಣೆ ಮತ್ತು ಅಗತ್ಯವಿರುವ ಔಷಧ ಸೌಲಭ್ಯ ನೀಡಲಾಗುತ್ತಿದೆ.

22 ಮನೆಗಳಿಗೆ ಹಾನಿ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 3 ಮನೆಗಳು ಪೂರ್ಣ ಹಾನಿಗೊಳಗಾಗಿವೆ. ಇನ್ನುಳಿದಂತೆ ಒಂದು ಮನೆಗೆ ತೀವ್ರ ಹಾನಿ ಹಾಗು 18 ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ಕಾರವಾರ ತಾಲೂಕಿನಲ್ಲಿ ಮನೆ ಕುಸಿದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಅಂಕೋಲ ತಾಲೂಕಿನ ಶಿರೂರು ಗ್ರಾಮದಲ್ಲಿ ಭೂ ಕುಸಿತ ಸಂಭವಿಸಿದೆ. ಈ ಪ್ರದೇಶದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣೆಯ 2 ತಂಡಗಳು ರಕ್ಷಣಾ ಕಾರ್ಯಚರಣೆ ನಡೆಸುತ್ತಿವೆ.

ಅಂಕೋಲಾದ ಶಿರೂರು ಗ್ರಾಮದಲ್ಲಿ ಸಂಭವಿಸಿರುವ ಭೂ ಕುಸಿತದ ವೇಳೆ ಎರಡು ಗ್ಯಾಸ್‌‍ ಟ್ಯಾಂಕರ್‌ಗಳು ಗಂಗಾವಳಿ ನದಿಗೆ ಉರುಳಿ ಬಿದ್ದಿವೆ. ಈ ಟ್ಯಾಂಕರ್‌ಗಳು ಸೋರಿಕೆಯಾಗುವ ಸಾಧ್ಯತೆ ಇದ್ದು, ನದಿ ದಡದಲ್ಲಿರುವ ಮನೆಗಳಲ್ಲಿ ವಾಸವಿರುವ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿದೆ. ಗುಡ್ಡ, ನದಿ, ಹಳ್ಳ, ಕೆರೆ ಸಮೀಪದಲ್ಲಿ ವಾಸಿಸುತ್ತಿರುವ ಜನ ಹಾಗೂ ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಭಾರೀ ಮಳೆ ಮುನ್ಸೂಚನೆ:
ರೆಡ್‌ ಅಲರ್ಟ್‌ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ, ಜಿಲ್ಲೆಯಲ್ಲಿ ನಾಳೆಯವರೆಗೆ ರೆಡ್‌ ಅಲರ್ಟ್‌ ಘೋಷಣೆಯಾಗಿದೆ.ಜಿಲ್ಲಾಧಿಕಾರಿ ಸೂಚನೆ: ಸಾರ್ವಜನಿಕರು ಯಾವುದೇ ಸಮಸ್ಯೆಗಳಿದ್ದಲ್ಲಿ ಜಿಲ್ಲಾಡಳಿತದ ಉಚಿತ ತುರ್ತು ಸಹಾಯವಾಣಿ ಸಂಖ್ಯೆ 1077 ಹಾಗೂ ಮೊಬೈಲ್‌ ಸಂಖ್ಯೆ ಸಂಖ್ಯೆ 9483511015 ಕರೆ, ಮೆಸೇಜ್‌, ವಾಟ್ಸಾಪ್‌ ಸಂದೇಶ ಅಥವಾ ವಾಟ್ಸಾಪ್‌ ಕರೆ ಮಾಡಿ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಲಕ್ಷೀಪ್ರಿಯಾ ತಿಳಿಸಿದ್ದಾರೆ.

ಹೆದ್ದಾರಿಗಳಲ್ಲಿ ಸಂಚಾರ ಅಸ್ತವ್ಯಸ್ತ: ಭಾರೀ ಮಳೆಗೆ ಜಿಲ್ಲೆಯ ಅಂಕೋಲಾ, ಕಾರವಾರ, ಕುಮಟಾ, ಹೊನ್ನಾವರ ಹಾಗೂ ಭಟ್ಕಳದಲ್ಲಿ ವ್ಯಾಪಕ ಹಾನಿ ಆಗಿದೆ. ಅಂಕೋಲಾ ಬಳಿ ಶಿರೂರಿನಲ್ಲಿ ಕಾರವಾರ- ಮಂಗಳೂರು ಚತುಷ್ಪಥ ಹೆದ್ದಾರಿ, ಕುಮಟಾ-ಹುಬ್ಬಳ್ಳಿ ಹೆದ್ದಾರಿಯ ರಾಗಿಹೊಸಳ್ಳಿ ಬಳಿ, ಹೊನ್ನಾವರ- ಬೆಂಗಳೂರು ಹೆದ್ದಾರಿಯಲ್ಲಿ ವರ್ನಕೆರೆ ಬಳಿ, ಕಾರವಾರ ಇಳಕಲ್‌ ಹೆದ್ದಾರಿಯಲ್ಲಿ ಕಡವಾಡ ಮಂದ್ರಾಳಿ ಬಳಿ ಗುಡ್ಡ ಕುಸಿದು ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.

ಇನ್ನು ಕಾರವಾರ-ಅಂಕೋಲಾ ನಡುವೆ ಅರಗಾ, ಚೆಂಡಿಯಾ ಹಾಗೂ ಅಮದಳ್ಳಿ ಬಳಿ ಚತುಷ್ಪಥ ಹೆದ್ದಾರಿ ಮೇಲೆ ನೀರು ನುಗ್ಗಿ ಸಂಚಾರ ಸ್ಥಗಿತಗೊಂಡಿದೆ. ಜಿಲ್ಲೆಯ ಪ್ರಮುಖ ನದಿಗಳಾದ ಅಘನಾಶಿನಿ, ಗಂಗಾವಳಿ, ಗುಂಡಬಾಳ, ಚಂಡಿಕಾ, ಭಾಸ್ಕರಿ, ಬಡ ಗಣಿ ಮತ್ತಿತರ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ.

ಶೃಂಗೇರಿಯಲ್ಲಿ ನೆರೆ:
ಚಿಕ್ಕಮಗಳೂರಿನ ಶೃಂಗೇರಿ ಪಟ್ಟಣ ತುಂಗಾ ಪ್ರವಾಹದಿಂದಾಗಿ ಜಲದಿಗ್ಧಂಧನಕ್ಕೊಳಗಾಗಿದೆ. ಇಲ್ಲಿನ ಕೆರೆಕಟ್ಟೆ, ಘಟ್ಟ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಾ ನದಿ ಅಬ್ಬರಕ್ಕೆ ಭಾರತಿ ತೀರ್ಥ ರಸ್ತೆ ಜಲಾವೃತವಾಗಿದ್ದು, ಪಟ್ಟಣದ ಗಾಂಧಿ ಮೈದಾನ ಸಂಪೂರ್ಣ ಮುಳುಗಡೆಯಾಗಿದೆ. ನದಿ ಪಾತ್ರದ ಅಂಗಡಿ ಮುಂಗಟ್ಟು, ಮನೆಗಳು ಜಲಾವೃತವಾಗಿವೆ. ಶೃಂಗೇರಿಯಲ್ಲಿ ನೆರೆ ಪರಿಸ್ಥಿತಿ ತಗ್ಗಿಲ್ಲ. ಭಾರತಿ ತೀರ್ಥ ರಸ್ತೆ ಮುಳುಗಡೆ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕೆ ಕ್ರಮವಾಗಿ ವಾಹನ ಸಂಚಾರ ನಿಷೇಧಿಸಲಾಗಿದೆ.

ದಾವಣಗೆರೆಯಲ್ಲೂ ಅಬ್ಬರ: ಮಲೆನಾಡಿನಲ್ಲಿ ಮಳೆಯ ಪ್ರಮಾಣ ಹೆಚ್ಚಾದ ಹಿನ್ನೆಲೆ ದಾವಣಗೆರೆ ಭಾಗದಲ್ಲಿ ತುಂಗಭದ್ರ ನದಿ ಉಕ್ಕಿ ಹರಿಯುತ್ತಿದೆ. ಪರಿಣಾಮ ಉಕ್ಕಡಗಾತ್ರಿ ದೇವಾಲಯದ ಸ್ನಾನ ಘಟ್ಟ ಹಾಗೂ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಮುಳುಗಡೆಯಾಗಿವೆ.
ತುಂಗಾ ನದಿಗೆ 75 ಸಾವಿರ ಕ್ಯೂಸೆಕ್‌ಗೂ ಹೆಚ್ಚು ನೀರು ಹೊರ ಬಿಡಲಾಗಿದ್ದು, ಹೊನ್ನಾಳಿ, ಹರಿಹರ ಸೇರಿದಂತೆ ನದಿ ಪಾತ್ರದ ಪ್ರದೇಶಗಳು ಮುಳುಗಡೆಯಾಗಿವೆ. ಉಕ್ಕಡಗಾತ್ರಿಗೆ ಪ್ರವೇಶ ಮಾಡುವ ಒಂದು ರಸ್ತೆ ಸಹ ಮುಳುಗಡೆಯಾಗಿದೆ. ಅಲ್ಲದೇ ದೇವಾಲಯದ ಮುಂಭಾಗದವರೆಗೂ ನೀರು ಬಂದಿದೆ.

ಉಕ್ಕಡಗಾತ್ರಿ ಭಾಗಕ್ಕೆ ಪ್ರವೇಶಿಸುವ ರಸ್ತೆಗೆ ಸೂಕ್ತ ಸೇತುವೆ ಮಾಡಿಸಿ ಎಂದು ದಶಕಗಳಿಂದ ಹೋರಾಟ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರತಿ ವರ್ಷ ನದಿಯಲ್ಲಿ ನೀರು ಹೆಚ್ಚಾದಾಗ ಎರಡು ರಸ್ತೆಗಳು ಬಂದ್‌ ಆಗಿ ಜನರಿಗೆ ತೊಂದರೆಯಾಗುತ್ತದೆ ಎಂದು ಜನ ಆಕ್ರೋಶ ಹೊರಹಾಕಿದ್ದಾರೆ.

ಮಳೆಯ ಅಬ್ಬರದಿಂದ ಹೊನ್ನಾಳಿ, ಹರಿಹರ ಸೇರಿದಂತೆ ಹಲವು ಕಡೆಗಳಲ್ಲಿ ವಸತಿ ಪ್ರದೇಶಕ್ಕೆ ನದಿಯ ನೀರು ನುಗ್ಗುವ ಆತಂಕ ಎದುರಾಗಿದೆ. ನದಿಯಲ್ಲಿ ಹೊರ ಹರಿವು ಕಡಿಮೆಯಾಗದಿದ್ದರೆ ಜನರನ್ನು ಸ್ಥಳಾಂತರ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.

RELATED ARTICLES

Latest News